ADVERTISEMENT

ಹಿರಿಯ ನಟಿ ಹರಿಣಿಗೆ ರಾಜ್‌ಕುಮಾರ್‌ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST
ಹರಿಣಿ
ಹರಿಣಿ   

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನದ ಸೇವೆಯನ್ನು ಪುರಸ್ಕರಿಸಿ ಹಿರಿಯ ನಟಿ ಹರಿಣಿ ಅವರಿಗೆ 2015ನೇ ಸಾಲಿನ ‘ಡಾ. ರಾಜಕುಮಾರ್ ಪ್ರಶಸ್ತಿ’ ಪ್ರಕಟಿಸಲಾಗಿದೆ. ‘ಪುಟ್ಟಣ್ಣ ಕಣಗಾಲ್’ ಪ್ರಶಸ್ತಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ಗೆ ಸಂಗೀತ ನಿರ್ದೇಶಕ ರಾಜನ್ ಅವರು ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ ಎರಡು ಲಕ್ಷ ರೂಪಾಯಿ ನಗದು  ಮತ್ತು ಐವತ್ತು ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.

ಪ್ರಶಸ್ತಿಗಳ ಆಯ್ಕೆಗಾಗಿ ನಿರ್ದೇಶಕ ಭಗವಾನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ತಮ್ಮ ವೃತ್ತಿ ಜೀವನದದಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದ ಹರಿಣಿ, ‘ಜಗನ್ಮೋಹಿನಿ’, ‘ಕನ್ಯಾದಾನ’, ‘ನಾಂದಿ’ ಚಿತ್ರಗಳ ಮೂಲಕ ಚಿತ್ರರಸಿಕರ ಗಮನ ಸೆಳೆದಿದ್ದರು. ‘ಉಂಡೂ ಹೋದ ಕೊಂಡೂ ಹೋದ’ ಚಿತ್ರದ ಮೂಲಕ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ ಈವರೆಗೆ 13 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಂಗೀತ ನಿರ್ದೇಶಕ ರಾಜನ್ ಅವರು ಸಹೋದರ ನಾಗೇಂದ್ರ ಜತೆಗೂಡಿ ಸುಮಾರು 175 ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

* ಈ ಪ್ರಶಸ್ತಿ ಸೇರಿದಂತೆ ಎಲ್ಲ ಪುರಸ್ಕಾರಗಳ ಶ್ರೇಯ ಶ್ರೋತೃಗಳಿಗೆ ಸಲ್ಲುತ್ತದೆ. ಜನರು ನಮ್ಮ ಚಿತ್ರಗಳ ಹಾಡುಗಳನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ ಎಂಬುದೇ ಖುಷಿಯ ಸಂಗತಿ.
–ರಾಜನ್ , ಸಂಗೀತ ನಿರ್ದೇಶಕ

* ನನ್ನ ಚಿತ್ರಗಳಲ್ಲಿ ಸಾಹಿತ್ಯದ ಸಂವೇದನೆಯಿದೆ. ಅಂಥ ಸಿನಿಮಾಗಳಿಗೆ ನಿರ್ಮಾಪಕರ ನೆರವೂ ಬೇಕು.  ಈ ಪ್ರಶಸ್ತಿಯನ್ನು ‘ಇಷ್ಟಕಾಮ್ಯ’ ನಿರ್ಮಾ ಪಕ ಶಂಕರೇಗೌಡರಿಗೆ ಅರ್ಪಿಸುವೆ.
–ನಾಗತಿಹಳ್ಳಿ ಚಂದ್ರಶೇಖರ, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT