ADVERTISEMENT

ಸೂಕ್ಷ್ಮ ಮನಸ್ಸಿನವರು ಪೊಲೀಸ್‌ ಇಲಾಖೆಗೆ ಬರಬಾರದು: ಮೀರಾ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಹುಬ್ಬಳ್ಳಿ: ‘ಪೊಲೀಸರ ಮೇಲೆ ಸರ್ಕಾರ, ಮಾಧ್ಯಮ ಹಾಗೂ ಸಾರ್ವಜನಿಕರಿಂದ ಬಹಳ ಒತ್ತಡ ಇದೆ. ಸೂಕ್ಷ್ಮ ಮನಸ್ಸಿನವರು ಈ ಇಲಾಖೆಗೆ ಬರದಿರುವುದು ಒಳ್ಳೆಯದು’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷೆ ಮೀರಾ ಸಕ್ಸೇನಾ ಬುಧವಾರ ಇಲ್ಲಿ ಅಭಿಪ್ರಾಯಪಟ್ಟರು.

‘ಪೊಲೀಸರು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಮಾಧ್ಯಮದವರು ಪದೇ ಪದೇ ಕೇಳುತ್ತಾರೆ. ಮೇಲಧಿಕಾರಿಗಳಿಂದಲೂ ಒತ್ತಡ ಇರುತ್ತದೆ. ಸಾರ್ವಜನಿಕರೂ ಪ್ರಶ್ನಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಕೆಳಹಂತದ ಅಧಿಕಾರಿಗಳು ಒತ್ತಡಕ್ಕೆ ಒಳಗಾಗುವುದು ಸಹಜ. ಅವರಿಗೆ ಕೌನ್ಸೆಲಿಂಗ್‌ ನಡೆಸುವ ಅಗತ್ಯವಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಒತ್ತಡ ನಿವಾರಣೆಗಾಗಿ ಆಯೋಗದ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಪೊಲೀಸರಿಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ಎಸ್‌.ಐ ರೂಪಾ ನಡೆ ಸರಿಯಲ್ಲ
‘ಮೇಲಧಿಕಾರಿಯೊಬ್ಬರು ಕೆಲಸದ ಬಗ್ಗೆ ಪ್ರಶ್ನಿಸುವುದು, ಕಾರಣ ಕೇಳಿ ನೋಟಿಸ್‌ ನೀಡುವುದು ತಪ್ಪೇ ? ಕೇವಲ ವಾಗ್ವಾದ ನಡೆದ ಕಾರಣಕ್ಕೆ  ಎಸ್‌ಐ ರೂಪಾ ಆತ್ಮಹತ್ಯೆಗೆ ಯತ್ನಿಸಿದ್ದು ಸರಿಯಲ್ಲ. ಅವರಿಗೂ ಕೌನ್ಸೆಲಿಂಗ್‌ ನಡೆಸುವ ಅಗತ್ಯವಿದೆ’ ಎಂದು ಮೀರಾ ಅಭಿಪ್ರಾಯಪಟ್ಟರು.

ಪ್ರಕರಣ ಕೋರ್ಟಿನಲ್ಲಿ: ‘ಡಿವೈಎಸ್ಪಿ ಗಣಪತಿ ಅವರ ಮಗ ದೂರು ನೀಡಿದ್ದರು. ಹೀಗಾಗಿ, ಪೊಲೀಸ್‌ ಮಹಾನಿರ್ದೇಶಕರಿಂದ ವರದಿ ಕೇಳಲಾಗಿತ್ತು. ಈಗ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಆಯೋಗ ಈ ಬಗ್ಗೆ ಯಾವ ಹೇಳಿಕೆಯನ್ನು ನೀಡಲು ಇಚ್ಛಿಸುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT