ADVERTISEMENT

ಹಗರಣಗಳ ಸರಮಾಲೆ ಬಹಿರಂಗ

ಶಾಸಕ ಸಿ.ಟಿ. ರವಿಗೆ ಜೆಡಿಎಸ್‌ ವಕ್ತಾರ ಬೋಜೇಗೌಡ ತಿರುಗೇಟು

​ಪ್ರಜಾವಾಣಿ ವಾರ್ತೆ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ಹಗರಣಗಳ ಸರಮಾಲೆ ಬಹಿರಂಗ
ಹಗರಣಗಳ ಸರಮಾಲೆ ಬಹಿರಂಗ   
ಚಿಕ್ಕಮಗಳೂರು: ‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಬೆಳವಾಡಿಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದಕ್ಕೆ ಸಂಬಂಧಿಸಿದಂತೆ ಶಾಸಕ ಸಿ.ಟಿ.ರವಿ ಉದ್ಧಟತನದ ಮಾತುಗಳನ್ನಾಡಿದ್ದಾರೆ. ಅವರು ನಾಲಿಗೆಗೆ ಕಡಿವಾಣ ಹಾಕಿಕೊಳ್ಳದಿದ್ದರೆ ಹಗರಣಗಳ ಸರಮಾಲೆ ಬಿಚ್ಚಿಡಬೇಕಾಗುತ್ತದೆ’ ಎಂದು ಜೆಡಿಎಸ್‌ ರಾಜ್ಯ ವಕ್ತಾರ ಎಸ್‌.ಎಲ್‌.ಬೋಜೇಗೌಡ ಇಲ್ಲಿ ತಿರುಗೇಟು ನೀಡಿದರು. 
 
 ‘ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಲ್ಲೊಬ್ಬರು ಮಹಿಳಾ ತಹಶೀಲ್ದಾರ್‌ ಇದ್ದರು. ಅವರ ಪತಿ ‘ಡೆತ್‌ ನೋಟ್‌’ ಬರೆದಿಟ್ಟು ಜಲಾಶಯಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಸಾವಿಗೆ ಯಾರು ಕಾರಣ ಮತ್ತು ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿದ್ದು ನಮಗೆ ಗೊತ್ತಿದೆ. ಪ್ರಕರಣದಲ್ಲಿ ರವಿ ಸಂಬಂಧಿಯೊಬ್ಬರ ಹೆಸರಿದೆ. ವಿವರವನ್ನು ಶೀಘ್ರದಲ್ಲೇ ಬಹಿರಂಗ ಮಾಡುತ್ತೇನೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 
 
‘ಯಾರನ್ನೋ ಮೆಚ್ಚಿಸಲು ರವಿ ಈ ರೀತಿ ನಾಲಿಗೆ ಹರಿ ಬಿಟ್ಟಿದ್ದಾರೆ. ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಯಹತ್ಯೆಗೆ ಯಾರು ಕಾರಣ? ಎಂಬುದು ಗೊತ್ತಿದೆ. ಶೋಭಾ ಕರಂದ್ಲಾಜೆ, ಬಿ.ಎಸ್‌.ಯಡಿಯೂರಪ್ಪ ಬಗ್ಗೆ ಈ ಹಿಂದೆ ರವಿ ಏನು ಮಾತನಾಡಿದ್ದರು ಎಂಬುದನ್ನೂ ಬಿಚ್ಚಿಡುತ್ತೇನೆ’ ಎಂದರು. 
 
‘ಕುಮಾರಸ್ವಾಮಿ ಬೆಳವಾಡಿಗೆ  ಬಂದಿದ್ದಾಗ ರಾತ್ರಿ 11 ಗಂಟೆವರೆಗೆ ನಮ್ಮ ಮನೆಯಲ್ಲಿದ್ದರು. ಇಲ್ಲಿ ಊಟ ಮುಗಿಸಿ ಬೆಳವಾಡಿಗೆ ತೆರಳಿ, ನಿಗದಿಯಾಗಿದ್ದ ರೈತನ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು. ಆ ರೈತನ ಮನೆಯಲ್ಲೇ ಬೆಳಿಗ್ಗೆ ಉಪಾಹಾರ  ಸೇವಿಸಿದ್ದರು. ಎಲ್ಲ ಗೊತ್ತಿದ್ದರೂ, ರವಿ ಅವರು ಜಾಣಕುರುಡು ಪ್ರದರ್ಶಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.