ADVERTISEMENT

ಸ್ವಂತದ್ದು ಏನೂ ಇಲ್ಲ; ದುಡಿದದ್ದೂ ಇನ್ನೊಬ್ಬರಿಗೆ!

ರಾಜೇಶ್ ರೈ ಚಟ್ಲ
Published 20 ಜುಲೈ 2017, 7:25 IST
Last Updated 20 ಜುಲೈ 2017, 7:25 IST
ಸ್ವಂತದ್ದು ಏನೂ ಇಲ್ಲ; ದುಡಿದದ್ದೂ ಇನ್ನೊಬ್ಬರಿಗೆ!
ಸ್ವಂತದ್ದು ಏನೂ ಇಲ್ಲ; ದುಡಿದದ್ದೂ ಇನ್ನೊಬ್ಬರಿಗೆ!   

ಬೆಂಗಳೂರು: ಲೈಂಗಿಕ ವೃತ್ತಿನಿರತ ಬಹುತೇಕ ಮಹಿಳೆಯರ ವಾಸಕ್ಕೆ ಒಂದು ಚಿಕ್ಕ ಸೂರೂ ಇಲ್ಲ. ನೀರು, ಶೌಚದಂಥ ಮೂಲಸೌಕರ್ಯಗಳೂ ಇಲ್ಲ. ‘ಕೆಲಸ’ಕ್ಕೆ ತಕ್ಕ ಕೂಲಿಯೂ ಇಲ್ಲ. ನೆಲೆ ಇಲ್ಲದ ಸ್ಥಿತಿಯಲ್ಲೂ ಕುಟುಂಬ ಸಾಕುವ ದೊಡ್ಡ ಹೊಣೆಗಾರಿಕೆಯನ್ನು ಅವರು ನಿಭಾಯಿಸುತ್ತಿದ್ದಾರೆ.

ಮಧ್ಯಮ ಮತ್ತು ಕೆಳಹಂತದ ದಂಧೆಯನ್ನು ಗಮನದಲ್ಲಿಟ್ಟು ಜಯಮಾಲಾ ನೇತೃತ್ವದ ‘ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಅಧ್ಯಯನ ಸಮಿತಿ’ ರಾಜ್ಯದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಗೊತ್ತಾಗಿದೆ.

ಸ್ವಂತದ್ದು ಎಂದು ಏನೂ ಇಲ್ಲದ ಲೈಂಗಿಕ ವೃತ್ತಿ ನಿರತರ ಸಂಖ್ಯೆ ಶೇ 68ರಷ್ಟಿದೆ. ಕೇವಲ ಶೇ 7.9ರಷ್ಟು ಮಂದಿ ಭೂಮಿ ಹೊಂದಿದ್ದಾರೆ. ಶೇ 12.3 ಮಂದಿ ಬಳಿ ಒಂದಷ್ಟು ಬಂಗಾರ ಇದೆ. ಆದರೆ, ಮನೆಯ ಹೊಣೆಗಾರಿಕೆ ಹೊತ್ತು ಕುಟುಂಬ ನಿಭಾಯಿಸಲು ಈ ದಂಧೆ ಅನಿವಾರ್ಯ ಆಯ್ಕೆ ಆಗಿರುವುದನ್ನು ನೋಡಿದರೆ, ಸಾಮಾಜಿಕ ಅಭಿವೃದ್ಧಿಯ ವ್ಯಾಖ್ಯೆಯನ್ನು ಗಂಭೀರವಾಗಿ ಮರು ವಿಶ್ಲೇಷಿಸುವ ಅಗತ್ಯವನ್ನು ತೋರಿಸುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ADVERTISEMENT

ಬಾಡಿಗೆ ಮನೆಯಲ್ಲಿ ಇದ್ದುಕೊಂಡೇ ಶೇ 63ರಷ್ಟು ಮಹಿಳೆಯರು ಈ ದಂಧೆ ನಡೆಸುತ್ತಿದ್ದಾರೆ. ಶೇ 29ರಷ್ಟು ಮಂದಿಗೆ ಮಾತ್ರ ಸ್ವಂತ ಮನೆ ಇದೆ. ಸಂಬಂಧಿಕರ ಮನೆ, ವಸತಿ ನಿಲಯ, ಘರ್‌ವಾಲಿ ಮನೆಯಲ್ಲಿ ಹಲವರು ನೆಲೆಸಿದ್ದಾರೆ. ಬಸ್‌ ಸ್ಟ್ಯಾಂಡ್‌, ಫುಟ್‌ಪಾತ್‌, ಸಾರ್ವಜನಿಕ ಶೌಚಾಲಯ ಆಶ್ರಯಿಸಿಕೊಂಡವರೂ ಇದ್ದಾರೆ. ವಾಸ ಮಾಡುವ ಸ್ಥಳದಲ್ಲೇ ಈ ಮಹಿಳೆಯರು ದಂಧೆ ನಡೆಸುತ್ತಾರೆ. ಲೈಂಗಿಕ ವೃತ್ತಿನಿರತರ ನಿರ್ಗತಿಕ ಸ್ಥಿತಿಗೆ ಈ ಅಂಶಗಳು ಕನ್ನಡಿ ಹಿಡಿಯುತ್ತವೆ.

ತೀರಾ ಗ್ರಾಮೀಣ ಪ್ರದೇಶದಲ್ಲಿ ಈ ದಂಧೆಗೆ ಇಳಿದವರ ಮಹಿಳೆಯರದ್ದು ಇನ್ನೊಂದು ಗೋಳಿನ ಕಥೆ. ಇದ್ದ ಊರಲ್ಲೇ, ಊರ ಹೊರಗಿನ ಬಯಲು, ಗದ್ದೆ, ಕೆಲವೊಮ್ಮೆ ಸ್ಮಶಾನ ಭೂಮಿಯೂ ದಂಧೆ ನಡೆಸುವ ಜಾಗವಾಗುತ್ತದೆ. ಅದನ್ನೆಲ್ಲ ನಿಭಾಯಿಸುವ ಪರಿ ಅಚ್ಚರಿ ಮೂಡಿಸುತ್ತದೆ ಎಂದು ಸಮಿತಿ ಹೇಳಿದೆ.
ಲೈಂಗಿಕ ವೃತ್ತಿನಿರತರ ಪೈಕಿ ಹೆಚ್ಚಿನ ಮಹಿಳೆಯರು (ಶೇ 62) ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಒಂದೇ ಮಗು ಇರುವವರ ಸಂಖ್ಯೆ ಶೇ 35ರಷ್ಟು ಇದೆ. ದಂಧೆಯಿಂದ ಬಂದ ಸಂಪಾದನೆಯಿಂದ ಸಂಸಾರ ನಿಭಾಯಿಸುತ್ತಾರೆ. ಹೀಗೆ ಬರುವ ಹಣದ ಬಹುಪಾಲು ಮಕ್ಕಳ ಯೋಗಕ್ಷೇಮಕ್ಕೆ (ಶೇ 58) ಖರ್ಚು ಆಗುತ್ತದೆ.

ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರು, ಮಹಾನಗರಗಳ ಮಾಲ್‌ಗಳಲ್ಲಿ ಪರಿಚಾರಕಿಯರಾಗಿ ಕೆಲಸ ಮಾಡುವವರು, ಉತ್ತರ ಕರ್ನಾಟಕ ಭಾಗದಿಂದ ಕೆಲಸ ಅರಸಿ ಗುಳೆ ಬಂದ ಕುಟುಂಬದ ಮಹಿಳೆಯರು, ಪ್ರೇಮಪಾಶಕ್ಕೆ ಸಿಲುಕಿ ವಂಚನೆಗೆ ಒಳಗಾದವರೆಲ್ಲ ಈ ದಂಧೆಯಲ್ಲಿ ಸಂಪಾದಿಸಿದ್ದನ್ನು ತಮ್ಮ– ತಂಗಿಯ ಶಿಕ್ಷಣಕ್ಕೆ, ಪಾಲಕರಿಗೆ, ರಕ್ತ ಸಂಬಂಧಿಗಳಿಗೆ, ವಯೋವೃದ್ಧರಿಗೆ ಕಳುಹಿಸುತ್ತಾರೆ.

ಘರ್‌ವಾಲಿಗಳು ದಂಧೆ ನಡೆಸುವ ವೇಶ್ಯಾಗೃಹಗಳು (ಬ್ರಾಥೆಲ್‌), ಲಾಡ್ಜ್‌ಗಳು ಎಲ್ಲ ಜಿಲ್ಲೆಗಳಲ್ಲಿಯೂ ಇವೆ. ಸಂಪಾದನೆಯಲ್ಲಿ ವೇಶ್ಯಾಗೃಹ ಮತ್ತು ಲಾಡ್ಜ್‌ಗಳ ಮಾಲೀಕರಿಗೆ ಪಾಲು ನೀಡಬೇಕು. ಆಯಾ ಪ್ರದೇಶದ ಗೂಂಡಾಗಳಿಗೆ ಹಫ್ತಾ ನೀಡುವ ಜೊತೆಗೆ ಉಚಿತವಾಗಿ ಸೆಕ್ಸ್‌ಗೆ ಸಹಕರಿಸಬೇಕು. ಪೊಲೀಸರೂ ಹಫ್ತಾ ಪಡೆಯುವ ಜೊತೆಗೆ ಬಿಟ್ಟಿ ಸೇವೆ ಪಡೆಯುತ್ತಾರೆ. ಗಣ್ಯಾತಿಗಣ್ಯರು ಈ ಜಾಲದಲ್ಲಿದ್ದಾರೆ. ಒಟ್ಟಿನಲ್ಲಿ ಜಾಲಕ್ಕೆ ಬಿದ್ದ ಹೆಣ್ಣು ಮಕ್ಕಳು ಹಣ ಉತ್ಪಾದಿಸುವ ಯಂತ್ರಗಳಂತೆ ದುಡಿದದ್ದನ್ನೆಲ್ಲ ಇನ್ನೊಬ್ಬರಿಗೆ ನೀಡಿ ಭಯಾನಕ  ಕಾಯಿಲೆಗಳಿಗೆ ತುತ್ತಾಗಿ ಸತ್ತು ಬೀದಿ ಹೆಣವಾದ ಅನೇಕ ಪ್ರಕರಣಗಳು ಸಮಿತಿಯ ಗಮನಕ್ಕೆ ಬಂದಿದೆ.

ದಂಧೆಯಲ್ಲಿರುವ ಹಳ್ಳಿ ಮಹಿಳೆಯರಿಗೆ ತೀರಾ ಇತ್ತೀಚೆಗೆ ಕಾಂಡೋಮ್‌ ಬಳಕೆ ಬಗ್ಗೆ ಸ್ಪಷ್ಟ ಅರಿವು ಆಗಿದೆ. ಹಲವು ವರ್ಷ ಯಾವುದೇ ಲೈಂಗಿಕ ಸುರಕ್ಷತಾ ಕ್ರಮ ಅನುಸರಿಸದೆ ದಂಧೆಗಿಳಿದವರು ಅರಿವಿಲ್ಲದೆ ರೋಗಕ್ಕೆ ತುತ್ತಾಗಿದ್ದಾರೆ. ಗಂಡನಿಂದ ಏಡ್ಸ್‌ ತಗಲಿಸಿಕೊಂಡಿದ್ದರೂ ಅವನು ಸತ್ತು ಹೋದಾಗ ಅನಿವಾರ್ಯವಾಗಿ ಈ ದಂಧೆಗಿಳಿದವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಏಡ್ಸ್‌ ಎಂದು ಗೊತ್ತಾಗುತ್ತಲೇ ತಮ್ಮವರಿಂದ ತಿರಸ್ಕಾರಕ್ಕೆ ಒಳಗಾಗುವವರು ಬದುಕಲು ಅನ್ಯಮಾರ್ಗ ಇಲ್ಲದೆ ದಂಧೆಗಿಳಿದ ಸಂಖ್ಯೆಯೂ ಕಡಿಮೆಯೇನೂ ಇಲ್ಲ.

‘ನನಗೆ 36 ವರ್ಷ. ನಮ್ಮದು ಭೋವಿ ಜಾತಿ. ಮದುವೆ ಆದಾಗ 13 ವರ್ಷ. ನನ್ನ ಗಂಡ ಕಲ್ಲು ಒಡೆಯೋಕೆ ಹೋಗೋರು. ಅಲ್ಲಿ ಕಲ್ಲು ಸಿಡಿದು ತೀರ್ಕೊಂಡ್ರು. ಆಗ ನನಗೆ 16 ವರ್ಷ. ಗಂಡನ ಮನೆಯ ಆಸ್ತಿ ಏನೂ ಇಲ್ಲ. ಅವರು ತೀರಿಕೊಂಡಾಗ ನಾನು ಬಸುರಿ. ತಂದೆ ಮನೇಲಿ ಇದ್ದೆ. ತಂದೆ ಕುಡೀತಿದ್ದ. ಅಣ್ಣ, ತಮ್ಮ ಮದುವೆ ಆದ್ರು. ಮಗಳ ಜವಾಬ್ದಾರಿ ಇತ್ತು. ಅದಕ್ಕೆ ಈ ಕೆಲಸಕ್ಕೆ ಬಂದೆ’ ಎಂದು ಚಿತ್ರದುರ್ಗದ ಲೈಂಗಿಕ ವೃತ್ತಿನಿರತೆಯೊಬ್ಬಳು ತನ್ನ ಮನೆ ಪರಿಸ್ಥಿತಿಯನ್ನು ಸಮಿತಿ ಮುಂದೆ ಬಿಚ್ಚಿಟ್ಟಿದ್ದಾಳೆ.

ಲೈಂಗಿಕ ವೃತ್ತಿನಿರತರ ತಂದೆ, ತಾಯಿ, ಗಂಡ, ಪಾರ್ಟನರ್‌ಗಳಲ್ಲಿ ಬಹುತೇಕ ಕೂಲಿ ಕೆಲಸ ಮಾಡುವವರು. ಶೇ 90ರಷ್ಟು ಮಹಿಳೆಯರು ಬಡತನದ ಕಾರಣಕ್ಕೇ ಈ ದಂಧೆಯಲ್ಲಿ ತೊಡಗಿರುವುದು ಗೋಚರವಾಗಿದೆ.


(ಮುಗಿಯಿತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.