ADVERTISEMENT

ಸಿಡಿಲು ಬಡಿದು ಐವರ ಸಾವು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST
ಸಿಡಿಲು ಬಡಿದು ಐವರ ಸಾವು
ಸಿಡಿಲು ಬಡಿದು ಐವರ ಸಾವು   

ಹುಬ್ಬಳ್ಳಿ: ಮುಂಬೈ ಕರ್ನಾಟಕ ಭಾಗದ ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ  ಬಿರುಸಿನ ಮಳೆಯಾಗಿದ್ದು, ಒಂದೇ ಕುಟುಂಬದ ಮೂವರು ಸೇರಿದಂತೆ ಐದು ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸವದಿ ಗ್ರಾಮದ ಬಳವಾಡ ಕ್ರಾಸ್‌ ಬಳಿ ತೋಟದ ಕೆಲಸದಲ್ಲಿ ತೊಡಗಿದ್ದ ಆದರ್ಶ ಅಲಗೂರ ( 45), ಅವರ ಪತ್ನಿ ಅನಂತಮತಿ (38) ಮತ್ತು ಪುತ್ರ ದರ್ಶನ (16) (ಜಮಖಂಡಿ ತಾಲೂಕಿನ ಮೈಗೂರ ಗ್ರಾಮದವರು), ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಲ್ಲಳ್ಳಿಯ ರಾವ್‌ಸಾಬ್‌ ಬಣಜನವರ (32) ಹಾಗೂ ವಿಜಯಪುರದ ಅತಾಲಟ್ಟಿ ಗ್ರಾಮದ ಸಿದ್ದು ಕರಾಡೆ (58) ಸಿಡಿಲಿಗೆ ಬಲಿಯಾಗಿದ್ದಾರೆ.

ಆಲಿಕಲ್ಲು ಮಳೆ: ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆ ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಸುಮಾರು ಒಂದು ತಾಸು ರಭಸದ ಮಳೆ ಸುರಿಯಿತು. ಇದಲ್ಲದೇ ಜಿಲ್ಲೆಯ ಬೈಲಹೊಂಗಲ, ರಾಯಬಾಗ ತಾಲ್ಲೂಕು ಮತ್ತು ನೇಸರಗಿಯಲ್ಲೂ ಮಳೆ ಸುರಿದಿದೆ.

ವಿಜಯಪುರ ನಗರವೂ ಸೇರಿದಂತೆ ಸುತ್ತಮುತ್ತ ಗಾಳಿ, ಗುಡುಗು–ಸಿಡಿಲ ಅಬ್ಬರದೊಂದಿಗೆ ಮಳೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಕೂಡಲಸಂಗಮ, ಕಮತಗಿ, ಶಿರೂರು, ಅಮೀನಗಡದಲ್ಲೂ ಒಂದು ತಾಸು ಅಬ್ಬರದ ಮಳೆಯಾಗಿದೆ. ಗದಗ ಜಿಲ್ಲೆಯ ಕೆಲವೆಡೆ ತುಂತುರು ಮಳೆಯಾಗಿದೆ.

ಬಿಸಿಲಿನ ತಾಪಕ್ಕೆ ಮೂವರ ಸಾವು
ಬೆಂಗಳೂರು:
 ಬಿಸಿಲ ತಾಪದಿಂದ ರಾಜ್ಯದಲ್ಲಿ ಶುಕ್ರವಾರ ಮೂವರು ಮೃತಪಟ್ಟಿದ್ದಾರೆ. ಪಾವಗಡ ತಾಲ್ಲೂಕಿನ ಕೆಂಚಗಾನಹಳ್ಳಿಯಲ್ಲಿ ಕೃಷಿಕ ಮಲ್ಲಯ್ಯ  (50) ಸಾವಿಗೀಡಾಗಿದ್ದಾರೆ.  ತೋಟದಲ್ಲಿ ಕೆಲಸ ಮಾಡುತ್ತಿದ್ದ ಅವರು ಏಕಾಏಕಿ ಕುಸಿದು ಬಿದ್ದರು. ಹತ್ತಿರ ಹೋಗಿ ನೋಡುವಷ್ಟರಲ್ಲಿ ಉಸಿರು ನಿಂತಿತ್ತು.

ಮತ್ತೊಬ್ಬ ರೈತ ಸಾವು
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ  ತಗ್ಗಲೂರು ಗ್ರಾಮದ ರೈತ ರಾಮಶೆಟ್ಟಿ (58) ಬಿಸಿಲು ತಾಪದಿಂದ ಮೃತಪಟ್ಟಿದ್ದಾರೆ. ಹೊಲದಲ್ಲಿ ಉಳುಮೆ ಮಾಡುವಾಗ ಬಿಸಿಲಿನ ತಾಪ ತಾಳಲಾರದೆ  ಕುಸಿದುಬಿದ್ದರು. ತಕ್ಷಣ ಅವರ ಕುಟುಂಬದವರು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಆದರೆ, ಮಾರ್ಗ ಮಧ್ಯದಲ್ಲಿ ಮೃತಪಟ್ಟರು. 

ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ  ಹಂದರಕಿ ಗ್ರಾಮದ ಶಿಕ್ಷಕ ಸಾಬಣ್ಣಾ ರಾಮಲಿಂಗಪ್ಪಾ ಮೇತ್ರಿ (28) ಬಿಸಿಲಿನ ತಾಪದಿಂದ ಶುಕ್ರವಾರ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೆ ಶಿಕ್ಷಕರಾಗಿ  ನೇಮಕಗೊಂಡಿದ್ದು, ಶಿಲಾರಕೋಟ  ಸರ್ಕಾರಿ ಪ್ರೌಢಶಾಲೆಯಲ್ಲಿ ಏ.4 ರಂದು  ಕೆಲಸ ಆರಂಭಿಸಿದ್ದರು.  ಬೆಂಗಳೂರಿಗೆ ತೆರಳಿದ್ದ ಇವರು ಶುಕ್ರವಾರ ಬೆಳಿಗ್ಗೆ ಸೇಡಂಗೆ ವಾಪಸ್ಸಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT