ADVERTISEMENT

‘ಹೆಗಡೆ ಅನಾಗರಿಕ ಮನುಷ್ಯ’

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 19:30 IST
Last Updated 18 ನವೆಂಬರ್ 2017, 19:30 IST
‘ಹೆಗಡೆ ಅನಾಗರಿಕ ಮನುಷ್ಯ’
‘ಹೆಗಡೆ ಅನಾಗರಿಕ ಮನುಷ್ಯ’   

ದಾವಣಗೆರೆ: ‘ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಮುಖ್ಯಮಂತ್ರಿ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ’ ಎಂಬ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅವರೊಬ್ಬ ಸಂಸ್ಕೃತಿ ಇಲ್ಲದ ಅನಾಗರಿಕ ಮನುಷ್ಯ’ ಎಂದು ವಾಗ್ದಾಳಿ ನಡೆಸಿದರು.

ಸಭೆಯಲ್ಲೂ ಹೆಗಡೆ ಬಗ್ಗೆ ಮಾತನಾಡಿದ ಅವರು, ‘ಹೆಗಡೆ ಸಚಿವರಷ್ಟೇ ಅಲ್ಲ, ಒಂದೇ ಒಂದು ಕ್ಷಣ ಕೂಡ ಸಂಸದ ಆಗಲೂ ನಾಲಾಯಕ್’ ಎಂದು ಟೀಕಿಸಿದರು.

’ಹೆಗಡೆ ನಾಲಿಗೆ ಎಕ್ಕಡಕ್ಕೆ ಸಮಾನ’ (ಬೀದರ್‌ ವರದಿ): ‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ನಾಲಿಗೆ ಎಕ್ಕಡಕ್ಕೆ ಸಮಾನ. ಅವರು ಸಚಿವ ಸ್ಥಾನದಲ್ಲಿ ಮುಂದುವರಿಯಲು ನಾಲಾಯಕ್‌’ ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ‘ಓಟು ಹಾಗೂ ಸೀಟಿಗಾಗಿ ಸಿದ್ದರಾಮಯ್ಯ ಯಾರ ಬೂಟು ಬೇಕಾದರೂ ನೆಕ್ಕುತ್ತಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿಗೆ ಅಗೌರವ ತೋರಿದ್ದಾರೆ’ ಎಂದು ಶನಿವಾರ ಹೇಳಿದರು. ‘ಕೇಂದ್ರ ಸಚಿವರಾಗಿ ಸಮನ್ವಯ ಸಾಧಿಸುವ ಕೆಲಸ ಮಾಡುವ ಬದಲು ಕೇಂದ್ರ ಹಾಗೂ ರಾಜ್ಯದ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಜನನಾಯಕರಾಗಲು ಅನರ್ಹರಾಗಿದ್ದಾರೆ’ಎಂದರು.

ADVERTISEMENT

‘ಅಧಿಕಾರಕ್ಕಾಗಿ ಬೂಟು ನೆಕ್ಕಲು ಸಿದ್ಧವಿರುವ ಸಿದ್ದರಾಮಯ್ಯ’
ಚನ್ನಮ್ಮನ ಕಿತ್ತೂರು:
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕಾಗಿ ಯಾರ ಬೂಟು ನೆಕ್ಕುವುದಕ್ಕೂ ಸಿದ್ಧವಾಗಿದ್ದಾರೆ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕಟುವಾಗಿ ಟೀಕಿಸಿದರು.

ಇಲ್ಲಿನ ಕಲ್ಮಠದ ಮೈದಾನದಲ್ಲಿ ಶುಕ್ರವಾರ ಬಿಜೆಪಿಯಿಂದ ಆಯೋಜಿಸಿದ್ದ ನವಕರ್ನಾಟಕ ಪರಿವರ್ತನೆ ಯಾತ್ರೆಯಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಅವರಿಗೆ ವೀರರಾಣಿ ಕಿತ್ತೂರು ಉತ್ಸವ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದವರು, ದ.ರಾ. ಬೇಂದ್ರೆ, ಕುವೆಂಪು ಅಂಥವರು ನೆನಪಾಗುವುದಿಲ್ಲ. ಅವರಿಗೆ ಟಿಪ್ಪು ನೆನಪಿಗೆ ಬರುತ್ತಾರೆ. ಈಗ ಟಿಪ್ಪು ಜಯಂತಿ ಆಚರಿಸುತ್ತಿರುವ ಅವರು, ಮುಂದೊಂದು ದಿನ ಕಸಬ್‌, ಬಿನ್‌ ಲಾಡೆನ್‌ನಂತಹ ಉಗ್ರರ ಜಯಂತಿ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಪಪ್ಪು ಅನ್ನಬಾರದಂತೆ. ಅದರ ಬದಲು ದಂಡಪಿಂಡ ಎಂದು ಕರೆಯಬೇಕಾ’ ಎಂದು ಕೇಳಿದರು.

‘ರಾಹುಲ್ ಗಾಂಧಿ ಪ್ರಧಾನಿಯಾದರೆ ಆತ್ಮಹತ್ಯೆ ಮಾಡಿಕೊಳ್ಳಲು ಸಮುದ್ರವೇ ಸಾಕಾಗಲ್ಲ’ ಎಂದರು.

‘ರಾಜ್ಯ ದೇಶದ್ರೋಹಿಗಳ ಸುರಕ್ಷತಾ ವಲಯ ಆಗುತ್ತಿದೆ. 4.5 ಲಕ್ಷ ಜನ ಬಾಂಗ್ಲಾ ವಲಸಿಗರು ಇಲ್ಲಿ ಅಕ್ರಮವಾಗಿ ನುಸುಳಿ ಬಂದು ವಾಸವಾಗಿದ್ದಾರೆ. ಇದನ್ನು ಹಿರಿಯ ಪೊಲೀಸ್ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ಯುನಿಟ್‌ಗೆ 2.40 ಪೈಸೆಯಂತೆ ವಿದ್ಯುತ್‌ ಕೊಡುತ್ತೇವೆ ಎಂದರೂ ತೆಗೆದುಕೊಳ್ಳಲು ಈ ದೈನೇಸಿ ರಾಜ್ಯ ಸರ್ಕಾರದಿಂದ ಆಗುತ್ತಿಲ್ಲ. ಅಲ್ಲಿಂದ ಪವರ್‌ ಬಂದರೆ ಇಲ್ಲಿ ಸಿದ್ದರಾಮಯ್ಯಗೆ ಶಾಕ್‌ ಹೊಡೆಯುತ್ತದೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.