ADVERTISEMENT

ಹಾಸನದ ಸಂಸ್ಥೆ ವಂಚನೆ: ಆರೋಪ

ವಿದೇಶದಲ್ಲಿ ಉದ್ಯೋಗ ಆಮಿಷ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST

ಹಾಸನ: ನರ್ಸಿಂಗ್‌ ಕೋರ್ಸ್‌ ಮಾಡಿದ­ವರಿಗೆ ವಿದೇಶದಲ್ಲಿ ಉದ್ಯೋಗ ಕೊಡು­ವುದಾಗಿ ಭರವಸೆ ನೀಡುತ್ತಿದ್ದ ಹಾಸನ ಮೂಲದ ಸಂಸ್ಥೆಯೊಂದು ಈಗ ವಂಚನೆ ಆರೋಪ ಎದುರಿಸುತ್ತಿದೆ. ಬಹರೇನ್‌ ಮೂಲದ ಮಹಿಳೆಯೊ­ಬ್ಬರಿಗೆ ಈ ಸಂಸ್ಥೆ ವಂಚನೆ ಮಾಡಲು ಪ್ರಯತ್ನಿಸಿತ್ತು ಎಂದು ಅಲ್ಲಿನ ‘ಡೇಲಿ ಟ್ರಿಬ್ಯೂನ್‌’ ಪತ್ರಿಕೆ ವರದಿ ಮಾಡಿದೆ.

ಹಾಸನದ ಬಿ. ಕಾಟಿಕಳ್ಳಿಯಲ್ಲಿರುವ ‘ಹೋಪ್‌ ಇಂಡಿಯಾ ಫೌಂಡೇಷನ್‌’ ಆರೋಪಕ್ಕೆ ಒಳಗಾಗಿರುವ ಸಂಸ್ಥೆ. ಅದು ಬಹರೇನ್‌ನ ಲೊವೀನಾ ಫಿಲಿಪ್‌ ಎಂಬು­ವವರನ್ನು ವಂಚಿಸಲು ಮುಂದಾ­ಗಿತ್ತು ಎಂದು ಬಹರೇನ್‌ನ ‘ಡೇಲಿ ಟ್ರಿಬ್ಯೂನ್‌’ ಸೆ.19ರ ಸಂಚಿಕೆಯಲ್ಲಿ ವರದಿ ಮಾಡಿದೆ.

ಸುದ್ದಿ ಪ್ರಕಾರ, ನರ್ಸಿಂಗ್‌ ಕೋರ್ಸ್‌ ಮುಗಿಸಿದ್ದ ಲೊವೀನಾ ಫಿಲಿಪ್‌ ಯುರೋ­ಪ್‌­ನಲ್ಲಿ ಉದ್ಯೋಗಕ್ಕಾಗಿ ಹುಡು­­ಕಾಟ ನಡೆಸಿದ್ದರು. ಅವರಿಗೆ ಹಾಸ­ನದ ಹೋಪ್‌ ಇಂಡಿಯಾ ಫೌಂಡೇ­ಷನ್‌ನಿಂದ ಬಂದ ಇ ಮೇಲ್‌­ನಲ್ಲಿ, ‘ಜರ್ಮನಿಯ ಕೆಮಿಲಿಯ ಇನ್‌­ಸ್ಟಿ­ಟ್ಯೂಟ್‌ ಆಫ್‌ ಹೆಲ್ತ್‌ ಸೈನ್ಸ್‌­ನಲ್ಲಿ ಉದ್ಯೋಗಾವಕಾಶ ಇದೆ. ನಾವು ಆ ಸಂಸ್ಥೆಗೆ ಅಧಿಕೃತ ನೇಮಕಾತಿ ಏಜೆಂಟರು’ ಎಂದು ನಮೂದಿಸಿತ್ತು. ಇದನ್ನು ನಂಬಿದ ಲೊವೀನಾ ಅರ್ಜಿ ಸಲ್ಲಿ­ಸಿದ್ದರು. ಕೂಡಲೇ ಅವರಿಗೆ ಸಂಸ್ಥೆ­ಯಿಂದ ಇನ್ನೊಂದು ಮೇಲ್‌ ತಲುಪಿತು.

ಅದರಲ್ಲಿ ‘ನೀವು ಆಯ್ಕೆಯಾಗಿ­ದ್ದೀರಿ, ನೋಂದಣಿ ಶುಲ್ಕವಾಗಿ ನಮ್ಮ ಬ್ಯಾಂಕ್‌ ಖಾತೆಗೆ (ಹಾಸನದ ಬ್ಯಾಂಕ್‌) ₨ 90 ಸಾವಿರ ಜಮೆ ಮಾಡಬೇಕು ಮತ್ತು ಮುಂದಿನ ದಿನಗಳಲ್ಲಿ ಪ್ರಕ್ರಿಯೆ (ಪ್ರೋಸೆಸಿಂಗ್‌) ಶುಲ್ಕವಾಗಿ ₨ 6 ಲಕ್ಷ ಕೊಡಬೇಕು. ಅರ್ಜಿ ಪ್ರೋಸೆಸ್‌ ಆಗಲು 9 ರಿಂದ 12 ತಿಂಗಳ ಕಾಲಾವಕಾಶ ಬೇಕಾಗುತ್ತದೆ’ ಎಂದು ತಿಳಿಸಲಾಗಿತ್ತು.

ಲೊವೀನಾ ಹಣ ನೀಡಲು ಮುಂದಾ­­­­ಗಿ­­ದ್ದರು. ಆದರೆ, ಅವರ ಸಂಬಂಧಿ­ಯೊ­ಬ್ಬರು ‘ಹಣ ಪಾವತಿಗೂ ಮೊದಲು ಜರ್ಮನ್‌ ರಾಯಭಾರ ಕಚೇರಿ­ಯಿಂದ ಒಮ್ಮೆ ಖಚಿತಪಡಿಸಿ­ಕೊಳ್ಳಿ’ ಎಂದು ಸಲಹೆ ನೀಡಿದರು. ನಂತರ ಲೊವೀನಾ ರಾಯಭಾರ ಕಚೇರಿ ಸಂಪರ್ಕಿಸಿದಾಗ ಇದು ವಂಚನೆ ಎಂಬ ಮಾಹಿತಿ ಲಭಿಸಿದೆ’ ಎಂದು ಪತ್ರಿಕೆ ವರದಿ ಮಾಡಿದೆ. ಈ ಬಗ್ಗೆ ‘ಡೇಲಿ ಟ್ರಿಬ್ಯೂನ್‌’ಗೆ ಹೇಳಿಕೆ ನೀಡಿರುವ ಜರ್ಮನಿ ರಾಯಭಾರಿ ಕಚೇರಿ ಉಪ ಮುಖ್ಯಸ್ಥ ಹಾಲ್ಗರ್‌ ಟಲ್ಮನ್‌, ‘ಜರ್ಮನಿಯ ಆಸ್ಪತ್ರೆಗಳಿಗೆ ಭಾರತೀಯರನ್ನು ನೇಮಕ ಮಾಡುವುದಿಲ್ಲ’ ಎಂದಿದ್ದಾರೆ.

ಬಾಡಿಗೆ ಮನೆಯಲ್ಲಿ: ಹಾಸನ ನಗರ­ದಿಂದ ದೂರದಲ್ಲಿರುವ ಹಾಗೂ ರಸ್ತೆ ಮತ್ತಿತರ ಹೆಚ್ಚಿನ ಸೌಲಭ್ಯಗಳಿಲ್ಲದ ಬಿ. ಕಾಟಿಹಳ್ಳಿ ಗ್ರಾಮದ ಮೂಲೆಯೊಂದ­ರಲ್ಲಿ ಬಾಡಿಗೆ ಮನೆ ಪಡೆದು ಅಲ್ಲಿ ಈ ಸಂಸ್ಥೆ ನಡೆಸಲಾಗುತ್ತಿದೆ. ಸಂಸ್ಥೆಯ ಕಚೇರಿ ಎಂದು ಅವರ ಅಂತರ್ಜಾಲ ತಾಣದಲ್ಲಿ ಹೇಳಿದ್ದರೂ, ಆ ಮನೆ­ಯಲ್ಲಿ ಐದಾರು ಮಂದಿ ನರ್ಸಿಂಗ್‌ ಹುಡುಗರು (ಉತ್ತರ ಭಾರತದವರು) ವಾಸವಾಗಿ­ದ್ದಾರೆ. ಮನೆಯ ಮೇಲೆ ಇತ್ತೀಚಿನ­ವರೆಗೂ ಹೋಪ್‌ ಇಂಡಿಯಾ ಸಂಸ್ಥೆ ಎಂಬ ಫಲಕವಿತ್ತು. ಕೆಲವು ದಿನಗಳ ಹಿಂದೆ ತೆಗೆದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.

ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥ ಕೇರಳ ಮೂಲದ ಬೈಜು ಜೋಸೆಫ್‌ ಅವರನ್ನು ಸಂಪರ್ಕಿಸಿದಾಗ, ಮೊದಲಿಗೆ ಅವರು ಬಹರೇನ್‌ನ ಪತ್ರಿಕಾ ವರದಿ ತಳ್ಳಿ ಹಾಕಿ­ದರು. ‘ನನಗೂ ಇಂಥ ಒಂದು ಮೇಲ್‌ ಬಂದಿದೆ. ನಮ್ಮ ವಕೀಲರು ಇದಕ್ಕೆ ಉತ್ತರ ಕೊಡುತ್ತಾರೆ. ಜರ್ಮನಿಯಲ್ಲಿ ಭಾರತೀಯರನ್ನು ನೇಮಕ ಮಾಡುವು­ದಿಲ್ಲ ಎಂಬ ಮಾಹಿತಿ ಸುಳ್ಳು.

ಈಚೆಗೆ ಅಲ್ಲಿನ ಸರ್ಕಾರವೇ ಕೇರಳದ ಎರಡು ಪತ್ರಿಕೆಗಳಲ್ಲಿ ಜಾಹೀರಾತು ನೀಡಿತ್ತು. ಜರ್ಮನಿಯ ಆಸ್ಪತ್ರೆಗಳಲ್ಲಿ ನರ್ಸ್‌ ನೆೇಮಕ ಮಾಡಲು ನಮ್ಮ ಸಂಸ್ಥೆ ಅಧಿಕೃತ ಏಜೆನ್ಸಿ ಅಲ್ಲ. ಆದರೆ, ನನಗೆ ಅಲ್ಲಿ ಕೆಲವು ಸೇಹಿತರಿದ್ದಾರೆ. ಅಲ್ಲಿ ಉದ್ಯೋಗ ಅರಸುವ ಭಾರತೀಯರಿಗೆ ಅವರ ಮೂಲಕ ನಾವು ನೆರವು ನೀಡುತ್ತೇವೆ’ ಎಂದು ತಿಳಿಸಿದರು.

‘₨ 90 ಸಾವಿರ ನೋಂದಣಿ ಶುಲ್ಕ ಕೇಳುತ್ತೇವೆ ಎಂಬುದು ನಿಜ. ಆಯ್ಕೆ­ಯಾಗುವ ಅಭ್ಯರ್ಥಿಗೆ ನಾವು ಜರ್ಮನ್‌ ಭಾಷಾ ತರಗತಿ ನಡೆಸು­ತ್ತೇವೆ. ಅದಕ್ಕಾಗಿ ಈ ಶುಲ್ಕ. 6  ಲಕ್ಷ ರೂಪಾಯಿ ಕೇಳಿಲ್ಲ’ ಎಂದರು.  ‘ಲೊವೀನಾ ವಿಚಾರ ಇನ್ನೂ ನನ್ನ ಗಮನಕ್ಕೆ ಬಂದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.