ADVERTISEMENT

ಸಿಇಟಿ: ಸೀಟು ಪ್ರಮಾಣ, ಶುಲ್ಕ ಬದಲಾವಣೆ ಇಲ್ಲ

ಕಳೆದ ವರ್ಷದ ವ್ಯವಸ್ಥೆಯೇ ಮುಂದುವರಿಕೆ: ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 11:13 IST
Last Updated 20 ಏಪ್ರಿಲ್ 2014, 11:13 IST

ಬೆಂಗಳೂರು: ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಪದವಿ ಕೋರ್ಸ್‌ಗಳ ಶುಲ್ಕ ಮತ್ತು ಸೀಟು ಹಂಚಿಕೆ ಪ್ರಮಾಣ­ದಲ್ಲಿ ಈ ವರ್ಷ ಯಾವುದೇ ಬದಲಾವಣೆ ಮಾಡುವುದಿಲ್ಲ. ಕಳೆದ ವರ್ಷದಂತೆಯೇ ಈ ಸಲವೂ ಪ್ರವೇಶ ಪ್ರಕ್ರಿಯೆ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

ಸಿಇಟಿಗೆ ಸಂಬಂಧಿಸಿದಂತೆ ಶನಿವಾರ ವಿಧಾನಸೌಧದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಸಭೆ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಶುಲ್ಕ ಹೆಚ್ಚಳ ಮಾಡದೇ ಇರುವುದು ಮತ್ತು ಹಿಂದಿನ ವರ್ಷದ ಸೂತ್ರದ ಪ್ರಕಾರವೇ ಸೀಟು ಹಂಚಿಕೆ’   ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೇ ಈ ಕುರಿತು ಸ್ಪಷ್ಟವಾದ ತೀರ್ಮಾನಕ್ಕೆ ಬರ­ಲಾಗಿದೆ. ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆ ಸೂತ್ರದಲ್ಲಿ ಯಾವುದೇ ಬದ­ಲಾವಣೆ ಮಾಡುವುದಿಲ್ಲ ಎಂಬು­ದನ್ನು ಮುಖ್ಯಮಂತ್ರಿಯವರೇ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ  ಪ್ರತಿನಿಧಿ-­ಗಳಿಗೆ ತಿಳಿಸಿದ್ದಾರೆ’ ಎಂದು ವಿವರಿಸಿದರು.

ನಿಗದಿಯಂತೆ ಸಿಇಟಿ: ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ನಿಗದಿತ ದಿನಾಂಕದಲ್ಲೇ ನಡೆಯ­ಲಿದೆ.  ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ಅವರು ತಿಳಿಸಿದರು.

ಸರ್ಕಾರದ ಸಿಇಟಿಗಿಂತ ಮುಂಚಿತ­ವಾಗಿ ಕಾಮೆಡ್‌–ಕೆ ಸಿಇಟಿ  ನಡೆಯ­ಲಿದೆ ಎಂಬ ಆತಂಕಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಆ ರೀತಿ ಆಗಿಲ್ಲ. ಕಾಮೆಡ್‌–ಕೆ ವೈದ್ಯಕೀಯ ಸ್ನಾತ­ಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ನಡೆಸುತ್ತಿದೆ. ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಅಲ್ಲ’ ಎಂದು ಹೇಳಿದರು.

ಆದೇಶ ಪಾಲನೆ ಕಡ್ಡಾಯ: ‘ಡೀಮ್ಡ್‌ ವಿಶ್ವವಿದ್ಯಾಲಯಗಳು ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ನಿಗದಿತ ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡುವುದಕ್ಕೆ ಸಂಬಂಧಿ­ಸಿದ ಈ ವಿಷಯ ಹೈಕೋರ್ಟ್‌­ನಲ್ಲಿದೆ. ನ್ಯಾಯಾಲಯ ನೀಡುವ ತೀರ್ಪು ಎಲ್ಲರಿಗೂ ಅನ್ವಯ­ವಾಗುತ್ತದೆ. ಎಲ್ಲ ಡೀಮ್ಡ್‌ ವಿ.ವಿಗಳೂ ಹೈಕೋರ್ಟ್‌ ತೀರ್ಪಿಗೆ ತಲೆಬಾಗ­ಬೇಕಾಗುತ್ತದೆ’ ಎಂದರು.

ಎಲ್ಲರಿಗೂ ಅನ್ವಯ: ಕೆಪಿಸಿಸಿ ಅಧ್ಯಕ್ಷ ಡಾ.ಜಿ.­ಪರಮೇಶ್ವರ್‌, ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರ ಒಡೆತನದ ಸಂಸ್ಥೆಗಳಿಗೂ ಇದು ಅನ್ವಯ ಆಗುತ್ತದೆಯೇ ಎಂದು ಕೇಳಿದಾಗ, ‘ಎಷ್ಟೇ ದೊಡ್ಡವರಾ­ದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು. ಎಲ್ಲ ಸಂಸ್ಥೆ­ಗಳಿಗೂ ಕಾನೂನು ಮತ್ತು ನ್ಯಾಯಾಲಯದ ತೀರ್ಪು ಒಂದೇ ಆಗಿರುತ್ತದೆ. ಎಲ್ಲರೂ ಅದನ್ನು ಪಾಲಿಸುವುದು ಕಡ್ಡಾಯ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.