ADVERTISEMENT

ಹಾವು ಕಚ್ಚಿದರೆ ಇಲ್ಲ ಔಷಧಿ!

ಎಎಸ್‌ವಿ ಪೂರೈಕೆ: ಟೆಂಡರ್‌ಗೆ ಕಂಪೆನಿಗಳ ನಿರಾಸಕ್ತಿ, ಚುಚ್ಚುಮದ್ದಿನ ಭಾರಿ ಅಭಾವ

ರಾಜೇಶ್ ರೈ ಚಟ್ಲ
Published 23 ಏಪ್ರಿಲ್ 2014, 20:14 IST
Last Updated 23 ಏಪ್ರಿಲ್ 2014, 20:14 IST

ಹುಬ್ಬಳ್ಳಿ: ಜೋಕೆ... ವಿಷಪೂರಿತ ಹಾವು ಕಚ್ಚಿದರೆ ಸೂಕ್ತ ಔಷಧ ಸಿಗದೆ ಜೀವಕ್ಕೇ ಅಪಾಯವಾದೀತು.

ಏಕೆಂದರೆ, ಹಾವಿನಿಂದ ಕಚ್ಚಿಸಿ­ಕೊಂಡವರ  ಜೀವ ಉಳಿಸಲು ಸಂಜೀವಿನಿಯಾಗಿ ಬಳಕೆಯಾಗುವ ಎಎಸ್‌ವಿ (ಆ್ಯಂಟಿ ಸ್ನೇಕ್ ವೆನಮ್) ಚುಚ್ಚುಮದ್ದಿನ ಭಾರಿ ಕೊರತೆ ರಾಜ್ಯದಲ್ಲಿ ಉಂಟಾಗಿದೆ. ಎಎಸ್‌ವಿ ಪೂರೈಸುವಂತೆ ಸರ್ಕಾರ ಟೆಂಡರ್‌ ಕರೆದರೂ ಯಾವುದೇ ಕಂಪೆನಿಗಳು ಭಾಗವಹಿಸುತ್ತಿಲ್ಲ.

ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ರಾಜ್ಯಕ್ಕೆ ವಾರ್ಷಿಕ ಅಂದಾಜು 40 ಸಾವಿರ ಎಎಸ್‌ವಿ ಚುಚ್ಚುಮದ್ದು ಅಗತ್ಯವಿದೆ. ಆದರೆ, ಸದ್ಯಕ್ಕೆ ರಾಜ್ಯದ ಬಹುತೇಕ ಜಿಲ್ಲಾಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ­ಗಳಲ್ಲಿ ಈ ಚುಚ್ಚುಮದ್ದು ಲಭ್ಯ ಇಲ್ಲ. 2 ರಿಂದ 3 ತಿಂಗಳಿಗೆ ಸಾಕಾಗುವಷ್ಟು ಸಂಗ್ರಹ ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡುತ್ತಿದೆಯಾದರೂ, ವಾಸ್ತವವಾಗಿ ಧಾರವಾಡ, ಗದಗ ಸಹಿತ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಚುಚ್ಚುಮದ್ದು ಪೂರೈಸುವ ಸರ್ಕಾರಿ ವೇರ್ ಹೌಸ್‌ನಲ್ಲಿ ಎಎಸ್‌ವಿ ಖಾಲಿಯಾಗಿದೆ.

ರಾಜ್ಯ ಸರ್ಕಾರ 30,000 ಎಎಸ್‌ವಿ ಚುಚ್ಚುಮದ್ದು ಪೂರೈಕೆಗಾಗಿ ಟೆಂಡರ್‌ ಆಹ್ವಾನಿಸಿತ್ತು. ಆದರೆ ಯಾವುದೇ ಕಂಪೆನಿ ಟೆಂಡರ್‌ನಲ್ಲಿ ಭಾಗವಹಿಸದೇ ಇರುವುದರಿಂದ ಪರ್ಯಾಯ ದಾರಿ ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ದೇಶದಲ್ಲಿ ಹೈದರಾಬಾದಿನ ವಿನ್ಸ್‌ ಬಯೋ ಪ್ರಾಡಕ್ಟ್ಸ್‌ ಮತ್ತು ಮಹಾರಾಷ್ಟ್ರದ ಭಾರತ್‌ ಸೆರಮ್‌ ಅಂಡ್‌ ವಾಕ್ಸಿನ್ಸ್‌ ಎಂಬ ಎರಡು ಕಂಪೆನಿ ಮಾತ್ರ ಈ ಚುಚ್ಚುಮದ್ದು ಉತ್ಪಾದಿಸುತ್ತಿವೆ. 2012–13ರಲ್ಲಿ 27 ಸಾವಿರ ಎಎಸ್‌ವಿ ಪೂರೈಸುವಂತೆ ವಿನ್ಸ್‌ ಬಯೋ ಪ್ರಾಡಕ್ಟ್ಸ್‌ ಕಂಪೆನಿಗೆ ಟೆಂಡರ್‌ ನೀಡಲಾಗಿತ್ತು.

ಕಂಪೆನಿ ಅಷ್ಟೂ ಪ್ರಮಾಣದ ಎಎಸ್‌ವಿ ಪೂರೈಕೆ ಮಾಡಿತ್ತು. ಮತ್ತೆ ಶೇಕಡಾ 25ರಷ್ಟು ಹೆಚ್ಚುವರಿಯಾಗಿ ಪೂರೈಸು­ವಂತೆ 2013ರ ಅಕ್ಟೋಬರ್‌ ತಿಂಗಳಲ್ಲಿ ಅದೇ ಕಂಪೆನಿಗೆ ಕೋರಿಕೆ ಸಲ್ಲಿಸಲಾಗಿತ್ತು. ಆದರೆ, ಔಷಧಿ ಉತ್ಪಾದನೆಗೆ ಅಗತ್ಯವಾದ ಕಚ್ಚಾ ವಸ್ತು ಲಭ್ಯ ಇಲ್ಲ ಎಂಬ ಕಾರಣ ನೀಡಿ ಸದರಿ ಕಂಪೆನಿ ಪೂರೈಕೆ ಮಾಡಿಲ್ಲ’ ಎಂದು ರಾಜ್ಯ ಡ್ರಗ್‌ ಲಾಜಿಸ್ಟಿಕ್ ಅಂಡ್‌ ವೇರ್‌ ಹೌಸಿಂಗ್‌ ಸೊಸೈಟಿಯ ಹೆಚ್ಚುವರಿ ನಿರ್ದೇಶಕ ಡಾ. ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ ನೀಡಿದ್ದಾರೆ.

ಉತ್ಪಾದನೆಯೇ ಇಲ್ಲದಿರುವುದರಿಂದ ಮುಕ್ತ ಮಾರುಕಟ್ಟೆಯಲ್ಲಿಯೂ ಕೊರತೆ ಎದುರಾಗಿದೆ. ಹೀಗಾಗಿ ಪ್ರಮುಖ ವೈದ್ಯಕೀಯ ಕಾಲೇಜು ಆಸ್ಪತ್ರೆ­ಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಬೇಡಿಕೆಗೆ ಅನು­ಗುಣ­ವಾಗಿ ಎಎಸ್‌ವಿ ಪೂರೈಸಲು ಕಂಪೆನಿಗಳು ವಿಫಲವಾಗಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ  (ಕಿಮ್ಸ್‌) ನಿರ್ದೇಶಕಿ ವಸಂತಾ ಕಾಮತ್‌, ‘ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಹಾವು ಕಡಿತಕ್ಕೊಳಗಾದವರು ಈ ಭಾಗದ ಪ್ರಮುಖ ಆಸ್ಪತ್ರೆಯಾಗಿರುವ ಕಿಮ್ಸ್‌ಗೆ ಬರುತ್ತಾರೆ. ಇಲ್ಲಿ ವರ್ಷಕ್ಕೆ ಕನಿಷ್ಠ 10 ಸಾವಿರ ಎಎಸ್‌ವಿ ಅಗತ್ಯವಿದೆ. ಆದರೆ ಕಳೆದ ವರ್ಷ ಟೆಂಡರ್‌ ಆಹ್ವಾನಿಸಿದಾಗ ವಿತರಕರು ಕೇವಲ 200 ಎಎಸ್‌ವಿ ಪೂರೈಸಿದ್ದಾರೆ. ಹೀಗಾಗಿ ವರ್ಷದ ಹಿಂದೆ ಮುಕ್ತ ಮಾರುಕಟ್ಟೆಯಲ್ಲಿ ₨ 350ಕ್ಕೆ ಲಭ್ಯವಿದ್ದ ಈ ಚುಚ್ಚುಮದ್ದಿಗೆ ಭಾರಿ ಬೇಡಿಕೆ ಉಂಟಾಗಿದ್ದು ಈಗ ₨ 900 ಕೊಟ್ಟು ಖರೀದಿಸ­ಬೇಕಾಗಿದೆ. ತೀವ್ರ ವಿಷಕಾರಿ ಹಾವು ಕಚ್ಚಿದ್ದರೆ ಮತ್ತು ಚುಚ್ಚುಮದ್ದು ನೀಡಲೇಬೇಕಾದ ಸಂದರ್ಭ ಎದುರಾದರೆ ಮಾತ್ರ ಎಸ್‌ಎಸ್‌ವಿ ನೀಡಲಾಗುತ್ತಿದೆ’ ಎಂದರು.

ಹಾವಿನ ವಿಷವನ್ನು ಕುದುರೆಗೆ ಚುಚ್ಚಿ ಅದರಿಂದ ಎಎಸ್‌ವಿ ತಯಾರಿಸಲಾಗುತ್ತದೆ. ಆದರೆ ಅದಕ್ಕೆ ಪ್ರಾಣಿ ದಯಾ ಸಂಘದ ತೀವ್ರ ವಿರೋಧ, ಜೊತೆಗೆ ನ್ಯಾಷನಲ್‌ ಫಾರ್ಮಾಸ್ಯೂಟಿಕಲ್‌ ಪ್ರೈಸಿಂಗ್‌ ಆಥಾರಿಟಿ ಅಡಿ ದರ ನಿಯಂತ್ರಣ ಆದೇಶಕ್ಕೆ ಈ ಔಷಧ ಒಳಪಟ್ಟಿರುವುದೂ ಕೊರತೆ ಉಂಟಾಗಲು ಕಾರಣ ಎಂದೂ ವೈದ್ಯಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.

ಮಾರುಕಟ್ಟೆ ದರದ ಮೇಲಿನ ನಿಯಂತ್ರಣದಿಂದಾಗಿ ಕಂಪೆನಿಗಳು ಹೆಚ್ಚಿನ ಪ್ರಮಾಣದಲ್ಲಿ ಎಎಸ್‌ವಿ ಉತ್ಪಾದಿಸಲು ಹಿಂಜರಿಯುತ್ತಿವೆ ಎಂಬ ಮಾತಿದೆ.
ಆರೋಗ್ಯ ಇಲಾಖೆಯ ಪ್ರಕಾರ ರಾಜ್ಯದಲ್ಲಿ 2013ರಲ್ಲಿ 9,199 ಮಂದಿ ಹಾವು ಕಡಿತಕ್ಕೆ ಒಳ­ಗಾಗಿದ್ದು, ಈ ಪೈಕಿ 136 ಮಂದಿ ಮೃತಪಟ್ಟಿದ್ದಾರೆ. ಈ ವರ್ಷ (2014)ರ ಮೊದಲ ಎರಡು ತಿಂಗಳಲ್ಲಿ (ಫೆಬ್ರವರಿ ಅಂತ್ಯದವರೆಗೆ) 886 ಪ್ರಕರಣಗಳಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.