ADVERTISEMENT

ಸುಪ್ರೀಂ ಕೋರ್ಟ್‌ಗೆ ರಾಜ್ಯದ ಅರ್ಜಿ

ಪಾಲಿಕೆ ಚುನಾವಣೆ ಮುಂದೂಡಲು ಮನವಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2015, 20:06 IST
Last Updated 29 ಜೂನ್ 2015, 20:06 IST

ನವದೆಹಲಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ನಿಗದಿಪಡಿಸಿರುವ ದಿನಾಂಕವನ್ನು ಮೂರು ತಿಂಗಳುಗಳ ಕಾಲ ಮುಂದೂಡಲು ಮನವಿ ಮಾಡಿ ರಾಜ್ಯ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ರಾಜ್ಯ ಚುನಾವಣಾ ಆಯೋಗವು ಬಿಬಿಎಂಪಿ ಚುನಾವಣೆಯನ್ನು ಜುಲೈ 28ಕ್ಕೆ ನಿಗದಿ ಮಾಡಿದೆ. ಇದಕ್ಕೂ ಮೊದಲು ಮೇ 5ರಂದು ಸುಪ್ರೀಂ ಕೋರ್ಟ್‌ ಮುಂದೆ ರಾಜ್ಯ ಸರ್ಕಾರದ ವಕೀಲರು 3 ತಿಂಗಳಲ್ಲಿ ಚುನಾವಣೆ ನಡೆಸುವುದಾಗಿ ಹೇಳಿದ್ದರು. ಚುನಾವಣೆ ನಡೆಸಲು ಆರು ತಿಂಗಳ ಕಾಲಾವಕಾಶ ಕೊಡಬೇಕೆಂಬ ನಿಲುವನ್ನು ಸರ್ಕಾರ ಸಡಿಲಗೊಳಿಸಿತ್ತು.

ಕಾಲಾವಕಾಶ: ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿಯಲ್ಲಿ, ವಾರ್ಡು ಪುನರ್‌ವಿಂಗಡಣೆಗೆ ಹಾಗೂ 2011ರ ಗಣತಿ ಅನ್ವಯ ಮೀಸಲಾತಿ ನಿಗದಿಪಡಿಸಲು 3 ತಿಂಗಳು ಕಾಲಾವಕಾಶದ ಅಗತ್ಯವಿದೆ ರಾಜ್ಯ ಸರ್ಕಾರ ಪ್ರತಿಪಾದಿಸಿದೆ.

ರಾಜ್ಯ ಸರ್ಕಾರ ಸಮಯಾವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್‌ ವಜಾ ಮಾಡಿದೆ. ಈಗಿರುವ ವಾರ್ಡುಗಳ ಆಧಾರದಲ್ಲೇ ಚುನಾವಣೆ ನಡೆಸುವಂತೆಯೂ ಆದೇಶಿಸಿದೆ.

ಪಾಲಿಕೆ ಚುನಾವಣೆ ವಿಳಂಬವಾದರೆ 5 ವರ್ಷದೊಳಗೆ ಚುನಾವಣೆ ನಡೆಸಬೇಕೆಂಬ ಸಂವಿಧಾನದ ಮಿತಿಯನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಎನ್‌ಜಿಒ ಹಾಗೂ ಪಾಲಿಕೆಯ ಕೆಲವು ಮಾಜಿ ಸದಸ್ಯರು ಪ್ರತಿಪಾದಿಸಿದ್ದಾರೆ. ರಾಜ್ಯ ಸರ್ಕಾರದ ಅರ್ಜಿ ಜುಲೈ ಒಂದರ ಬಳಿಕ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.