ADVERTISEMENT

ಸಿದ್ದರಾಮಯ್ಯಗೆ ಮೀಟರ್ ಇದೆಯೇ: ಬಿಜೆಪಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST

ಬೆಂಗಳೂರು:  ರೌಡಿ ಜಗತ್ತಿನಲ್ಲಿ ಚಾಲ್ತಿ ಇಲ್ಲಿರುವ ‘ಮೀಟರ್‌ ಇಲ್ಲ’ ಪದ ಬಳಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರ ಮುಂದೆ ಸಣ್ಣವರಾಗಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕುರಿತು ಸಿದ್ದರಾಮಯ್ಯ ಅವರು ‘ಮೀಟರ್‌ ಇಲ್ಲ’ ಎಂಬ ಪದ ಬಳಕೆ ಮಾಡಿರುವುದಕ್ಕೆ ಬಿಜೆಪಿ ವಕ್ತಾರ ಎಸ್‌.ಸುರೇಶ್‌ ಕುಮಾರ್‌ ತೀವ್ರವಾಗಿ ಆಕ್ಷೇಪಿಸಿದ್ದಾರೆ.

‘ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ವಿರುದ್ಧ ಈ ಪದವನ್ನು ಉಪಯೋಗಿಸಬಾರದಿತ್ತು. ‘ಮೀಟರ್‌’ ಎಂಬುದು ಭೂಗತ ಜಗತ್ತಿನಲ್ಲಿ, ರೌಡಿಗಳ ಸಾಮ್ರಾಜ್ಯದಲ್ಲಿ ಪ್ರಚಲಿತದಲ್ಲಿ ಇರುವ ಪದ. ಒಬ್ಬ ಗೌರವಾನ್ವಿತ ಮುಖ್ಯಮಂತ್ರಿ ಬಳಸಬಹುದಾದ ಪದವೇ ಅಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಓರ್ವ ಮುಖ್ಯಮಂತ್ರಿಯಾಗಿ ಅವರ ಪಕ್ಷದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಜತೆ ನೇರ ಭೇಟಿಗೆ ಸಮಯ ತೆಗೆದುಕೊಳ್ಳುವಷ್ಟು ‘ಮೀಟರ್‌ ಇದೆ’ ಎಂಬುದನ್ನು ಸಿದ್ದರಾಮಯ್ಯ ಇನ್ನೂ ಸಾಬೀತು ಮಾಡಿಲ್ಲ. ಅದಕ್ಕಾಗಿ ಸಚಿವ ಸಂಪುಟ ವಿಸ್ತರಣೆ ಎಷ್ಟು ಕಾಲ ಮುಂದಕ್ಕೆ ಹೋಯಿತೆಂಬುದು ರಾಜ್ಯದ ಜನತೆಗೆ ಗೊತ್ತಿದೆ’ ಎಂದು ಅವರು ತಿಳಿಸಿದ್ದಾರೆ.

‘ಯಡಿಯೂರಪ್ಪ ಅನೇಕ ಪರಿಣಾಮಕಾರಿ ಹೋರಾಟಗಳನ್ನು ನಡೆಸಿ, ಜನನಾಯಕ ಎಂದು ಸಾಬೀತುಪಡಿಸಿದ್ದಾರೆ. ಇಂತಹ ಯಾವುದಾದರೂ ಹೋರಾಟವನ್ನು ‘ಮೀಟರ್‌’ ಪ್ರತಿಪಾದಕ ಸಿದ್ದರಾಮಯ್ಯ ಕೈಗೆತ್ತಿಕೊಂಡು ಯಶಸ್ವಿಯಾಗಿದ್ದಾರೆಯೇ’ ಎಂದು ಸುರೇಶ್‌ ಕುಮಾರ್‌ ಪ್ರಶ್ನಿಸಿದ್ದಾರೆ.

‘ಬಿಜೆಪಿಗೆ ಶಕ್ತಿಯೇ ಇಲ್ಲದ 80 ರ ದಶಕದಲ್ಲಿ ರೈತ, ಕೃಷಿ ಕಾರ್ಮಿಕರ ಹೋರಾಟ ಕೈಗೆತ್ತಿಕೊಂಡರು. ಈ ಮೂಲಕ ಪಕ್ಷ ಕಟ್ಟಿದರು. ಇದನ್ನು ಮೀಟರ್‌ ಇದ್ದವರು ಮಾತ್ರ ಮಾಡಲು ಸಾಧ್ಯ. ಯಾವಾಗಲೂ ಯಾರೋ ಕಟ್ಟಿ ಶಕ್ತಿಶಾಲಿಯನ್ನಾಗಿ ಮಾಡಿದ ಪಕ್ಷಕ್ಕೆ ನೀವು ಬಂದು ಸೇರಿದ್ದೀರಿ. ಬಳ್ಳಾರಿವರೆಗೆ ನಡೆಸಿದ ವೈಭವದ ಪಾದಯಾತ್ರೆ ಬಿಟ್ಟರೆ, ಆ ಪಕ್ಷವನ್ನು ಕಟ್ಟುವಲ್ಲಿ ನಿಮ್ಮ ಪಾತ್ರ ಏನಿದೆ’ ಎಂದು ಅವರು ಕುಟುಕಿದ್ದಾರೆ.

ಸುಳ್ಳಿನ ಬಾತ್ ಅಷ್ಟೆ: ಜೋಷಿ

‘ಸಿದ್ದರಾಮಯ್ಯ ಅವರದ್ದು ಕಾಮಕಿ ಬಾತ್‌ ಅಲ್ಲ, ಅವರದ್ದು ಸುಳ್ಳುಗಳ ಸರಮಾಲೆ  ಬಾತ್‌’ ಎಂದು ಬಿಜೆಪಿ ಸಂಸದ ಪ್ರಹ್ಲಾದ ಜೋಷಿ ಟೀಕಿಸಿದ್ದಾರೆ.

‘ನಿಮ್ಮ ಕಾಮಕಿ ಬಾತ್ ಏನು ಎನ್ನುವುದನ್ನು ನಾಲ್ಕೂವರೆ ವರ್ಷಗಳ ಆಡಳಿತ ತೋರಿಸಿದೆ. ಭ್ರಷ್ಟಾಚಾರದ ತಾಂಡವ, ಜಾತ್ಯತೀತತೆಯ ಮುಖವಾಡ ಧರಿಸಿ ಜಾತೀಯ ವಿಷ ಬೀಜ ಬಿತ್ತಿ, ಜಾತಿಯನ್ನು ಒಡೆದು ಆಳುವುದೇ ನಿಮ್ಮ ಕಾಮಕಿ ಬಾತ್ ಅಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.

***

ಸಿದ್ದರಾಮಯ್ಯಗೆ ಅಹಂಕಾರ ಬಂದಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮೀಟರ್ ಇಲ್ಲ ಎಂಬ ಪದ ಬಳಸುವ  ಮೂಲಕ ಮುಖ್ಯಮಂತ್ರಿ ಹುದ್ದೆಗೆ ಅವರು ಕಳಂಕ ತಂದಿದ್ದಾರೆ
- ಜಗದೀಶ ಶೆಟ್ಟರ್, ವಿಧಾನಸಭೆ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.