ADVERTISEMENT

ಸೋನಿಯಾ ಕುರಿತು ರವಿ ವಿವಾದಾತ್ಮಕ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 19:29 IST
Last Updated 10 ಮಾರ್ಚ್ 2017, 19:29 IST
ಸಿದ್ದರಾಮಯ್ಯ, ಮುಖ್ಯಮಂತ್ರಿ
ಸಿದ್ದರಾಮಯ್ಯ, ಮುಖ್ಯಮಂತ್ರಿ   

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹೋಗುತ್ತಿರುವ ಕುರಿತು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಡಿರುವ ಟ್ವೀಟ್‌ಗೆ ಕಾಂಗ್ರೆಸ್‌ನಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಸಿ.ಟಿ.ರವಿ ವಿರುದ್ಧ ಕೆಂಡಕಾರಿದ್ದಾರೆ.
ನಿಮ್ಹಾನ್ಸ್‌ಗೆ ಸೇರಿಸಬೇಕು: ಸೋನಿಯಾ ಗಾಂಧಿ ಅವರ ಚಿಕಿತ್ಸೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ರವಿ ಅವರನ್ನು ನಿಮ್ಹಾನ್ಸ್‌ಗೆ ಸೇರಿಸಬೇಕು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹರಿಹಾಯ್ದರು. 

ರವಿ ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆಯನ್ನು ಆರೋಗ್ಯ ಸಚಿವ ರಮೇಶ್ ಕುಮಾರ್  ಮಾಡಬೇಕು ಅಥವಾ ಬಿಜೆಪಿ ನಾಯಕರೇ ಈ ಕೆಲಸ ಮಾಡಬೇಕು ಎಂದರು.

ADVERTISEMENT

ಪ್ರಧಾನಿ ಆಗುವ ಅವಕಾಶ  ಎರಡು ಬಾರಿ ಬಂದಾಗಲೂ ಹುದ್ದೆಯನ್ನು ತ್ಯಾಗ ಮಾಡಿದ ನಮ್ಮ ನಾಯಕಿ ಬಗ್ಗೆ ನೀಡಿರುವ ಹೇಳಿಕೆ ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.

ವಿಕೃತ ಮನಸ್ಸಿನ ಪ್ರತಿಬಿಂಬ: ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ‘ಸೋನಿಯಾ ಕುರಿತ ಟ್ವೀಟ್‌ ಸಿ.ಟಿ. ರವಿ ಮತ್ತು ಬಿಜೆಪಿ ನಾಯಕರ ವಿಕೃತ ಮನಸ್ಸಿನ ಪ್ರತಿಬಿಂಬ. ಮನಸ್ಸಿನಲ್ಲಿ ಕೊಳಕು ಇದ್ದಾಗ ಇಂತಹ ಮಾತುಗಳು ಬರುತ್ತವೆ’ ಎಂದು ಹೇಳಿದ್ದಾರೆ.

ವಾಜಪೇಯಿ ಅವರಿಗೆ ಚಿಕಿತ್ಸೆ ನೀಡಲು ಹಿಂದೆ ವಿದೇಶದಿಂದ ವೈದ್ಯರು ಬಂದಿದ್ದರು. ಏಕೆ ನಮ್ಮ ದೇಶದಲ್ಲಿ ವೈದ್ಯರು ಇರಲಿಲ್ಲವೇ? ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂದು ಹೇಳುವ, ಜೈ ಶ್ರೀರಾಮ್‌, ಭಾರತ್‌ ಮಾತಾಕೀ ಜೈ ಎಂದು ಕೂಗುವವರ ಮುಖವಾಡ ಈಗ ಬಯಲಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಹಿಂದೆ ಅಂಬರೀಷ್ ಸಹ ವಿದೇಶಕ್ಕೆ ಚಿಕಿತ್ಸೆಗಾಗಿ ಹೋಗಿದ್ದರು. ಮತ್ತೊಬ್ಬರ ವೈಯಕ್ತಿಕ ವಿಚಾರಗಳನ್ನು ಮಾತನಾಡುವುದು ಹೇಸಿಗೆ ತರುತ್ತದೆ ಎಂದು ಹೇಳಿದರು.

**

ಮೂರು ಟ್ವೀಟ್‌ಗಳು

‘ಆಶ್ಚರ್ಯವಾಗುತ್ತಿದೆ, ಸೋನಿಯಾಗಾಂಧಿ ವಿದೇಶಕ್ಕೆ ಹೋಗುತ್ತಿರುವುದು ಚಿಕಿತ್ಸೆ ಪಡೆಯಲೋ ಅಥವಾ ತಮ್ಮ  ಖಾತೆಯಲ್ಲಿರುವ ಹಣವನ್ನು ಸುರಕ್ಷಿತ ಜಾಗಕ್ಕೆ ವರ್ಗಾವಣೆ ಮಾಡಲೋ’

‘ಗಾಂಧಿ ಕುಟುಂಬ ಭಾರತದಲ್ಲಿ 6 ದಶಕಗಳ ಆಡಳಿತ ನಡೆಸಿದೆ. ಹೀಗಿದ್ದರೂ ಸೋನಿಯಾಗಾಂಧಿ ಚಿಕಿತ್ಸೆ ಪಡೆಯುವಂತಹ ಉತ್ತಮ ಆಸ್ಪತ್ರೆ ಕಟ್ಟಲು ಸಾಧ್ಯವಾಗದಿರುವುದಕ್ಕೆ ನಾಚಿಕೆಯಾಗಬೇಕು’

‘ರಾಹುಲ್‌ ಗಾಂಧಿ ತಮ್ಮ ತಾಯಿ ಸೋನಿಯಾರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಬಾರದೇಕೆ? ಕರ್ನಾಟಕದ ಮುಖ್ಯಮಂತ್ರಿ ಅವರ ವಿಶೇಷ ಕಾಳಜಿ ವಹಿಸುತ್ತಿದ್ದರು’

**

ಆರೋಗ್ಯ ತಪಾಸಣೆಗಾಗಿ ಸೋನಿಯಾ ವಿದೇಶಕ್ಕೆ
ನವದೆಹಲಿ:
ಆರೋಗ್ಯದ ಸಮಸ್ಯೆಯಿಂದಾಗಿ ಐದು ರಾಜ್ಯಗಳ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದ ಸೋನಿಯಾಗಾಂಧಿ, ಮತ ಎಣಿಕೆಯ ದಿನ ದೇಶದಲ್ಲಿ ಇರುವುದಿಲ್ಲ.

ಸೋನಿಯಾ ಅವರು ಆರೋಗ್ಯ ತಪಾಸಣೆಗಾಗಿ ಬುಧವಾರ ರಾತ್ರಿಯೇ ವಿದೇಶಕ್ಕೆ ಹೋಗಿದ್ದು, ಸೋಮವಾರ ವಾಪಸಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ  ಸೋನಿಯಾ ಅವರು, ವಿದೇಶಕ್ಕೆ ಹೋಗುವ ಮುನ್ನ ಪಕ್ಷದ ಹಿರಿಯ ಮುಖಂಡರು ಹಾಗೂ  ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ಸಭೆ ನಡೆಸಿದ್ದಾರೆ. ಸೋನಿಯಾ ಅವರ ಅನುಪಸ್ಥಿತಿಯಲ್ಲಿ ಜವಾಬ್ದಾರಿಯನ್ನು ರಾಹುಲ್‌ ಅವರು ಪಕ್ಷದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.