ADVERTISEMENT

ಸಾಮೂಹಿಕ ವರ್ಗಾವಣೆಗೆ ಮನವಿ

ಡಿಎಆರ್‌ನಲ್ಲಿ ಭ್ರಷ್ಟಾಚಾರ, ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 20:01 IST
Last Updated 26 ನವೆಂಬರ್ 2015, 20:01 IST

ಮಂಡ್ಯ: ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಭ್ರಷ್ಟಾಚಾರ ಹಾಗೂ ಕಿರುಕುಳ ಹೆಚ್ಚಾಗಿದೆ.   ನಮ್ಮನ್ನು ಬೆಂಗಳೂರು ಹಾಗೂ ಮೈಸೂರಿಗೆ ವರ್ಗಾವಣೆ ಮಾಡಿಕೊಡಬೇಕು ಎಂದು ಪಡೆಯ 40 ಸಿಬ್ಬಂದಿ ರಾಜ್ಯಪಾಲರು, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ಗೃಹ ಸಚಿವರು ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಮೀಸಲು ಪಡೆಯಲ್ಲಿ ಆರ್‌ಪಿಐ ಆಗಿರುವ ಸೋಮಣ್ಣ ಹಾಗೂ ಸೋಮಶೇಖರ್‌ ಎಂಬುವವರು ರಜೆ ಹಾಗೂ ಕರ್ತವ್ಯ ನೇಮಕಕ್ಕೆ ಇಂತಿಷ್ಟು ಹಣ ನೀಡಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಹಣ ನೀಡದವರಿಗೆ ಕಿರುಕುಳ ನೀಡುತ್ತಾರೆ ಎಂದು ದೂರಿದ್ದಾರೆ.

ಅವರು ಕೇಳಿದಷ್ಟು ಹಣ ನಮ್ಮಲ್ಲಿಲ್ಲದ ಕಾರಣ ಇಲ್ಲಿ ಸಹಿ ಮಾಡಿರುವ ಪ್ರತಿಯೊಬ್ಬರಿಗೂ ಹತ್ತು ಸಾವಿರ ರೂಪಾಯಿ ಅನ್ನು ಸಂಬಳದ ಮುಂಗಡವಾಗಿ ಕೊಡಬೇಕು. ಪ್ರತಿ ತಿಂಗಳು ಹಣ ಕೊಡಬೇಕಾಗಿರುವುದರಿಂದ ಒಂದು ಸಾವಿರ ರೂಪಾಯಿ ಭತ್ಯೆ ಮಂಜೂರು ಮಾಡಿಕೊಡಿ ಎಂದು ಕೋರಿದ್ದಾರೆ.

ಪೊಲೀಸ್‌ ಇಲಾಖೆಯಂತಹ ಶಿಸ್ತಿನ ಇಲಾಖೆಯಲ್ಲಿ ಮೇಲಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ. ಈಗಾಗಲೇ ಇವರಿಬ್ಬರು ಕರ್ತವ್ಯ ದುರ್ಬಳಕೆ ಮಾಡಿಕೊಂಡ ಕುರಿತು ಹಲವಾರು ದೂರುಗಳನ್ನು ನೀಡಲಾಗಿದೆ. ಅವರು ಹೊಂದಿರುವ ರಾಜಕೀಯ ಪ್ರಭಾವದಿಂದ ಒತ್ತಡಕ್ಕೆ ಒಳಗಾಗಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರೂ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಕೂಡಲೇ ವರ್ಗಾವಣೆ ಮಾಡಿಕೊಡಿ. ಇಲ್ಲದಿದ್ದರೆ, ಆರ್ಥಿಕ ಧನಸಹಾಯ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 40 ಮಂದಿ ನೀಡಿರುವ ದೂರು ನಿನ್ನೆ ನನಗೂ ಬಂದಿದೆ. ಈ ಕುರಿತು ಶುಕ್ರವಾರ ನಾನೇ ಖುದ್ದಾಗಿ ವಿಚಾರಣೆ ನಡೆಸುತ್ತೇನೆ. ಅವರ ಸಮಸ್ಯೆಗಳನ್ನು ಆಲಿಸುತ್ತೇನೆ. ಯಾರಾದರೂ ತಪ್ಪಿತಸ್ಥರು ಎಂದು ಕಂಡುಬಂದರೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ ಬೊರಸೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಿಂದೆ ನೀಡಿದ್ದ ದೂರಿನ ಬಗೆಗೂ ಈಗಾಗಲೇ ತನಿಖೆ ನಡೆಸಿ ಐಜಿಪಿ ಅವರಿಗೆ ವರದಿ ಕಳುಹಿಸಲಾಗಿದೆ. ಅವರ ನಿರ್ದೇಶನದ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.