ADVERTISEMENT

ಸಿಐಡಿಯಿಂದ ಮೊಹಂತಿ, ಪ್ರಸಾದ್ ವಿಚಾರಣೆ

ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:30 IST
Last Updated 27 ಆಗಸ್ಟ್ 2016, 19:30 IST
ಸಿಐಡಿಯಿಂದ ಮೊಹಂತಿ, ಪ್ರಸಾದ್ ವಿಚಾರಣೆ
ಸಿಐಡಿಯಿಂದ ಮೊಹಂತಿ, ಪ್ರಸಾದ್ ವಿಚಾರಣೆ   

ಬೆಂಗಳೂರು:  ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಐಪಿಎಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಹಾಗೂ ಪ್ರಣವ್ ಮೊಹಂತಿ ಅವರನ್ನು ಸಿಐಡಿ ಅಧಿಕಾರಿಗಳು ಶನಿವಾರ ವಿಚಾರಣೆಗೆ ಒಳಪಡಿಸಿದರು.

‘ಗಣಪತಿ ಅವರು ನನ್ನ ಕೈಕೆಳಗೆ ಕೆಲಸ ಮಾಡಿರುವುದು ಮೂರು ತಿಂಗಳು ಮಾತ್ರ. ಈ ಅವಧಿಯಲ್ಲಿ ನಾನು ಯಾವುದೇ ರೀತಿ ಕಿರುಕುಳ ಕೊಟ್ಟಿಲ್ಲ. ಅವರಿಂದ ಕರ್ತವ್ಯ ಲೋಪವಾದಾಗ ಒಬ್ಬ ಅಧಿಕಾರಿಯಾಗಿ ನಾನು ಏನು ಮಾಡಬೇಕಿತ್ತೊ ಆ ಕೆಲಸವನ್ನಷ್ಟೇ ಮಾಡಿದ್ದೆ’ ಎಂದು ಪ್ರಸಾದ್ ಹೇಳಿಕೆ ಕೊಟ್ಟಿದ್ದಾರೆ.

‘2008ರಲ್ಲಿ ನಾನು ಪಶ್ಚಿಮ ವಿಭಾಗದ ಐಜಿಪಿಯಾಗಿದ್ದೆ. ಗಣಪತಿ ಅವರು ಕದ್ರಿ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದರು. ಆ.8ರಂದು ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಅವರು ಲಾಠಿ ಚಾರ್ಜ್ ಮಾಡಿದ್ದರು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿ ಆಗಸ್ಟ್ 19ರಂದು ಮಂಗಳೂರು ಬಂದ್ ಕೂಡ ನಡೆಯಿತು. ಲಾಠಿ ಚಾರ್ಜ್ ಮಾಡುವ ಮೊದಲು ಅವರು ನನ್ನಿಂದ ಅಥವಾ ಎಸ್ಪಿ ಅವರಿಂದ ಅನುಮತಿ ಪಡೆಯಬೇಕಿತ್ತು. ಹೀಗಾಗಿ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದೆ’ ಎಂದು ಪ್ರಸಾದ್ ಹೇಳಿಕೆ ಕೊಟ್ಟಿದ್ದಾರೆ.

‘ಅಲ್ಲಿಂದ ವರ್ಗವಾದ ಬಳಿಕ ನನಗೂ ಗಣಪತಿಗೂ ಸಂಪರ್ಕವಿರಲಿಲ್ಲ. ಆದರೆ, ಆ ಘಟನೆಯು ಗಣಪತಿ ಅವರ ವೃತ್ತಿ ಜೀವನಕ್ಕೆ ದೊಡ್ಡ ಪೆಟ್ಟು ನೀಡಿತು. ಅದಕ್ಕೆ ನಾನೇ ಕಾರಣ ಎಂದು ಭಾವಿಸಿ ಅವರು ಈ ರೀತಿ ಆರೋಪ ಮಾಡಿರಬಹುದು’ ಎಂದಿದ್ದಾರೆ. 

ಮೊಹಂತಿ ಹೇಳಿದ್ದು:  ಆಗಸ್ಟ್ 12ರಂದೇ ಸಿಐಡಿ ವಿಚಾರಣೆ ಎದುರಿಸಿದ್ದ ಮೊಹಂತಿ, ‘ಗಣಪತಿ ಅವರನ್ನು ಮುಖಾಮುಖಿ ಭೇಟಿಯಾಗಿರುವುದು ಮೂರ್ನಾಲ್ಕು ಬಾರಿ ಅಷ್ಟೆ. ನನ್ನ ವ್ಯಾಪ್ತಿಯಲ್ಲಿ ಅವರು ಕೆಲಸ ಮಾಡಿಯೇ ಇಲ್ಲ’ ಎಂದಿದ್ದರು. ಶನಿವಾರ ಕೂಡ ಅದೇ ಹೇಳಿಕೆ ಪುನರುಚ್ಛರಿಸಿದ್ದಾರೆ.

‘ಗಣಪತಿ ಅವರನ್ನು ಡಿವೈಎಸ್ಪಿ ಹುದ್ದೆಗೆ ಬಡ್ತಿ ನೀಡುವ ಮೊದಲು ಲೋಕಾಯುಕ್ತಕ್ಕೆ ಫೆ.14ರಂದು ಪತ್ರ ಕಳುಹಿಸಿದ್ದ ಗೃಹ ಇಲಾಖೆ, ಗಣಪತಿ ವಿರುದ್ಧ ಯಾವುದಾದರೂ ಇಲಾಖಾ ತನಿಖೆ ಬಾಕಿ ಇದೆಯೇ ಎಂದು ಕೇಳಿತ್ತು. ಆಗ ಐಜಿಪಿಯಾಗಿದ್ದ ನಾನು, ನಮ್ಮಲ್ಲಿ ಯಾವುದೇ ಪ್ರಕರಣವಿಲ್ಲ. ಅವರ ವಿರುದ್ಧ ಬೇರೆ ಕಡೆ ಆರೋಪಗಳಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದ್ದೆ. ಅವರ ಮೇಲೆ ದ್ವೇಷವಿದ್ದಿದ್ದರೆ, ಸುಳ್ಳು ಆರೋಪ ಮಾಡಿ ಬಡ್ತಿಗೆ ಅಡ್ಡಿಯಾಗಬಹುದಿತ್ತು’ ಎಂದು ಮೊಹಂತಿ ಹೇಳಿರುವುದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.