ADVERTISEMENT

ಸೂಕ್ಷ್ಮ ಪ್ರದೇಶದಲ್ಲಿ ನೆಡುತೋಪು ಬೆಳೆಸಲು ಸಿದ್ಧತೆ

ಮುತ್ತೋಡಿ ಪ್ರಾದೇಶಿಕ ವಲಯದಲ್ಲಿ ಶೋಲಾ ಅರಣ್ಯ, ಹುಲ್ಲುಗಾವಲು ಅಸ್ತಿತ್ವಕ್ಕೆ ಧಕ್ಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2016, 19:57 IST
Last Updated 1 ಮೇ 2016, 19:57 IST
ಚಿಕ್ಕಮಗಳೂರು ತಾಲ್ಲೂಕಿನ ಮುತ್ತೋಡಿ ಪ್ರಾದೇಶಿಕ ವಲಯದಲ್ಲಿ ಶೋಲಾ ಅರಣ್ಯ ಮತ್ತು ಹುಲ್ಲುಗಾವಲು ನಾಶಪಡಿಸಿ ನೆಡುತೋಪು ಬೆಳೆಸಲು ಗುಂಡಿ ತೆಗೆದಿರುವುದು. –ಪ್ರಜಾವಾಣಿ ಚಿತ್ರ
ಚಿಕ್ಕಮಗಳೂರು ತಾಲ್ಲೂಕಿನ ಮುತ್ತೋಡಿ ಪ್ರಾದೇಶಿಕ ವಲಯದಲ್ಲಿ ಶೋಲಾ ಅರಣ್ಯ ಮತ್ತು ಹುಲ್ಲುಗಾವಲು ನಾಶಪಡಿಸಿ ನೆಡುತೋಪು ಬೆಳೆಸಲು ಗುಂಡಿ ತೆಗೆದಿರುವುದು. –ಪ್ರಜಾವಾಣಿ ಚಿತ್ರ   

ಚಿಕ್ಕಮಗಳೂರು: ಮುತ್ತೋಡಿ ಪ್ರಾದೇಶಿಕ ವಲಯದ ಮಹಲ್ ಗ್ರಾಮ ಸಮೀಪದ ಸಂಪಿಗೆಕಟ್ಟೆಯ ಶೋಲಾ ಅರಣ್ಯ ಹಾಗೂ ಶೋಲಾ ಹುಲ್ಲುಗಾವಲಿನಿಂದ ಕೂಡಿರುವ ಗಿರಿ ಪ್ರದೇಶದಲ್ಲಿ ನೆಡುತೋಪು ಬೆಳೆಸಲು 10 ಸಾವಿರಕ್ಕೂ ಅಧಿಕ ಗುಂಡಿಗಳನ್ನು ತೆಗೆಯುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಸೂಕ್ಷ್ಮ ಪರಿಸರದ ಬೆಟ್ಟಪ್ರದೇಶದಲ್ಲಿ ಗಿಡಗಳನ್ನು ನೆಡಲು ಅರಣ್ಯ ಇಲಾಖೆಯೇ ಅರಣ್ಯೇತರ ಚಟುವಟಿಕೆ ಕೈಗೊಂಡಿರುವುದು ಸ್ಥಳೀಯ ಪರಿಸರಾಸಕ್ತರು ಮತ್ತು ಪ್ರವಾಸಿಗರ ಕೆಂಗಣ್ಣಿಗೂ ಗುರಿಯಾಗಿದೆ.

‘ನಾಲ್ಕು ದಿನಗಳಿಂದ ಹಿಟಾಚಿಗಳ ನೆರವಿನಿಂದ ಗುಂಡಿ ತೆಗೆಯುವ ಕಾಮಗಾರಿ ನಡೆಯುತ್ತಿದೆ. ಈಗಾಗಲೇ 4 ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ತೆಗೆದು, ರಮಣೀಯ ಪ್ರದೇಶದ ನೋಟ ವಿರೂಪಗೊಳಿಸಲಾಗಿದೆ’ ಎಂದು ಸ್ಥಳೀಯ ಪರಿಸರಾಸಕ್ತ ಜಿ.ವೀರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮುತ್ತೋಡಿ ಪ್ರಾದೇಶಿಕ ವಲಯದಲ್ಲಿ ನೆಡುತೋಪು ಬೆಳೆಸುವ ಅವೈಜ್ಞಾನಿಕ ಯೋಜನೆ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಗಿರಿ ಪ್ರದೇಶದ ಬೆಟ್ಟಗಳಲ್ಲಿ ನೆಡುತೋಪು ಮರಗಳು ಯಾವುದೇ ಜಾತಿ ಪ್ರಬೇಧವಾದರೂ ಕೂಡ ಬೆಳೆಸುವುದು ಕಷ್ಟಸಾಧ್ಯ. ಅಲ್ಲಿನ ಭೂಪದರ ಶೋಲಾ ಅರಣ್ಯ ಹಾಗೂ ಹುಲ್ಲುಗಾವಲಿಗೆ ಮಾತ್ರ ಸಹಕಾರಿ. ಸಮುದ್ರ ಮಟ್ಟದಿಂದ ಸುಮಾರು 6 ಸಾವಿರ ಅಡಿ ಎತ್ತರದಲ್ಲಿರುವ ಗಿರಿ ಪ್ರದೇಶವು ತನ್ನದೇ ಆದ ಅರಣ್ಯ ಸಂಕೀರ್ಣತೆ ಹೊಂದಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ನೆಡುತೋಪು ಬೆಳೆಸುವುದು ಅವೈಜ್ಞಾನಿಕ’ ಎನ್ನುತ್ತಾರೆ ಅವರು.

‘ಇಂತಹ ಬೆಟ್ಟ ಶ್ರೇಣಿಗಳಲ್ಲಿ ಅರಣ್ಯ ಇಲಾಖೆ ಅವೈಜ್ಞಾನಿಕವಾಗಿ ನೆಡುತೋಪು ಬೆಳೆಸಲು ಗುಂಡಿಗಳನ್ನು ತೆಗೆಸಿ, ಇತ್ತ ಮರಗಳು ಬೆಳೆಯದೇ ಆ ಪ್ರದೇಶ ಹಾಳುಮಾಡಲಾಗುತ್ತಿದೆ. ಈ ರೀತಿ ತೆಗೆದ ಗುಂಡಿಗಳಿಂದ ಹುಲ್ಲುಗಾವಲಿನ ಮೇಲ್ಪದರ ನಾಶವಾಗುತ್ತಿದೆ. ನೀರನ್ನು ಸಂಗ್ರಹಿಸಿಟ್ಟು ಶೋಲಾ ಅರಣ್ಯಕ್ಕೆ ಉಣಿಸುವ ಪ್ರಕ್ರಿಯೆಗೂ ಧಕ್ಕೆಯಾಗುತ್ತಿದೆ. ನೀರಿನ ಉಗಮ ಸ್ಥಾನಕ್ಕೂ ತೊಂದರೆ’ ಎನ್ನುವುದು ಅವರ ವಾದ.

‘30–40 ವರ್ಷಗಳಿಂದಲೂ ಚಂದ್ರದ್ರೋಣ ಪರ್ವತ ಶ್ರೇಣಿಯ ಕೆಮ್ಮಣ್ಣುಗುಂಡಿ, ಬಾಬಾಬುಡನ್ ಗಿರಿ, ಮುಳ್ಳಯ್ಯನಗಿರಿ ಶ್ರೇಣಿಗಳಲ್ಲಿ ಅರಣ್ಯ ಇಲಾಖೆ ಕೈಗೊಂಡಿರುವ ನೆಡುತೋಪು ಬೆಳೆಸುವ ಯೋಜನೆ ಯಶಸ್ಸು ಕಂಡಿಲ್ಲ. ಹೀಗಿದ್ದರೂ ಕೂಡ ಅರಣ್ಯ ಇಲಾಖೆ ಪ್ರತಿ ವರ್ಷ ನೆಡುತೋಪು ಯೋಜನೆ ಹೆಸರಿನಲ್ಲಿ ಹಣ ವ್ಯಯ ಮಾಡುತ್ತಿದೆ. ಶೋಲಾ ಹುಲ್ಲುಗಾವಲು ಮತ್ತು ಶೋಲಾ ಅರಣ್ಯದ ಅಸ್ತಿತ್ವಕ್ಕೂ ಧಕ್ಕೆ ತರುತ್ತಿದ್ದಾರೆ’ ಎಂದು ದೂರಿದ್ದಾರೆ.

ಶೋಲಾ ಅರಣ್ಯ ಮತ್ತು ಶೋಲಾ ಹುಲ್ಲುಗಾವಲು ಗಿರಿಶ್ರೇಣಿಗೆ ಪ್ರಕೃತಿದತ್ತ ಸೌಂದರ್ಯ ತಂದುಕೊಟ್ಟಿವೆ. ಪಶ್ಚಿಮಘಟ್ಟ ತಪ್ಪಲಿನ ನಿಸರ್ಗ ಸಿರಿ ಕಣ್ತುಂಬಿಕೊಳ್ಳಲು ವರ್ಷ ಪೂರ್ತಿ ಪ್ರವಾಸಿಗರು ದೇಶದ ಮೂಲೆಮೂಲೆಯಿಂದ ಬರುತ್ತಾರೆ. ಪ್ರವಾಸಿಗರನ್ನು ಕೈಬೀಸಿ ಕರೆಯುವ ಪ್ರಾಕೃತಿಕ ಸೌಂದರ್ಯಕ್ಕೆ ಕೊಡಲಿಪೆಟ್ಟು ನೀಡುವ ಕೆಲಸ ನಡೆದಿರುವುದು ಬೇಸರದ ಸಂಗತಿ’ ಎಂದು ಪ್ರವಾಸಿಗ ಜೀವನ್‌ ಪ್ರತಿಕ್ರಿಯಿಸಿದ್ದಾರೆ.

‘ಬೆಂಕಿ ಇನ್ನಿತರ ಕಾರಣಗಳಿಂದ ವರ್ಷ ವರ್ಷವೂ ಶೋಲಾ ಅರಣ್ಯದ ವಿಸ್ತೀರ್ಣ ಕ್ಷೀಣಿಸುತ್ತಿದೆ. ಶೋಲಾ ಅರಣ್ಯ ರಕ್ಷಣೆಗೆ ನೆಡುತೋಪು ಬೆಳೆಸುವುದು ಇಲಾಖೆಯ ನಿಯಮಗಳಲ್ಲಿಯೇ ಇದೆ. ಶೋಲಾ ಅರಣ್ಯದಲ್ಲಿ ಬೆಳೆಯುವ ಮರಗಳ ಬೀಜ ಸಂಗ್ರಹಿಸಿ ಸಸಿ ಬೆಳೆಸಿ ನೆಡಲಾಗುತ್ತಿದೆ. ಕಳೆದ ವರ್ಷ ನೆಟ್ಟಿರುವ ಗಿಡಗಳು ಚೆನ್ನಾಗಿ ಬೆಳೆದಿವೆ’ ಎಂದು ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್‌.ಮಾಣಿಕ್‌ ಪ್ರತಿಕ್ರಿಯಿಸಿದ್ದಾರೆ.

ಮಹಲ್ ಸಮೀಪದ ಸಂಪಿಗೆಕಟ್ಟೆಯ ಗಿರಿ ಶಿಖರಗಳಲ್ಲಿ 12 ವರ್ಷಗಳಿಗೊಮ್ಮೆ ಹೂವು ಅರಳಿ, ಇಡೀ ಗಿರಿಶಿಖರಕ್ಕೆ ಹೂವಿನ ಚಾದರ ಹಾಸಿದಂತೆ ಕಾಣಿಸುವ ಅಪರೂಪದ ನೀಲಿ ಕುರಂಜಿ ಸಸ್ಯ ಸಂಕುಲಕ್ಕೂ ಕೃತಕ ನೆಡುತೋಪುಗಳಿಂದ ಧಕ್ಕೆಯಾಗಲಿದೆ. ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಹಿಟಾಚಿಯಂತಹ ಯಂತ್ರಗಳನ್ನು ಬಳಸಿ ಯದ್ವಾತದ್ವಾ ಗುಂಡಿಗಳನ್ನು ತೋಡುವುದರಿಂದ ಅಪರೂಪದ ಔಷಧೀಯ ಗುಣಗಳುಳ್ಳ ಸಸ್ಯಸಂಪತ್ತು ನಾಶವಾಗುವ ಅಪಾಯವಿದೆ. ಅರಣ್ಯ ಇಲಾಖೆ ಅವೈಜ್ಞಾನಿಕ ನೆಡುತೋಪು ಯೋಜನೆ ಕೂಡಲೆ ನಿಲ್ಲಿಸಬೇಕು. ಅರಣ್ಯೇತರ ಚಟುವಟಿಕೆ ನಡೆಸಲು ಇಲಾಖೆ ಆಸ್ಪದ ನೀಡಬಾರದು ಎಂದು ಸ್ಥಳೀಯ ಪರಿಸರಾಸಕ್ತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.