ADVERTISEMENT

ಹೆರಿಗೆ ಸಮಯದಲ್ಲೇ ಹಸುಳೆ ಸಾವು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 20:30 IST
Last Updated 30 ಡಿಸೆಂಬರ್ 2017, 20:30 IST

ಚಡಚಣ (ವಿಜಯಪುರ): ಸರ್ಕಾರಿ ಆಸ್ಪತ್ರೆಯಲ್ಲಿ ಸಕಾಲಕ್ಕೆ ವೈದ್ಯಕೀಯ ಸೇವೆ ಸಿಗದ ಕಾರಣ ನವಜಾತ ಶಿಶು ಮೃತಪಟ್ಟಿದೆ ಎಂದು ದೂರಿ, ಸಂಬಂಧಿಕರು ಹಾಗೂ ಗ್ರಾಮಸ್ಥರು ಇಲ್ಲಿಗೆ ಸಮೀಪದ ಜಿಗಜೇವಣಗಿ ಗ್ರಾಮದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಸ್ವಾತಿ ಮಹೇಶ ಮಾದರ ಎಂಬುವರನ್ನು ಹೆರಿಗೆಗಾಗಿ ಬೆಳಿಗ್ಗೆ 8ಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಈ ಸಮಯದಲ್ಲಿ ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯಲ್ಲಿ ಇರಲಿಲ್ಲ. ಬಳಿಕ ಗರ್ಭಿಣಿ ಜತೆ ಬಂದಿದ್ದ ಸುಮತಾಬಾಯಿ ಯಲಿಗಾರ ಮತ್ತು ಬೋರಮ್ಮ ಮಾದರ ಎಂಬುವರೇ ಸ್ವಾತಿ ಅವರಿಗೆ ಹೆರಿಗೆ ಮಾಡಿಸಿದರು. ಆದರೆ, ಶಿಶು ಬದುಕುಳಿಯಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

‘ಜಿಲ್ಲಾ ವೈದ್ಯಾಧಿಕಾರಿಗೆ ದೂರವಾಣಿ ಕರೆ ಮಾಡಿ ಗೋಗರೆದರೂ ವೈದ್ಯರು ಆಸ್ಪತ್ರೆಗೆ ಬರಲಿಲ್ಲ. ಎರಡು ತಾಸು ನೋವುಂಡ ನನ್ನ ಮಗಳ ಹೆರಿಗೆಯಾದರೂ ಹೆಣ್ಣು ಮಗು ಬದುಕುಳಿಯಲಿಲ್ಲ. ಈ ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸ್ವಾತಿ ತಂದೆ ಸಿದ್ದಪ್ಪ ಮಾದರ ಆಗ್ರಹಿಸಿದರು.

ADVERTISEMENT

‘ವೈದ್ಯರ ನಿರ್ಲಕ್ಷ್ಯದಿಂದಾಗಿ ಈ ಆಸ್ಪತ್ರೆಯಲ್ಲಿ ಐದು ತಿಂಗಳಲ್ಲಿ ಐದು ಶಿಶು ಮೃತಪಟ್ಟಿವೆ. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ವಿಠ್ಠಲ ಬಿರಾದಾರ ದೂರಿದರು.

ಇಂಡಿ ತಾಲ್ಲೂಕು ವೈದ್ಯಾಧಿಕಾರಿ ಈರಣ್ಣ ಧಾರವಾಡಕರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.