ADVERTISEMENT

‘ಸುಪ್ರೀಂ’ ಆದೇಶ ಪಾಲನೆಗೆ ಸಿದ್ಧತೆ

ಜ್ಯೇಷ್ಠತಾ ಪಟ್ಟಿ ಪರಿಷ್ಕರಣೆಗೆ ಅಂತಿಮ ಗಡುವು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 19:30 IST
Last Updated 7 ಡಿಸೆಂಬರ್ 2017, 19:30 IST
‘ಸುಪ್ರೀಂ’ ಆದೇಶ ಪಾಲನೆಗೆ ಸಿದ್ಧತೆ
‘ಸುಪ್ರೀಂ’ ಆದೇಶ ಪಾಲನೆಗೆ ಸಿದ್ಧತೆ   

ಬೆಂಗಳೂರು: ಬಡ್ತಿ ಮೀಸಲಾತಿ ಮಸೂದೆಯನ್ನು ಅನುಮೋದನೆಗಾಗಿ ರಾಷ್ಟ್ರಪತಿಗೆ ಕಳುಹಿಸುವಂತೆ ರಾಜ್ಯಪಾಲರು ಶಿಫಾರಸು ಮಾಡಿದ ಬೆನ್ನಲ್ಲೆ, ‘ಬಡ್ತಿ ಮೀಸಲಾತಿ ಕಾಯ್ದೆ– 2002 ‘ ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್‌ ಫೆ. 9ರಂದು ನೀಡಿದ್ದ ಆದೇಶ ಪಾಲಿಸುವ ಹಾದಿಯಲ್ಲಿ ತುರ್ತು ಕ್ರಮ ತೆಗೆದುಕೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಮುಂದಾಗಿದೆ.

ಆದೇಶ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್‌ 2018ರ ಜನವರಿ 15ರ ಗಡುವು ವಿಧಿಸಿದೆ. ಅದಕ್ಕೆ ಪೂರಕವಾದ ಕ್ರಮ ತೆಗೆದುಕೊಂಡು ನ್ಯಾಯಾಂಗ ನಿಂದನೆಯಿಂದ ಪಾರಾಗುವ ಅನಿವಾರ್ಯತೆ ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ಹೀಗಾಗಿ, ಆ ಅವಧಿಯ ಒಳಗೆ ಆದೇಶದಲ್ಲಿ ತಿಳಿಸಿದಂತೆ ಹಿಂಬಡ್ತಿ– ಮುಂಬಡ್ತಿ ಪಡೆಯುವ ನೌಕರರ ಪಟ್ಟಿ ಸಿದ್ಧಪಡಿಸಿಕೊಳ್ಳಲು ಮತ್ತು ಮುಂದಿನ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ಡಿಪಿಎಆರ್‌ ಚಿಂತನೆ ನಡೆಸಿದೆ.

‘ಗುರುವಾರ ರಾತ್ರಿಯ ಒಳಗೆ ಎಲ್ಲ ಇಲಾಖೆಗಳು ಜ್ಯೇಷ್ಠತಾ ಪಟ್ಟಿ ಪರಿಷ್ಕೃತ ಕರಡು ಸಿದ್ಧಪಡಿಸಿ ಸಲ್ಲಿಸಲೇಬೇಕು. ಇದೇ 22 ಅಥವಾ 23ರೊಳಗೆ ಪರಿಷ್ಕೃತ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನೂ ಸಿದ್ಧಪಡಿಸಿರಬೇಕು’ ಎಂದು ಈ ನಿಟ್ಟಿನಲ್ಲಿ ಇನ್ನೂ ಕ್ರಮ ತೆಗೆದುಕೊಳ್ಳದ ಇಲಾಖೆಗಳಿಗೆ ಡಿಪಿಎಆರ್‌ ಕಾರ್ಯದರ್ಶಿ ಅನಿಲ್‌ಕುಮಾರ್‌ ಝಾ ಗುರುವಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಆ ಬಳಿಕ ಹಿಂಬಡ್ತಿ– ಮುಂಬಡ್ತಿ ವಿಷಯದಲ್ಲಿ ಆಗುವ ಬದಲಾವಣೆ ಮತ್ತು ಅದರಿಂದ ಸರ್ಕಾರಕ್ಕೆ ಬೀಳಲಿರುವ ಆರ್ಥಿಕ ಹೊರೆ ಲೆಕ್ಕ ಮಾಡಲು ಉದ್ದೇಶಿಸಲಾಗಿದೆ.

ADVERTISEMENT

ಪರಿಷ್ಕೃತ ಜ್ಯೇಷ್ಠತಾ ಪಟ್ಟಿಯ ಕರಡು ಸಿದ್ಧಪಡಿಸಲು ಅನುಸರಿಸಬೇಕಾದ ಮಾರ್ಗಸೂಚಿ ಸಮೇತ ಮೇ ತಿಂಗಳಲ್ಲೇ ಎಲ್ಲ ಇಲಾಖೆಗಳಿಗೆ ಸುತ್ತೋಲೆ ಕಳುಹಿಸಲಾಗಿತ್ತು. ಆದರೆ, ಕೆಲವು ಇಲಾಖೆಗಳು ಕೆಲವು ಶ್ರೇಣಿಗಳ ಪಟ್ಟಿಯನ್ನು ಮಾತ್ರ ಸಿದ್ಧಪಡಿಸಿವೆ. ಕೆಲವು ಇಲಾಖೆಗಳು ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ರಾಷ್ಟ್ರಪತಿ ಅನುಮೋದನೆಗೆ ಶಿಫಾರಸು: ಸುಪ್ರೀಂ ಕೋರ್ಟ್‌ ಆದೇಶದಿಂದ ಹಿಂಬಡ್ತಿ ಆತಂಕ ಎದುರಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಹಿತ ಕಾಯುವ ಉದ್ದೇಶದಿಂದ, ಮೀಸಲಾತಿ ಆಧಾರದಲ್ಲಿ ಬಡ್ತಿ ಹೊಂದಿರುವ ನೌಕರರಿಗೆ ತತ್ಪರಿಣಾಮವಾದ ಜ್ಯೇಷ್ಠತೆ ವಿಸ್ತರಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿತ್ತು. ಬೆಳಗಾವಿ ಅಧಿವೇಶನದಲ್ಲಿ ಉಭಯ ಸದನಗಳು ಈ ಮಸೂದೆಗೆ ಅಂಗೀಕಾರ ನೀಡಿವೆ. ಆದರೆ, ಮಸೂದೆಗೆ ಅಂಕಿತ ಹಾಕದ ರಾಜ್ಯಪಾಲ ವಜುಭಾಯಿ ವಾಲಾ, ರಾಷ್ಟ್ರಪತಿಯಿಂದ ಅನುಮೋದನೆ ಪಡೆಯುವಂತೆ ಶಿಫಾರಸು ಮಾಡಿ ಕಡತವನ್ನು ಸರ್ಕಾರಕ್ಕೆ ವಾಪಸು ಕಳುಹಿಸಿದ್ದಾರೆ.

‘ರಾಜ್ಯಪಾಲರು ವಿವೇಚನಾಧಿಕಾರ ಬಳಸಿ ಮಸೂದೆಯನ್ನು ಮರಳಿಸಿದ್ದಾರೆ. ಹೀಗಾಗಿ, ಮಸೂದೆಗೆ ಅನುಮೋದನೆ ನೀಡಬೇಕು ಎಂದು ಕೋರಿ ಕೇಂದ್ರ ಗೃಹ ಸಚಿವಾಲಯದ ಮೂಲಕ ರಾಷ್ಟ್ರಪತಿಗೆ ತಕ್ಷಣವೇ ಕಳುಹಿಸಲಾಗುವುದು’ ಎಂದು ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಕೆ. ದ್ವಾರಕನಾಥ ಬಾಬು ತಿಳಿಸಿದರು.

ಜ್ಯೇಷ್ಠತಾ ಪಟ್ಟಿ ಪರಿಷ್ಕರಣೆ ತ್ವರಿತಗೊಳಿಸಲು ತಾಕೀತು: ಈ ಮಧ್ಯೆ, ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಇನ್ನೂ ಜ್ಯೇಷ್ಠತಾ ಪಟ್ಟಿ ಪರಿಷ್ಕರಿ
ಸದ ಇಲಾಖೆಗಳ ಮುಖ್ಯಸ್ಥರ ಜೊತೆ ಗುರುವಾರ ಸಭೆ ನಡೆಸಿದ ಝಾ, ಸುಪ್ರೀಂ ಕೋರ್ಟ್ ನೀಡಿದ ಗಡುವು ಮುಕ್ತಾಯಗೊಳ್ಳುತ್ತಿರುವುದರಿಂದ ಪರಿಷ್ಕರಣಾ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದ್ದಾರೆ.

‘ಸಚಿವಾಲಯ ವ್ಯಾಪ್ತಿಯಲ್ಲಿ ಬರುವ 40 ಇಲಾಖೆಗಳ ಪೈಕಿ ಶೇ 80ರಷ್ಟು ಇಲಾಖೆಗಳು ಪಟ್ಟಿ ಪರಿಷ್ಕರಿಸಿವೆ. ಆದೇಶ ಪಾಲನೆ ದೃಷ್ಟಿಯಲ್ಲಿ, 1978ರ ಏ. 24ರಿಂದ ಈವರೆಗಿನ ಜ್ಯೇಷ್ಠತಾ ಪಟ್ಟಿಯನ್ನು ಪರಿಷ್ಕರಿಸುವುದು ಬಹುಮುಖ್ಯ ಘಟ್ಟ. ಅದಿನ್ನೂ ಪೂರ್ಣ ಆಗಿಲ್ಲ. ಅಷ್ಟೇ ಅಲ್ಲ, ಮುಂಬಡ್ತಿ– ಹಿಂಬಡ್ತಿ ಕುರಿತ ಗೊಂದಲವೂ ಮುಂದುವರಿದಿದೆ’ ಎಂದು ಡಿಪಿಎಆರ್‌ (ಸೇವಾ ನಿಯಮಗಳು) ಹಿರಿಯ ಅಧಿಕಾರಿ ತಿಳಿಸಿದರು.

‘ಮಸೂದೆಗೆ ರಾಷ್ಟ್ರಪತಿ ಅನುಮೋದನೆ ನೀಡದಿದ್ದರೆ ಸುಪ್ರೀಂ ಕೋರ್ಟ್ ಆದೇಶ ಪಾಲಿಸಲೇ ಬೇಕು. ಆದರೆ, ಈವರೆಗೆ ಜ್ಯೇಷ್ಠತಾ ಪಟ್ಟಿ ಪರಿಷ್ಕರಣೆ ಬಿಟ್ಟು, ಮುಂದಿನ ಹಂತದ ಬಗ್ಗೆ ಯೋಚನೆ ಮಾಡಿಲ್ಲ. ಈ ವಿಷಯದಲ್ಲಿ ಇಕ್ಕಟ್ಟಿನ ಸ್ಥಿತಿ ಇದೆ. ಮುಂದೇನು ಎಂಬ ಗೊಂದಲಕ್ಕೆ ಸ್ಪಷ್ಟ ಉತ್ತರ ಕಂಡುಕೊಳ್ಳಲು ಸಾಧ್ಯ ಆಗಿಲ್ಲ’ ಎಂದೂ ಅವರು ಹೇಳಿದರು.

‘ಸುಪ್ರೀಂ ಕೋರ್ಟ್ ಆದೇಶ ಪಾಲನೆಯಿಂದ ಉಂಟಾಗುವ ಆರ್ಥಿಕ ಹೊರೆ ಬಗ್ಗೆಯೂ ಲೆಕ್ಕ ಹಾಕುವಂತೆ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ. ನಗರ ಯೋಜನಾ ನಿರ್ದೇಶನಾಲಯ ಅರಣ್ಯ ಇಲಾಖೆಯ ಹಿರಿಯ ಶ್ರೇಣಿಯ ಹುದ್ದೆಗಳು, ವಿಧಾನಸಭಾ ಸಚಿವಾಲಯ, ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಸೇರಿ ಕೆಲವು ಇಲಾಖೆಗಳಲ್ಲಿ ಇನ್ನೂ ಕರಡು ಜ್ಯೇಷ್ಠತಾ ಪಟ್ಟಿ ಪರಿಷ್ಕರಣೆ ಆಗಿಲ್ಲ.’ ಎಂದೂ ಅವರು ಮಾಹಿತಿ ನೀಡಿದರು.

'ರಾಷ್ಟ್ರಪತಿಗೆ ಕಳುಹಿಸಲು ಶಿಫಾರಸು'

'ಬಡ್ತಿ ಮೀಸಲಾತಿ ಮಸೂದೆಯನ್ನು ರಾಜ್ಯಪಾಲರು ತಿರಸ್ಕರಿಸಿಲ್ಲ. ಬದಲಿಗೆ ರಾಷ್ಟ್ರಪತಿ ಅಂಕಿತ ಅಗತ್ಯ ಎಂದಷ್ಟೇ ಹೇಳಿದ್ದಾರೆ. ಮಸೂದೆ ಕುರಿತು ಕೇಂದ್ರ ಸರ್ಕಾರಕ್ಕೂ ಮನವರಿಕೆ ಮಾಡಿಕೊಡಲಾಗುವುದು‘ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

’ಬಡ್ತಿ ಮೀಸಲಾತಿ ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶ ಪಾಲನೆಗೆ 2018ರ ಜ.15ರವರೆಗೆ ಅವಕಾಶ ಇದೆ. ಆ ಸಮಯದೊಳಗೆ ರಾಜ್ಯದಲ್ಲಿ ಅಂಗೀಕರಿಸಲಾದ ಮಸೂದೆಗೆ ಒಪ್ಪಿಗೆ ಪಡೆಯಲಾಗುವುದು‘ ಎಂದರು.

ಬಡ್ತಿ ಮೀಸಲಾತಿ ಮಸೂದೆ ರಾಷ್ಟ್ರಪತಿಗೆ ಕಳುಹಿಸುವುದರಿಂದ ಸುಪ್ರೀಂ ಕೋರ್ಟ್‌ ಆದೇಶ ಜಾರಿ ಸಮಯ ಮುಂದೂಡಬಹುದೆ ಎಂಬ ಪ್ರಶ್ನೆಗೆ, ’ಈ ಸಂಬಂಧ ಅಡ್ವೊಕೇಟ್ ಜನರಲ್ ಅವರ ಸಲಹೆ ಪಡೆಯಲಾಗುವುದು‘ ಎಂದರು.

’ಸುಪ್ರೀಂ ಕೋರ್ಟ್‌ ಆದೇಶವನ್ನು ಅನೇಕ ರಾಜ್ಯಗಳು ಜಾರಿ ಮಾಡಿವೆ. ಬಡ್ತಿ ಮೀಸಲಾತಿ ಕಾಯ್ದೆ ರದ್ದತಿಯಿಂದ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ನೌಕರರು ಹಿಂಬಡ್ತಿ ಆಗುವುದನ್ನು ತಡೆಯಲು ಯಾವುದೇ ಸರ್ಕಾರ ಕಾನೂನು ತರುವ ಪ್ರಯತ್ನ ಮಾಡಿಲ್ಲ ಎಂದೂ ಜಯಚಂದ್ರ ವಿವರಿಸಿದರು.

ನ್ಯಾಯಾಂಗ ನಿಂದನೆ ತಪ್ಪಿಸಲು ’ಸುಪ್ರೀಂ‘ಗೆ ಪ್ರಮಾಣ ಪತ್ರ ಸಲ್ಲಿಕೆ

ಪರಿಷ್ಕೃತ ಅಂತಿಮ ಜ್ಯೇಷ್ಠತಾ ಪಟ್ಟಿ ಇದೇ 22 ಅಥವಾ 23ರ ಒಳಗೆ ಸಿದ್ಧ

‌ಹಿಂಬಡ್ತಿ– ಮುಂಬಡ್ತಿ ಪಡೆಯುವ ನೌಕರರ ಲೆಕ್ಕಾಚಾರ ಆರಂಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.