ADVERTISEMENT

ಸಿ.ಎಂ ಆಧುನಿಕ ಬಸವಣ್ಣನಾಗಲಿ

‘ಅನ್ನಭಾಗ್ಯ’ದ ವಿರೋಧಿ ನಾನಲ್ಲ: ಸಾಹಿತಿ ಡಾ.ದೇ.ಜವರೇಗೌಡ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 19:30 IST
Last Updated 6 ಜುಲೈ 2015, 19:30 IST

ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಆಧುನಿಕ ಬಸವಣ್ಣ’ ಆಗಬೇಕು ಎಂದು ಸಾಹಿತಿ ಡಾ.ದೇ. ಜವರೇಗೌಡ ಆಶಿಸಿದರು.
ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ಕುವೆಂಪು ವಿದ್ಯಾ ಪರಿಷತ್ತಿನ ವತಿಯಿಂದ ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ‘ಪ್ರೊ. ದೇಜಗೌ ಅವರ ಜನ್ಮದಿನದ ಶುಭ ಹಾರೈಕೆ’ ಸಮಾರಂಭದಲ್ಲಿ ಮಾತನಾಡಿದರು. 

‘ಅನ್ನಭಾಗ್ಯ’ ಕುರಿತು ನಾನು ಹೇಳಿದ ವಿಷಯ ಮಾಧ್ಯಮಗಳಲ್ಲಿ ಸಂಪೂರ್ಣವಾಗಿ ಪ್ರಕಟವಾಗಿಲ್ಲ. ಹಾಗಾಗಿ, ಗೊಂದಲ ಸೃಷ್ಟಿಯಾಗಿದೆ. ‘ಅನ್ನಭಾಗ್ಯ’ದ ವಿರೋಧಿ ನಾನಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಅಕ್ಕಿ ನೀಡುವುದರ ಜತೆಜತೆಗೆ ಬಸವಣ್ಣ ಹೇಳಿದಂತೆ ಕಾಯಕವನ್ನೂ ಸಿದ್ದರಾಮಯ್ಯ ನೀಡಬೇಕಿತ್ತು. ಆಗ ಯೋಜನೆಯ ಉದ್ದೇಶ ನಿಜಕ್ಕೂ ಸಾರ್ಥಕವಾಗುತ್ತಿತ್ತು. ರಸ್ತೆ ರಿಪೇರಿ, ಭೂಮಿ ಹದ ಮಾಡುವುದು ಯಾವುದೇ ಕಾಯಕಗಳನ್ನಾದರೂ ಸೃಷ್ಟಿಸಿ ನಂತರ ‘ಅನ್ನಭಾಗ್ಯ’ ಜಾರಿಗೆ ತಂದಿದ್ದರೆ ಅದು ಹೆಚ್ಚು ಪರಿಣಾಮಕಾರಿಯಾಗುತ್ತಿತ್ತು’ ಎಂದು ಅವರು ವಿಶ್ಲೇಷಿಸಿದರು.

ಅಶಕ್ತರಿಗೆ ‘ಅನ್ನಭಾಗ್ಯ’ದ ಜತೆಗೆ ‘ಊಟದ ಭಾಗ್ಯ’ವನ್ನೂ ಕೊಡಿ. ಆದರೆ, ಶಕ್ತಿ ಇದ್ದವರಿಗೆ, ಕೆಲಸ ಮಾಡಲು ಸಾಮರ್ಥ್ಯವಿದ್ದವರಿಗೆ ಉದ್ಯೋಗ ಸೃಷ್ಟಿಸಿ. ‘ಅನ್ನಭಾಗ್ಯ’ ನೀಡುವಾಗ ವಿವೇಕ ಇರಲಿ’ ಎಂದು ಅವರು ಕಿವಿಮಾತು ಹೇಳಿದರು.

ಕಣ್ಣೀರಿಟ್ಟ ದೇಜಗೌ!: ಸಮಾರಂಭದಲ್ಲಿ ದೇಜಗೌ ಅವರನ್ನು ಸನ್ಮಾನಿಸಿದಾಗ ಅವರು ಕೆಲಕಾಲ ಗದ್ಗದಿತರಾಗಿ ಕಣ್ಣೀರಿಟ್ಟರು. ‘ನಾನೇನೇ ಸಾಧನೆ ಮಾಡಿದ್ದರೂ ಅದಕ್ಕೆ ಕುವೆಂಪು ಅವರೇ ಕಾರಣ. ನನ್ನ ಮೂಲಕ ಕುವೆಂಪು ಇಷ್ಟೆಲ್ಲಾ ಸಾಧನೆ ಮಾಡಿಸಿದ್ದಾರೆ’ ಎಂದು ಹೇಳಿ ಕ್ಷಣಕಾಲ ಭಾವುಕರಾದರು.

‘ನಾನೊಬ್ಬ ಸಾಧಾರಣ ವ್ಯಕ್ತಿ. ಕುರಿ ಕಾಯ್ಕೊಂಡು ಇದ್ದೆ. ಶಾಲೆಗೆ ಸೇರಿ ಕಲಿತ ಮೇಲೆ ಗುಮಾಸ್ತನಾಗಿ ಕಾರ್ಯನಿರ್ವ ಹಿಸಿದೆ. ನಂತರ, ಕುವೆಂಪು ಅವರ ಕೃತಿಗಳನ್ನು ಓದಿದ ಮೇಲೆ ನನ್ನ ಜೀವನದ ದಿಕ್ಕೇ ಬದಲಾಯಿತು’ ಎಂದು ಅವರು ತಿಳಿಸಿದರು. ‘ಕುವೆಂಪು ಕೇವಲ ಮನುಷ್ಯರಲ್ಲ. ನನ್ನ ಪಾಲಿಗೆ ಅವರೇ ದೇವರು. ಸ್ವಾಮಿ ವಿವೇಕಾನಂದ ಅವರಂತೆ ಕುವೆಂಪು ಅವರಿದ್ದರು. ನಾನು ಬದುಕಿರುವುದೂ ಕುವೆಂಪು ಅವರಿಂದಲೇ. ಅವರ ಬಳಿಗೆ ಹೋಗಲು ನಾನು ಕಾಯುತ್ತಿದ್ದೇನೆ’ ಎಂದು ಅವರು ಬಿಕ್ಕಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.