ADVERTISEMENT

ಹೆಗ್ಗಡಗೆರೆಯಲ್ಲಿ ಗಂಡು ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2016, 13:58 IST
Last Updated 17 ಅಕ್ಟೋಬರ್ 2016, 13:58 IST
ಹೆಗ್ಗಡಗೆರೆಯಲ್ಲಿ ಗಂಡು ಚಿರತೆ ಸೆರೆ
ಹೆಗ್ಗಡಗೆರೆಯಲ್ಲಿ ಗಂಡು ಚಿರತೆ ಸೆರೆ   

ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ಹೆಗ್ಗಡಗೆರೆ ಗ್ರಾಮದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೋಮವಾರ ಬೆಳಗ್ಗೆ ಚಿರತೆಯೊಂದು ಸೆರೆಯಾಯಿತು.

ಸುತ್ತಲಿನ ಗ್ರಾಮಗಳಲ್ಲಿ ಚಿರತೆಗಳ ಕಾಟ ವಿಪರೀತವಾಗಿದ್ದು, ಅವುಗಳ ಸೆರೆಗೆ ಕ್ರಮ ವಹಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಭಾನುವಾರವಷ್ಟೇ ಇಲಾಖೆಯು ಇಲ್ಲಿ ಬೋನು ಇರಿಸಲಾಗಿತ್ತು. ಅದಾದ ಒಂದು ದಿನದ ಅಂತರದಲ್ಲೇ 10 ವರ್ಷ ಪ್ರಾಯದ ಗಂಡು ಚಿರತೆ ಸೆರೆಯಾಯಿತು. ಸದ್ದು ಕೇಳಿದ ಸ್ಥಳೀಯರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೋನನ್ನು ಸ್ಥಳಾಂತರಿಸಿದರು. ಅದಕ್ಕೆ ಅಗತ್ಯ ಚಿಕಿತ್ಸೆ ನೀಡಿದ ಬಳಿಕ ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ದೇವರಾಜು, ವಲಯ ಅರಣ್ಯಾಧಿಕಾರಿ ನಾಗರಾಜು, ಉಪ ವಲಯ ಅರಣ್ಯಾಧಿಕಾರಿ ಕೆ.ರಾಜು, ಅರಣ್ಯ ರಕ್ಷಕರಾದ ಕೃಷ್ಣಪ್ಪ, ರವಿ, ನಾರಾಯಣ, ಶ್ರೀನಿವಾಸ್, ಚಂದ್ರು, ಸುನಿಲ್ ಇತರರು ಇದ್ದರು.

ಕ್ರಮಕ್ಕೆ ಆಗ್ರಹ: ತಾಲ್ಲೂಕಿನ ಹೆಗ್ಗಡಗೆರೆ, ಕೆಂಪನಹಳ್ಳಿ, ಉರಗಹಳ್ಳಿ, ಪುಟ್ಟೀರಮ್ಮನದೊಡ್ಡಿ, ಹುಚ್ಚಮ್ಮನದೊಡ್ಡಿ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಕಾಟ ಹೆಚ್ಚಾಗಿದೆ. ರಾತ್ರಿಯ ಹೊತ್ತು ಊರಿನ ಒಳಗೆ ನುಗ್ಗುತ್ತಿರುವ ಕಾಡುಮೃಗಗಳು ಸಾಕುಪ್ರಾಣಿಗಳನ್ನು ಹೊತ್ತೊಯ್ಯುತ್ತಿವೆ. ಹಗಲು ಹೊತ್ತಿನಲ್ಲಿ ಸುತ್ತಲಿನ ಜಮೀನಿನಲ್ಲಿ ಕಾಣಿಸಿಕೊಂಡು ರೈತರಲ್ಲಿ ಭಯ ಹುಟ್ಟಿಸುತ್ತಿವೆ. ಹೀಗಾಗಿ ಅವುಗಳ ಸೆರೆಗೆ ಇನ್ನಷ್ಟು ಬೋನು ಇರಿಸಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.