ADVERTISEMENT

ಹಂದಿ, ಕುರಿ ಮಾಂಸವೇ ಪರ್ಯಾಯ

ಜಿ.ಬಿ.ನಾಗರಾಜ್
Published 28 ಮೇ 2017, 19:30 IST
Last Updated 28 ಮೇ 2017, 19:30 IST
ಹಂದಿ, ಕುರಿ ಮಾಂಸವೇ ಪರ್ಯಾಯ
ಹಂದಿ, ಕುರಿ ಮಾಂಸವೇ ಪರ್ಯಾಯ   

ಮೈಸೂರು: ಕೊಲ್ಲುವ ಉದ್ದೇಶಕ್ಕಾಗಿ ಜಾನುವಾರು ಮಾರಾಟಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದರಿಂದ ಮೃಗಾಲಯದ ಪ್ರಾಣಿಗಳಿಗೆ ದನ ಮತ್ತು ಎಮ್ಮೆ ಮಾಂಸದ ಬದಲಿಗೆ ಹಂದಿ, ಕುರಿ ಹಾಗೂ ಕೋಳಿ ಮಾಂಸ ನೀಡಲು ಮೃಗಾಲಯ ಪ್ರಾಧಿಕಾರ ಚಿಂತನೆ ನಡೆಸಿದೆ.

ಆಹಾರ ಕ್ರಮದ ದಿಢೀರ್‌ ಬದಲಾವಣೆ ಪ್ರಾಣಿಗಳ ಮೇಲೆ ಬೀರಬಹುದಾದ ಪರಿಣಾಮಗಳನ್ನು ಪತ್ತೆ ಹಚ್ಚಲು ಪ್ರಾಧಿಕಾರ ಮುಂದಾಗಿದೆ. ದನ ಮತ್ತು ಎಮ್ಮೆಗೆ ಪರ್ಯಾಯವಾಗಿ ಖರೀದಿಸುವ ಮಾಂಸ ಆರ್ಥಿಕವಾಗಿ ಹೊರೆಯಾಗುವ ಸಾಧ್ಯತೆಯ ಕುರಿತು ಗಮನ ಹರಿಸಿದೆ.

ಪ್ರಾಧಿಕಾರದ ಅಧೀನದಲ್ಲಿರುವ 8 ಮೃಗಾಲಯಗಳ ಪೈಕಿ ಮೂರರಲ್ಲಿ ದನ ಮತ್ತು ಎಮ್ಮೆಯ ಮಾಂಸವೇ ಪ್ರಧಾನ ಆಹಾರ. ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ನಿತ್ಯ 10 ಕ್ವಿಂಟಲ್‌, ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ದಿನಕ್ಕೆ 6 ಕ್ವಿಂಟಲ್‌ ಹಾಗೂ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಪ್ರತಿದಿನ 2 ಕ್ವಿಂಟಲ್‌ ದನದ ಮಾಂಸವನ್ನು ಪ್ರಾಣಿಗಳಿಗೆ ಆಹಾರವಾಗಿ ಕೊಡಲಾಗುತ್ತಿದೆ.

ADVERTISEMENT

ಹುಲಿ, ಸಿಂಹ, ಚಿರತೆ, ಸೀಳುನಾಯಿ, ತೋಳ, ಜಾಗ್ವಾರ್‌, ಕತ್ತೆಕಿರುಬ ಸೇರಿ ಹಲವು ಪ್ರಾಣಿ ಹಾಗೂ ಹದ್ದು, ಗೂಬೆ, ಬಕಪಕ್ಷಿ ಸೇರಿ ಅನೇಕ ಪಕ್ಷಿಗಳು ಮಾಂಸಾಹಾರಿಗಳು. ಕುರಿ, ಕೋಳಿಯೊಂದಿಗೆ ದನ ಮತ್ತು ಎಮ್ಮೆ ಮಾಂಸ ನೀಡಲಾಗುತ್ತಿದೆ. ಮೈಸೂರು ಮೃಗಾಲಯ ಈ ವರ್ಷ 1,076 ಕ್ವಿಂಟಲ್‌ ದನದ ಮಾಂಸಕ್ಕೆ ₹ 1.19 ಕೋಟಿಗೆ ಟೆಂಡರ್‌ ನೀಡಿದೆ. ಹಸಿರು ಹುಲ್ಲು (₹ 1.5 ಕೋಟಿ) ಬಿಟ್ಟರೆ ಅತಿ ಹೆಚ್ಚು ವೆಚ್ಚ ಮಾಡುವುದು ಈ ಮಾಂಸ ಖರೀದಿಗೆ.

ಪ್ರವಾಸಿಗರು ಮೃಗಾಲಯದಿಂದ ಮರಳಿದ ಬಳಿಕ ಅಥವಾ ಸಫಾರಿ ಮುಕ್ತಾಯವಾದ ನಂತರ ಮಾಂಸಾಹಾರಿ ಪ್ರಾಣಿಗಳಿಗೆ ಆಹಾರ ನೀಡುವುದು ವಾಡಿಕೆ. ನಿತ್ಯ ಸಂಜೆ 5.30–6.30ರ ಒಳಗೆ ಮಾಂಸಾಹಾರವನ್ನು ಪ್ರಾಣಿಗಳಿಗೆ ನೀಡಲಾಗುತ್ತದೆ.

ಹೆಣ್ಣು ಹುಲಿ ಮತ್ತು ಸಿಂಹಕ್ಕೆ ತಲಾ 8ರಿಂದ 9 ಕೆ.ಜಿ, ಗಂಡು ಸಿಂಹ– ಹುಲಿಗೆ 12ರಿಂದ 14 ಕೆ.ಜಿ. ಮಾಂಸ ಹಾಗೂ ಚಿರತೆಗೆ 6ರಿಂದ 8 ಕೆ.ಜಿ. ನೀಡಲಾಗುತ್ತಿದೆ. ಪ್ರಾಣಿಯ ದೇಹದ ತೂಕದ ಆಧಾರದ ಮೇರೆಗೆ ಇದನ್ನು ನಿರ್ಧರಿಸಲಾಗುತ್ತದೆ.

‘ಕಾಡಿನಲ್ಲಿ ಬೇಟೆ ಆಡಿದ ವ್ಯಾಘ್ರ ಹೊಟ್ಟೆ ತುಂಬ ಮಾಂಸ ಸೇವಿಸುತ್ತದೆ. ಮೂರ್ನಾಲ್ಕು ದಿನ ಅದು ವಿಶ್ರಾಂತಿ ಪಡೆಯುತ್ತದೆ. ಬಳಿಕ ಆಹಾರ ಹುಡುಕಲು ಆರಂಭಿಸುತ್ತದೆ. ಹೀಗಾಗಿ, ಸಮತೋಲನ ಉಂಟಾಗುತ್ತದೆ. ನಿತ್ಯವೂ ಆಹಾರ ಸೇವಿಸುವ ಮೃಗಾಲಯದ ಪ್ರಾಣಿಗಳ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು. ಹೀಗಾಗಿ, ಪ್ರತಿ ಮಂಗಳವಾರ ಈ ಪ್ರಾಣಿಗಳನ್ನು ಉಪವಾಸ ಬಿಡಲಾಗುತ್ತದೆ’ ಎಂದು ಮೃಗಾಲಯದ ಮೂಲಗಳು ಮಾಹಿತಿ ನೀಡಿವೆ.

‘ಕೇಂದ್ರ ಸರ್ಕಾರದ ಆದೇಶ ಇನ್ನೂ ಜಾರಿಯಾಗಿಲ್ಲ. ಆದೇಶ ಜಾರಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಡುವುದರಿಂದ ಸದ್ಯಕ್ಕೆ ಸಮಸ್ಯೆ ಉಂಟಾಗುವುದಿಲ್ಲ. ಆದರೂ, ದನ ಹಾಗೂ ಎಮ್ಮೆಯ ಮಾಂಸಕ್ಕೆ ಪರ್ಯಾಯವಾಗಿ ಬಳಕೆ ಮಾಡಬಹುದಾದ ಆಹಾರದ ಕುರಿತು ಗಂಭೀರವಾಗಿ ಚಿಂತಿಸಲಾಗುವುದು’ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌  ಅವರು ತಿಳಿಸಿದರು.

**

ಆಹಾರ ಕ್ರಮ ಬದಲಾವಣೆ ಬಗ್ಗೆ ಮೃಗಾಲಯಗಳ ಅಧಿಕಾರಿಗಳು ಹಾಗೂ ಪಶುವೈದ್ಯರ ಸಭೆ ಕರೆದು ಚರ್ಚಿಸಲು ನಿರ್ಧರಿಸಲಾಗಿದೆ. ತಜ್ಞರ ಸಲಹೆ ಮೇರೆಗೆ ಮುಂದುವರಿಯುತ್ತೇವೆ.
-ಮಲ್ಲಿಗೆ ವೀರೇಶ್‌,
ಅಧ್ಯಕ್ಷರು, ಮೃಗಾಲಯ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.