ADVERTISEMENT

ಹಜ್‌ ಯಾತ್ರೆಗೆ ಸಿ.ಎಂ.ಚಾಲನೆ

ಒಟ್ಟು 5 ಸಾವಿರ ಮಂದಿಗೆ ಅವಕಾಶ, 350 ಯಾತ್ರಿಕರ ಮೊದಲ ತಂಡ ಪಯಣ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2015, 20:08 IST
Last Updated 2 ಸೆಪ್ಟೆಂಬರ್ 2015, 20:08 IST

ಬೆಂಗಳೂರು: ಪ್ರಸಕ್ತ ಸಾಲಿನ ಹಜ್‌ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ನಗರದಲ್ಲಿ ಚಾಲನೆ ನೀಡಿದರು. 2015ನೇ ಸಾಲಿನಲ್ಲಿ ಒಟ್ಟು ಐದು  ಸಾವಿರ ಜನ ಬೆಂಗಳೂರಿನಿಂದ ಹಜ್‌ಗೆ ತೆರಳಲಿದ್ದಾರೆ. ಸೆಪ್ಟೆಂಬರ್‌ 3ರಂದು ಹಜ್‌ಗೆ ಪ್ರಯಾಣ ಬೆಳೆಸಲಿರುವ 350 ಯಾತ್ರಿಕರನ್ನು ಒಳಗೊಂಡ ಮೊದಲ ತಂಡಕ್ಕೆ ಸಂಜೆ ನಗರದ ಮಿಲ್ಲರ್ಸ್‍ ರಸ್ತೆಯಲ್ಲಿರುವ ಖುದ್ದೂಸ್‌ ಸಾಹೇಬ್‌ ಈದ್ಗಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಆತ್ಮೀಯವಾಗಿ ಬೀಳ್ಕೊಟ್ಟರು.

‘ಸಲಾಂ ವಾಲೆಕುಂ’ ಎಂದು ಬಳಿಕ ಮಾತು ಆರಂಭಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜ್ಯದಲ್ಲಿ ಈ ಬಾರಿ ಭೀಕರ ಬರಗಾಲ ಇದೆ. ಕಳೆದ 40 ವರ್ಷಗಳ ನಂತರ ಇಂತಹ ಸ್ಥಿತಿ ತಲೆದೋರಿದೆ. ರಾಜ್ಯದ 176 ತಾಲ್ಲೂಕುಗಳ ಪೈಕಿ 130 ತಾಲ್ಲೂಕುಗಳು ಬರಪೀಡಿತವಾಗಿವೆ. ಈ ಸ್ಥಿತಿಯನ್ನು ಎದುರಿಸುವ ಶಕ್ತಿ ನೀಡಲಿ. ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉತ್ತಮ ಮಳೆ, ಬೆಳೆಯಾಗಲಿ ಎಂದು ಯಾತ್ರಿಕರು ಪ್ರಾರ್ಥಿಸಬೇಕು’ ಎಂದು ಮನವಿ ಮಾಡಿದರು.

‘ಜೊತೆಗೇ ನಮ್ಮ ದೇಶ ಹಾಗೂ ರಾಜ್ಯದಲ್ಲಿ ಶಾಂತಿ ನೆಲೆಸುವಂತೆಯೂ ಭಗವಂತನಲ್ಲಿ ಪ್ರಾರ್ಥಿಸಬೇಕು’ ಎಂದು ಕೋರಿದರು. ‘ಕಳೆದ ವರ್ಷ ಕೂಡ ಈ ಸಮಾರಂಭದಲ್ಲಿ ಭಾಗವಹಿಸಿದ್ದೆ. ರಾಜ್ಯ ಸರ್ಕಾರದಿಂದ ನಿರ್ಮಾಣಗೊಳ್ಳುತ್ತಿರುವ ‘ಹಜ್‌ ಘರ್‌’ನಲ್ಲಿ ಮುಂದಿನ ವರ್ಷ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೇಳಿದ್ದೆ. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಅದು ಪೂರ್ಣಗೊಂಡಿಲ್ಲ. ಹಾಗಾಗಿ ಅಲ್ಲಿ ಕಾರ್ಯಕ್ರಮ ಸಂಘಟಿಸಲು ಸಾಧ್ಯವಾಗಿಲ್ಲ’ ಎಂದರು.

‘ಇತ್ತೀಚಿಗೆ ನಾನು ಹಾಗೂ ಸಚಿವ ರೋಷನ್‌ ಬೇಗ್‌ ಅವರು ‘ಹಜ್‌ ಘರ್‌’ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದೇವೆ. ಬಹುತೇಕ ಕೆಲಸ ಪೂರ್ಣಗೊಂಡಿದೆ. ಕೆಲ ತಾಂತ್ರಿಕ ಕಾರಣಗಳಿಂದ ವಿಳಂಬ ಆಗಿರುವುದು ಮನಗಂಡಿದ್ದೇವೆ’ ಎಂದು ಹೇಳಿದರು. ‘ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆ ನಡೆಸಲು, ಸಿಇಟಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದಕ್ಕೆ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳಿಗೆ ತರಬೇತಿ, ವಾಸ್ತವ್ಯ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಆಯೋಜಿಸುವ ರೀತಿಯಲ್ಲಿ ‘ಹಜ್‌ ಘರ್‌’  ನಿರ್ಮಾಣ ಮಾಡಲಾಗುತ್ತಿದೆ. ಇದು ಇಡೀ ದೇಶದಲ್ಲೆ ಮಾದರಿ ಎನಿಸಿಕೊಳ್ಳಲಿದೆ’ ಎಂದು ತಿಳಿಸಿದರು.

‘ಹಜ್‌ ಘರ್‌ ಕೆಲಸ ಆದಷ್ಟು ಬೇಗ ಪೂರ್ಣಗೊಳಿಸಲು ಸರ್ಕಾರ ಅಗತ್ಯ ಹಣಕಾಸಿನ ನೆರವು ನೀಡಲಿದೆ’ ಎಂದೂ ಹೇಳಿದರು. ‘ಇಸ್ಲಾಂ ಧರ್ಮದ ಐದು ತತ್ವಗಳಲ್ಲಿ ಹಜ್‌ ಯಾತ್ರೆ ಕೂಡ ಒಂದು. ಜೀವನದಲ್ಲಿ ಒಮ್ಮೆಯಾದರೂ ಹಜ್‌ ಯಾತ್ರೆ ಕೈಗೊಂಡು ಬದುಕು ಸಾರ್ಥಕ ಮಾಡಿಕೊಳ್ಳಬೇಕು ಎಂಬ ನಂಬಿಕೆ ಇದೆ. ಅದೇ ರೀತಿ ಹಿಂದೂಗಳು ಕಾಶಿ, ರಾಮೇಶ್ವರಕ್ಕೆ ಭೇಟಿ ನೀಡುತ್ತಾರೆ’ ಎಂದರು.

ಇದೇ ವೇಳೆ ಮುಖ್ಯಮಂತ್ರಿಯವರು ರಾಜ್ಯ ಹಜ್‌ ಸಮಿತಿಯು ತಯಾರಿಸಿರುವ  ಹಜ್‌ ಯಾತ್ರೆಗೆ ಸಂಬಂಧಿಸಿದ ಸಾಕ್ಷ್ಯಚಿತ್ರದ ಡಿವಿಡಿ, ಪೋಸ್ಟರ್‌ ಬಿಡುಗಡೆ ಮಾಡಿದರು. ಜೊತೆಗೇ ಹಜ್‌ಗೆ ಪ್ರಯಾಣ ಬೆಳೆಸಲಿರುವ ಮೊದಲ ತಂಡದ ಕೆಲವರಿಗೆ ಸಾಂಕೇತಿಕವಾಗಿ ವಿಮಾನದ ಬೋರ್ಡಿಂಗ್‌ ಪಾಸ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.