ADVERTISEMENT

ಹಿರೇಮಠ ವಿರುದ್ಧದ ತನಿಖೆ ಹೊಣೆ ಇ.ಡಿಗೆ

ವಿದೇಶಿ ದೇಣಿಗೆ ಹಣ ದುರುಪಯೋಗ ವಿವಾದ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 19:30 IST
Last Updated 22 ಏಪ್ರಿಲ್ 2014, 19:30 IST

ಬೆಂಗಳೂರು: ಸಮಾಜ ಪರಿವರ್ತನ ಸಮುದಾಯದ  ಅಧ್ಯಕ್ಷ ಎಸ್‌.ಆರ್‌.ಹಿರೇಮಠ ಅವರು ವಿದೇಶಿ ಸಂಸ್ಥೆಗಳಿಂದ ಪಡೆದ ದೇಣಿಗೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ರಮೇಶ ಕುಮಾರ್‌ ಕೊಟ್ಟಿರುವ ದೂರಿನ ಬಗ್ಗೆ ತನಿಖೆ ನಡೆಸಲು ಜಾರಿ ನಿರ್ದೇಶನಾಲಯವನ್ನು (ಇ.ಡಿ) ಕೋರಲಾಗಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್‌ ಮಂಗಳವಾರ ಇಲ್ಲಿ ತಿಳಿಸಿದರು.

‘ರಮೇಶಕುಮಾರ್‌ ಅವರು ವಿಧಾನಸಭೆ­ಯಲ್ಲೂ ವಿದೇಶಿ ದೇಣಿಯ ದುರುಪಯೋಗದ ಬಗ್ಗೆ ಪ್ರಸ್ತಾಪ ಮಾಡಿ ತನಿಖೆಗೆ ಒತ್ತಾಯಿಸಿದ್ದರು. ಈ ಸಂಬಂಧ ನನಗೆ ಲಿಖಿತ ದೂರು ಕೂಡ ಕೊಟ್ಟಿದ್ದರು. ವಿದೇಶಿ ಸಂಸ್ಥೆಗಳಿಂದ ಹಣ ಪಡೆದ ವಿಷಯವನ್ನು ರಾಜ್ಯ ಸರ್ಕಾರ ತನಿಖೆ ಮಾಡಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಅದನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಲಾಗಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಈ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ ತಮ್ಮ ಇಲಾಖೆಯಿಂದ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.

ಪೊಲೀಸ್‌ ಅಧಿಕಾರಿಗಳ ವರ್ಗಾವಣೆ?: ‘ಮೈಸೂ­ರಿನ ಇಲವಾಲದಲ್ಲಿ ವಶಕ್ಕೆ ತೆಗೆದುಕೊಂಡಿದ್ದ ₨2.25 ಕೋಟಿ ಹಣವನ್ನು ಪೊಲೀಸರೇ ಹಂಚಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆದಿದೆ.  ಇದೇ ವಿಷಯದಲ್ಲಿ ಮೈಸೂರು ಜಿಲ್ಲೆಯಲ್ಲಿನ ಹಿರಿಯ ಅಧಿಕಾರಿಗಳ ವರ್ಗಾವಣೆಗೆ ಸಿಐಡಿ ಕೋರಿಕೆ ಸಲ್ಲಿಸಿದ್ದು, ಅದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ’ ಎಂದು ಅವರು ವಿವರಿಸಿದರು.

ಹಿರಿಯ ಅಧಿಕಾರಿಗಳು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನುವ ಆರೋಪಗಳ ಬಗ್ಗೆಯೂ ಸಿಐಡಿ ತನಿಖೆ ನಡೆಸಲಿದೆ ಎಂದರು.

ಗುಲ್ಬರ್ಗದ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಸಾವಿನ ಬಗ್ಗೆ ಸಿಐಡಿ ತನಿಖೆ ನಡೆದಿದ್ದು, ಅದು ಹತ್ತು ದಿನದಲ್ಲಿ ಮುಗಿಯುವ ಸಾಧ್ಯತೆ ಇದೆ. ಪೊಲೀ­ಸರ ಗುಂಡಿನಿಂದಲೇ ಬಂಡೆ ಸತ್ತಿದ್ದಾರೆ­ನ್ನು­ವುದು ಊಹಾ­ಪೋಹ. ತನಿಖೆ ನಂತರವೇ ಎಲ್ಲವೂ ಸ್ಪಷ್ಟವಾ­ಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿಎಂ ತೀರ್ಮಾನಕ್ಕೆ: ಶೃಂಗೇರಿ ಬಳಿ ನಕ್ಸಲ್‌ ನಿಗ್ರಹ ಪಡೆಯ ಸಿಬ್ಬಂದಿಯೊಬ್ಬರು ಕಬೀರ್‌ ಎಂಬುವರನ್ನು ಗುಂಡಿಕ್ಕಿ ಸಾಯಿಸಿರುವ ಪ್ರಕರಣ ಕುರಿತು ಸಿಐಡಿ ಮತ್ತು ಮ್ಯಾಜಿಸ್ಟೀರಿಯಲ್‌ ತನಿಖೆ ನಡೆದಿದೆ. ಪ್ರಾಥಮಿಕ ಹಂತದ ವರದಿ ಬಂದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

‘ಸಿಬಿಐ ತನಿಖೆ ಅಗತ್ಯ ಬಿದ್ದರೆ ಕೊಡುವುದಕ್ಕೆ ನಮ್ಮದೇನೂ ವಿರೋಧ ಇಲ್ಲ. ಅದನ್ನು ಮುಖ್ಯಮಂತ್ರಿ  ತೀರ್ಮಾನ ಮಾಡುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿರಿಯರು...!
‘ನಿಮ್ಮದೇ ಪಕ್ಷದ ಮುಖಂಡ ಜನಾರ್ದನ ಪೂಜಾರಿ ಅವರು ನಿಮ್ಮನ್ನು ದುರ್ಬಲ ಗೃಹ ಸಚಿವರು ಎಂದು ಟೀಕಿಸಿದ್ದಾರಲ್ಲ’ ಎಂದು ಪತ್ರ­ಕರ್ತರು ಕೇಳಿದ ಪ್ರಶ್ನೆಗೆ  ಉತ್ತರಿಸಿದ ಸಚಿವ ಜಾರ್ಜ್‌, ‘ಅವರು ಹಿರಿಯ ಮುಖಂ­ಡರು. ಅವರ ಅಭಿಪ್ರಾಯವನ್ನು ಅವರು ಹೇಳಿದ್ದಾರೆ’ ಎಂದು  ಪ್ರತಿಕ್ರಿಯಿಸಿದರು.

3 ತಿಂಗಳ ನಂತರ ತೀರ್ಮಾನ
ಬೆಂಗಳೂರು ನಗರದಲ್ಲಿ ತಡರಾತ್ರಿ ವರೆಗೂ ಹೋಟೆಲ್‌ಗಳನ್ನು ತೆರೆಯಲು ಅವಕಾಶ ನೀಡಿ ಎರಡು ತಿಂಗಳಾಗಿದ್ದು, ಇನ್ನೂ ಒಂದು ತಿಂಗಳ ನಂತರ ಆ ಕುರಿತು ಪರಿಶೀಲಿಸಲಾಗುವುದು ಎಂದು ಗೃಹಸಚಿವ ಕೆ.ಜೆ.ಜಾರ್ಜ್‌ ಹೇಳಿದರು.

‘ಇದುವರೆಗೂ ಯಾವುದೇ ಸಮಸ್ಯೆ ಆಗಿಲ್ಲ. ಇನ್ನೂ ಒಂದು ತಿಂಗಳ ನಂತರ ಎಲ್ಲವನ್ನೂ ಪರಿ­ಶೀ­ಲಿಸಿ, ಅದನ್ನು ವಿಸ್ತರಿಸಬೇಕೇ ಅಥವಾ ಬೇಡವೇ ಎನ್ನುವುದರ ಬಗ್ಗೆ ತೀರ್ಮಾನಿಸ­ಲಾ­ಗು­ವುದು’ ಎಂದು ವಿವರಿಸಿದರು.
‘ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ತಡ­ರಾತ್ರಿ­ವರೆಗೂ ಹೋಟೆಲ್‌ಗಳನ್ನು ತೆರೆದಿರು­ವು­ದರಿಂದ ಜನರಿಗೆ ಅನುಕೂಲ ಆಗಿದೆ. ಈ ವ್ಯವಸ್ಥೆ ಬಗ್ಗೆ ಜನ ಸಂತೃಪ್ತರಾಗಿ­ದ್ದಾರೆ’ ಎಂದು ಜಾರ್ಜ್‌ ಹೇಳಿದರು.

ಈ ವರ್ಷ 370 ಪಿಎಸ್‌ಐ ನೇಮಕ
ಮುಂದಿನ ಮೂರು ವರ್ಷದಲ್ಲಿ 816 ಮಂದಿ ಪೊಲೀಸ್‌ ಸಬ್‌ ಇನ್ಸೆಪೆಕ್ಟರ್‌ಗಳನ್ನು (ಪಿಎಸ್‌ಐ) ನೇಮಕ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.

ADVERTISEMENT

ತರಬೇತಿಯ ಸಾಮರ್ಥ್ಯ ನೋಡಿಕೊಂಡು ಪ್ರತಿ ವರ್ಷ 370 ಮಂದಿ ಪಿಎಸ್‌ಐಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.
22 ಸಾವಿರ ಪೊಲೀಸ್‌ ಕಾನ್ಸ್‌ಟೆಬಲ್‌ ಹುದ್ದೆ­­­ಗಳು ಖಾಲಿ ಇದ್ದು, ಈ ವರ್ಷ 8,500 ಮಂದಿ­­ಯನ್ನು ನೇಮಕ ಮಾಡಿಕೊಳ್ಳಲಾಗು­ವುದು. ಐದು ವರ್ಷಗಳಿಂದ ನೇಮಕಾತಿಯನ್ನೇ ಮಾಡದ ಹಿಂದಿನ ಗೃಹ ಸಚಿವ ಆರ್‌.ಅಶೋಕ ಅವರು ಈಗ ಕಾನೂನು ಸುವ್ಯವಸ್ಥೆ ಬಗ್ಗೆ ಮಾತ­ನಾಡು­ತ್ತಾರೆ ಎಂದು ಜಾರ್ಜ್‌ ತಿರುಗೇಟು ನೀಡಿದರು. ಸಿಬ್ಬಂದಿ ಕೊರತೆಯ ನಡುವೆಯೂ ನಾವು ಉತ್ತಮ ಆಡಳಿತ ನೀಡುತ್ತಿದ್ದೇವೆ ಎಂದು ಅವರು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.