ADVERTISEMENT

‘ಹಿಂದೂ ಯುವಕರ ಹತ್ಯೆ ಹಿಂದೆ ಸರ್ಕಾರದ ಕೈವಾಡ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 19:30 IST
Last Updated 12 ಡಿಸೆಂಬರ್ 2017, 19:30 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಯಾದಗಿರಿ: ‘ರಾಜ್ಯದಲ್ಲಿ ಹಿಂದೂ ಯುವಕರ ಹತ್ಯೆ ಹಿಂದೆ ರಾಜ್ಯ ಸರ್ಕಾರದ ಕೈವಾಡ ಇದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಈವರೆಗೆ 20ಕ್ಕೂ ಹೆಚ್ಚು ಹಿಂದೂ ಯುವಕರ ಕೊಲೆ ನಡೆದಿವೆ. ಒಬ್ಬೊಬ್ಬ ಯುವಕರ ಕೊಲೆಗೆ ಕಾಂಗ್ರೆಸ್‌ ಮುಖಂಡರ ಕುಮ್ಮಕ್ಕು ಇದೆ. ಸ್ಪಷ್ಟ ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ’ ಎಂದರು.

‘ಹಿಂದೂ ಯುವಕರ ಕೊಲೆಗಳಿಗೆ ಕಾರಣರಾದವರನ್ನು ಸರ್ಕಾರ ಈವರೆಗೂ ಬಂಧಿಸಿಲ್ಲ. ಈಗ ಯುವಕ ಪರೇಶ್ ಮೇಸ್ತನ ಕೊಲೆ ಆಗಿದೆ. ಇದರಿಂದ ಆಕ್ರೋಶಗೊಂಡಿರುವ ಅಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಪರಾಧಿಗಳನ್ನು ಬಂಧಿಸಲು ಮುಂದಾಗದ, ಚಕಾರ ಎತ್ತದ ಮುಖ್ಯಮಂತ್ರಿಯವರು ಪ್ರತಿಭಟನೆ ಹತ್ತಿಕ್ಕಲು ಮಾತ್ರ ಯತ್ನಿಸುತ್ತಾರೆ ಎಂದರೆ ಏನರ್ಥ’ ಎಂದು ಪ್ರಶ್ನಿಸಿದರು.

ADVERTISEMENT

‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ನ್ಯಾಷನಲ್‌ ಕ್ರೈಂ ರೆಕಾರ್ಡ್ ಬ್ಯೂರೊ ವರದಿ ಪ್ರಕಾರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಒಟ್ಟು 45,795 ಅಪರಾಧ ಪ್ರಕರಣ ದಾಖಲಾಗಿವೆ. ಬೆಂಗಳೂರಿನ ಎರಡರಷ್ಟು ಜನಸಂಖ್ಯೆ ಹೊಂದಿರುವ ಮುಂಬೈನಲ್ಲಿ  39 ಸಾವಿರ ಅಪರಾಧ ಪ್ರಕರಣ ದಾಖಲಾಗಿವೆ. ರಾಜ್ಯದಲ್ಲಿ ಅಪರಾಧ ಪ್ರಕರಣಗಳು ನಿತ್ಯ ಹೆಚ್ಚಿರುವುದನ್ನು ಈ ಅಂಕಿಅಂಶ ಎತ್ತಿ ತೋರಿಸುತ್ತದೆ. ಇದು ಸರ್ಕಾರದ ದೊಡ್ಡ ವೈಫಲ್ಯ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.