ADVERTISEMENT

ಸುರಕ್ಷತಾ ಕ್ರಮಗಳಿಲ್ಲದೆ ಮ್ಯಾನ್‌ಹೋಲ್‌ಗೆ ಇಳಿದ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 10:47 IST
Last Updated 16 ಮಾರ್ಚ್ 2017, 10:47 IST
ಸುರಕ್ಷತಾ ಕ್ರಮಗಳಿಲ್ಲದೆ ಮ್ಯಾನ್‌ಹೋಲ್‌ಗೆ ಇಳಿದ ಕಾರ್ಮಿಕರು
ಸುರಕ್ಷತಾ ಕ್ರಮಗಳಿಲ್ಲದೆ ಮ್ಯಾನ್‌ಹೋಲ್‌ಗೆ ಇಳಿದ ಕಾರ್ಮಿಕರು   

ಬಳ್ಳಾರಿ: ನಗರದ ಬಿ.ಎಸ್. ಕಾಂಪೌಂಡ್ ರಸ್ತೆಯಲ್ಲಿ ಕಾರ್ಮಿಕರು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

ಕೆಲ ದಿನಗಳ ಹಿಂದೆ ಈ ಬಡಾವಣೆಯ ರಸ್ತೆಗೆ ಕಾಂಕ್ರಿಟ್‌ ಹಾಕಲಾಗಿತ್ತು. ಈ ವೇಳೆ ಮ್ಯಾನ್‌ಹೋಲ್‌ ಮುಚ್ಚಳ ಜರುಗಿ ಹೆಚ್ಚಿನ ಪ್ರಮಾಣದ ಕಾಂಕ್ರಿಟ್‌ ಮ್ಯಾನ್‌ಹೋಲ್‌ಗೆ ತುಂಬಿಕೊಂಡಿತ್ತು. ಹೀಗಾಗಿ ಮ್ಯಾನ್‌ಹೋಲ್‌ನ ನೀರು ಮುಂದೆ ಹರಿಯದೆ ಸಮಸ್ಯೆ ನಿರ್ಮಾಣವಾಗಿತ್ತು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಮಿಕರು ಗುರುವಾರ ರಸ್ತೆ ಅಗೆದು, ಮ್ಯಾನ್‌ಹೋಲ್‌ಗೆ ಇಳಿದು ಒಳಗೆ ತುಂಬಿದ್ದ ಕಾಂಕ್ರಿಟ್‌ ತೆಗೆದಿದ್ದಾರೆ. ಆದರೆ, ಮ್ಯಾನ್‌ಹೋಲ್‌ ಸ್ವಚ್ಛತಾ ಕಾರ್ಯದ ವೇಳೆ ಕಾರ್ಮಿಕರು ಯಾವುದೇ ಸುರಕ್ಷತಾ ಸಾಧನಗಳನ್ನು ಧರಿಸಿರಲಿಲ್ಲ. ಅಲ್ಲದೆ, ಯಾವುದೇ ಮುಂಜಾಗ್ರತಾ ಕ್ರಮವನ್ನೂ ಕೈಗೊಳ್ಳದೆ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಲಾಗಿದೆ.

ADVERTISEMENT

ಮಹಾನಗರ ಪಾಲಿಕೆ ಎಂಜಿನಿಯರುಗಳು ಮತ್ತು ರಸ್ತೆ ಅಭಿವೃದ್ಧಿ ಹೊಣೆ ಹೊತ್ತ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಮ್ಯಾನ್‌ಹೋಲ್‌ಗೆ ಕಾಂಕ್ರಿಟ್‌ ತುಂಬಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮ್ಯಾನ್‌ಹೋಲ್‌ಗೆ ಇಳಿದು ಪೌರಕಾರ್ಮಿಕರು ಮೃತಪಟ್ಟ ಘಟನೆಗಳು ಮರುಕಳಿಸುತ್ತಿದ್ದರೂ ಸುರಕ್ಷತಾ ಕ್ರಮಗಳಿಲ್ಲದೆ ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಇಳಿಸಿದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.