ADVERTISEMENT

ಸಾವು– ಬದುಕಿನ ನಡುವೆ ಒಂಟಿ ಸಲಗ

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಹೆತ್ತೂರು (ಹಾಸನ ಜಿಲ್ಲೆ): ಹೋಬಳಿಯ ಕಾಗಿನೆರೆ ಕೆಂಪುಹೊಳೆ ಗುಂಡ್ಯಾ ರಕ್ಷಿತಾರಣ್ಯದಲ್ಲಿ ಕಾದಾಟದಲ್ಲಿ ಗಾಯಗೊಂಡಿರುವ ಒಂಟಿ ಸಲಗವೊಂದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
 
ಸುಮಾರು 25 ವರ್ಷದ ಕಾಡಾನೆ ಒಂದು ವಾರದಿಂದ ಆಹಾರ ಸೇವಿಸಿಲ್ಲ. ಮೇಲ್ನೋಟಕ್ಕೆ ಯಾವುದೇ ಗಾಯ ಕಂಡು ಬಂದಿಲ್ಲ. ಆದರೆ, ಎಡಗಾಲನ್ನು ನೆಲದ ಮೇಲೆ ಇಡುತ್ತಿಲ್ಲ. ಮೂಳೆ ಮುರಿದಿರುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಅರಿವಳಿಕೆ ಚುಚ್ಚುಮದ್ದು ನೀಡಿ, ಆನೆ ಸೆರೆ ಹಿಡಿದು ಚಿಕಿತ್ಸೆ ನೀಡಬೇಕಿದೆ. ಆದರೆ, ಇದಕ್ಕೆ ಸರ್ಕಾರದ ಅನುಮತಿ ಬೇಕಿದೆ.
 
ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ.ಸಿಂಗ್, ‘ಅರಿವಳಿಕೆ ಚುಚ್ಚುಮದ್ದು ನೀಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಶೀಘ್ರ ಅನುಮತಿ ಸಿಗುವ ಸಾಧ್ಯತೆ ಇದೆ’ ಎಂದು ಹೇಳಿದರು.
 
‘ಕಾಲು ಊದಿಕೊಂಡಿದೆ. ನರ ಅಥವಾ ಮೂಳೆಗೆ ಗಾಯವಾಗಿರುವ ಸಾಧ್ಯತೆ ಇದೆ. ಎಕ್ಸ್ ರೇ ಮೂಲಕ  ಪರೀಕ್ಷಿಸಬೇಕಿರುವುದರಿಂದ ಅರಿವಳಿಕೆ ಚುಚ್ಚುಮದ್ದು ನೀಡಬೇಕಿದೆ. ಅರಣ್ಯ ಇಲಾಖೆಗೆ ಪ್ರಾಥಮಿಕ ವರದಿ ನೀಡಲಾಗಿದೆ’ ಎಂದು ಪಶು ವೈದ್ಯಾಧಿಕಾರಿ ಮುರುಳೀಧರ್ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.