ADVERTISEMENT

‘ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿಲ್ಲ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 20:06 IST
Last Updated 24 ಮಾರ್ಚ್ 2017, 20:06 IST

ಬೆಂಗಳೂರು: ‘ನಗರೋತ್ಥಾನ ಯೋಜನೆಯಡಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿಲ್ಲ’ ಎಂದು ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ವಿಧಾನಸಭೆಯಲ್ಲಿ ಶುಕ್ರವಾರ ತಿಳಿಸಿದರು.

ಬಿಜೆಪಿಯ ಬಸವರಾಜ ಬೊಮ್ಮಾಯಿ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೆಲವು ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಬೇಡಿಕೆಗಳಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದರು.

‘ನಗರೋತ್ಥಾನ ಎರಡನೇ ಯೋಜನೆ ಅಡಿ ಈವರೆಗೆ ಶೇ80ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಲಿವೆ. ನಗರೋತ್ಥಾನ ಮೂರನೇ ಯೋಜನೆಯಡಿ ಅನುದಾನದ ಮೊತ್ತವನ್ನು ₹2,800 ಕೋಟಿಗೆ ಹೆಚ್ಚಿಸಲಾಗಿದೆ’ ಎಂದರು.

ಹುದ್ದೆಗಳ ಭರ್ತಿ: ‘ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ‘ಬಿ’ ಮತ್ತು ‘ಸಿ’ ವೃಂದದ 1,129 ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದೂ ಖಂಡ್ರೆ ತಿಳಿಸಿದರು.

ಜೆಡಿಎಸ್‌ನ ಕೆ.ಎಂ.ತಿಮ್ಮರಾಯಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ‘ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪಾವಗಡ ಪುರಸಭೆಯಲ್ಲಿ
ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ಪುರಸಭೆಗಳಲ್ಲಿ ಖಾಲಿ ಇರುವ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಖಾಲಿ ಇರುವ ಕಿರಿಯ ಎಂಜಿನಿಯರ್‌ಗಳ ಹುದ್ದೆಗಳಿಗೆ  ನಿವೃತ್ತ ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ’ ಎಂದರು.

ಅಲ್ಪಸಂಖ್ಯಾತರ ಇಲಾಖೆಗೆ ₹ 2568 ಕೋಟಿ ಅನುದಾನ: ತನ್ವೀರ್‌
ಅಲ್ಪಸಂಖ್ಯಾತರ  ಕಲ್ಯಾಣ ಕಾರ್ಯಕ್ರಮಗಳಿಗಾಗಿ 2013 ರಿಂದ 2016ರವರೆಗೆ ₹2568 ಕೋಟಿಯನ್ನು ಅಲ್ಪಸಂಖ್ಯಾತರ ಇಲಾಖೆಗೆ ಬಿಡುಗಡೆ ಮಾಡಿದ್ದು,  ಇದರಲ್ಲಿ ₹ 48.25 ಕೋಟಿ ಬಳಕೆಯಾಗಿಲ್ಲ ಎಂದು ವಕ್ಫ್‌ ಸಚಿವ ತನ್ವೀರ್ ಸೇಠ್‌ ಹೇಳಿದರು.

ವಿಧಾನಪರಿಷತ್ತಿನಲ್ಲಿ ಶುಕ್ರವಾರ ಕಾಂಗ್ರೆಸ್‌ನ ಅಬ್ದುಲ್ ಜಬ್ಬಾರ್‌ ಪ್ರಶ್ನೆಗೆ  ಸಚಿವರು ಉತ್ತರಿಸಿದರು. 2013–14ರಲ್ಲಿ ₹673ಕೋಟಿ, 2014–15ರಲ್ಲಿ  ₹ 892 ಕೋಟಿ ಹಾಗೂ 2015–16ರಲ್ಲಿ ₹1003 ಕೋಟಿ ಅನುದಾನ ಮಂಜೂರಾಗಿತ್ತು ಎಂದು ಅವರು ತಿಳಿಸಿದರು.

ಶಾದಿಮಹಲ್‌ ಮತ್ತು ಕ್ರೈಸ್ತರ ಅಭಿವೃದ್ಧಿ ಯೋಜನೆಗಳಿಗೆ ಆಯಾ ಆರ್ಥಿಕ ವರ್ಷದ ಕೊನೆಯಲ್ಲಿ ಪ್ರಸ್ತಾವನೆಗಳಿಗೆ ಅನುದಾನ ಮಂಜೂರಾಗಿದ್ದರಿಂದ ಮಾರ್ಚ್‌ 31 ರೊಳಗೆ ಅನುದಾನ ಖರ್ಚು ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ₹ 48.25 ಲಕ್ಷ ವಾಪಸ್‌ ಬಂದಿದೆ ಎಂದು ತನ್ವೀರ್‌ ಸೇಠ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT