ADVERTISEMENT

ಸಿಬ್ಬಂದಿ ಕೊಡದೆ ಕಾಡು ರಕ್ಷಣೆ ಹೇಗೆ?

ಅರಣ್ಯ ಸಚಿವರ ಎದುರೇ ಇಲಾಖೆ ಹುಳುಕು ಬಿಚ್ಚಿಟ್ಟ ಪಿಸಿಸಿಎಫ್‌ ಹೊಸಮಠ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2017, 19:30 IST
Last Updated 22 ಫೆಬ್ರುವರಿ 2017, 19:30 IST
ಸಿಬ್ಬಂದಿ ಕೊಡದೆ ಕಾಡು ರಕ್ಷಣೆ ಹೇಗೆ?
ಸಿಬ್ಬಂದಿ ಕೊಡದೆ ಕಾಡು ರಕ್ಷಣೆ ಹೇಗೆ?   

ಬೆಂಗಳೂರು: ‘ಬಂಡೀಪುರ–ನಾಗರಹೊಳೆ ಅರಣ್ಯದ ಸಂರಕ್ಷಣೆಗೆ ಮಂಜೂರಾದ ಹುದ್ದೆಗಳಲ್ಲಿ ಶೇ 70ರಷ್ಟು ಖಾಲಿ ಇವೆ. ಹುದ್ದೆಗಳನ್ನೇ ಭರ್ತಿ ಮಾಡದೆ ಕಾಡಿನ ರಕ್ಷಣೆ ಮಾಡೆಂದರೆ ಹೇಗೆ ಮಾಡುವುದು’ –ಅರಣ್ಯ ಸಚಿವ ರಮಾನಾಥ ರೈ ಅವರ ಎದುರೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌, ವನ್ಯಜೀವಿ ವಿಭಾಗ) ಬಿ.ಜೆ. ಹೊಸಮಠ ಎತ್ತಿದ ಪ್ರಶ್ನೆ ಇದು.

ನಗರದಲ್ಲಿ ಬುಧವಾರ ಏರ್ಪಡಿಸಿದ್ದ ‘ಅರಣ್ಯ ಕುಟೀರ’ ವಸತಿ ಸಮುಚ್ಚಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಮಾತನಾಡಿದ ಬಳಿಕ, ಹೊಸಮಠ ಅವರು ಮಾತ­ನಾಡುವುದಾಗಿ  ಎದ್ದು ನಿಂತರು.

‘ನಾನು ಹಲವು ಸಲ ಬಡ್ಕೊಂಡೆ, ಸಿಬ್ಬಂದಿ ಕೊಡಿ ಎಂದು. ಆದರೆ, ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ. ಅಗತ್ಯ ಸಂಖ್ಯೆಯ ಗಾರ್ಡ್‌ಗಳು ಇದ್ದಾಗ ಕೂಡ ಕಾಡಿನ ರಕ್ಷಣೆ ಬಹಳ ಕಷ್ಟ. ಇನ್ನು ಸಿಬ್ಬಂದಿಯೇ ಇಲ್ಲದಿದ್ದರೆ ಏನು ಮಾಡಬೇಕು’ ಎಂದು ಕೇಳಿದರು.

ADVERTISEMENT

‘ಸಂರಕ್ಷಿತ ಅರಣ್ಯವನ್ನು ಕಾಯಲು ಸಿಬ್ಬಂದಿಯಿಲ್ಲ. ಆದರೆ, ಸಾಮಾಜಿಕ ಅರಣ್ಯದ ರಕ್ಷಣೆಗೆ ಜನರ ಗುಡ್ಡೆಯನ್ನೇ ಹಾಕಲಾಗಿದೆ’ ಎಂದು ಅವರು             ಆಕ್ರೋಶ ವ್ಯಕ್ತಪಡಿಸಿದರು.

‘ಉತ್ತರ ಕರ್ನಾಟಕದ ಕೆಲವು ಹುಡುಗರನ್ನು ನಮ್ಮ ಸ್ಥಳೀಯ ಭಾಷೆಯಲ್ಲಿ ‘ಬರ್ರಿಲೇ ಕಾಡು ಕಾಯಾಕ’ ಎಂದು ಹುರಿದುಂಬಿಸಿ ಕರೆತಂದಿದ್ದೆ. 5–6 ವರ್ಷ ದುಡಿದ ಅವರು ಈಗ ಬೇರೆ ಕಡೆಗೆ ವರ್ಗ ಮಾಡಿಸಿಕೊಂಡು ಹೋಗಿದ್ದಾರೆ’ ಎಂದು ಹೇಳಿದರು.

‘ಅರಣ್ಯವನ್ನು ಕಾಯುವ ಸಿಬ್ಬಂದಿಗೆ ಹತ್ತಿರದಲ್ಲೇ ವಸತಿಗೃಹ ನಿರ್ಮಿಸಿಕೊಟ್ಟರೆ ಅವರು ಸಂತೋಷದಿಂದ ಕೆಲಸ ಮಾಡುತ್ತಾರೆ. ರಾಜ್ಯದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಅಂತಹ ಸೌಲಭ್ಯ ಒದಗಿಸಲು ₹500 ಕೋಟಿ ಬೇಕು. ಇಲಾಖೆಯ ಸಂರಕ್ಷಣಾ ನಿಧಿಯಲ್ಲಿ ಸಾವಿರಾರು ಕೋಟಿ ಕೊಳೆಯುತ್ತಾ ಬಿದ್ದಿದೆ. ಬೇಗ ವಸತಿಯ ವ್ಯವಸ್ಥೆ ಮಾಡಿ’ ಎಂದು ಒತ್ತಾಯಿಸಿದರು.

‘ನಾನು ಇನ್ನು ಮೂರು ತಿಂಗಳುಗಳಲ್ಲಿ ನಿವೃತ್ತನಾಗುತ್ತೇನೆ. ಇಲಾಖೆಯ ಹಿರಿಯ  ಅಧಿಕಾರಿಗಳು ಇಂತಹ ಆಡಳಿತಾತ್ಮಕ ವಿಷಯಗಳಿಗೆ ಆದ್ಯತೆ ನೀಡಿ, ಬೆನ್ನುಬಿದ್ದು ಕೆಲಸ ಮಾಡಿಸಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳ ಮಾತನಾಡಿದ ರಮಾನಾಥ ರೈ, ‘ಖಾಲಿ ಇರುವ ಹುದ್ದೆಗಳನ್ನು ತುಂಬಲು ಎರಡು ಸಾವಿರ ಸಿಬ್ಬಂದಿಯ ನೇಮಕಕ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ. ಈಗಾಗಲೇ ನೇಮಕಾತಿ ಆದೇಶ ಪಡೆದವರು ತರಬೇತಿ ಪಡೆಯುತ್ತಿದ್ದಾರೆ. ಅವರ ತರಬೇತಿ ಮುಗಿದ ತಕ್ಷಣ ಅರಣ್ಯ ಸಂರಕ್ಷಣಾ ಕಾರ್ಯಕ್ಕೆ ನಿಯೋಜನೆ ಮಾಡುತ್ತೇವೆ’ ಎಂದು ಹೇಳಿದರು.

‘ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಕೌನ್ಸೆಲಿಂಗ್‌ ಮೂಲಕ ವರ್ಗ ಮಾಡುವ ಕಾರ್ಯಕ್ಕೆ ಪ್ರಸಕ್ತ ವರ್ಷವೇ ಚಾಲನೆ ನೀಡುತ್ತೇವೆ. ಗಾರ್ಡ್‌ಗಳ ಗಸ್ತಿನ ವ್ಯಾಪ್ತಿಯನ್ನು ಕಡಿಮೆ ಮಾಡುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.