ADVERTISEMENT

ಹೈ.ಕ ಜಿಲ್ಲೆಗಳಲ್ಲಿ ಮುಸಲಧಾರೆ: ಎಂಟು ಸಾವು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2014, 19:30 IST
Last Updated 30 ಆಗಸ್ಟ್ 2014, 19:30 IST
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಕೊತಬಾಳ ಗ್ರಾಮದಲ್ಲಿ ಶನಿವಾರ ಜಡಿಮಳೆಯಿಂದ ಮನೆಯೊಂದರ ಗೋಡೆ ಕುಸಿದಿರುವುದು
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಕೊತಬಾಳ ಗ್ರಾಮದಲ್ಲಿ ಶನಿವಾರ ಜಡಿಮಳೆಯಿಂದ ಮನೆಯೊಂದರ ಗೋಡೆ ಕುಸಿದಿರುವುದು   

ಬೆಂಗಳೂರು: ಹೈದರಾಬಾದ್‌ ಕರ್ನಾಟಕದ ಗುಲ್ಬರ್ಗ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಶುಕ್ರವಾರ ಮತ್ತು ಶನಿವಾರ ಭಾರಿ ಮಳೆಯಾಗಿದ್ದು, ಎಂಟು ಜನ  ಸಾವಿಗೀಡಾಗಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಗಣೇಶೋ­ತ್ಸವ ಸಂಭ್ರಮ ಮಂಕಾಯಿತು.

ಗುಲ್ಬರ್ಗ ಜಿಲ್ಲೆಯಲ್ಲಿ  ಮೂರು ದಿನಗಳಿಂದ ಬಿಟ್ಟೂ­ಬಿಡದೇ ಸುರಿಯುತ್ತಿರುವ ಮಳೆ ಶನಿವಾರವೂ ಮುಂದು­ವರಿದಿದೆ. ಮಳೆಯ ಆರ್ಭಟಕ್ಕೆ ಶುಕ್ರವಾರ ಹಾಗೂ ಶನಿವಾರ ಐವರು ಬಲಿಯಾಗಿದ್ದು, ನೂರಾರು ಎಕರೆ ಬೆಳೆ ಹಾನಿಯಾಗಿದೆ.

ಚಿತ್ತಾಪುರ ತಾಲ್ಲೂಕಿನ ಬೆಳಗುಂಪಾದಲ್ಲಿ ಮನೆ ಕುಸಿದು ಭಾಗ್ಯವಂತಿ ಹಣಮಂತ (8), ಗುಲ್ಬರ್ಗ ಕಮಲ ನಗರದ ಹೊಂಡದಲ್ಲಿ ಬಿದ್ದು ಮಹಾದೇವಪ್ಪ ಚಿಂಚೋಳಿ (6), ಓಕಳಿ ಗ್ರಾಮದಲ್ಲಿ ಬಾವಿಗೆ ಬಿದ್ದು ಸಿದ್ದಾರ್ಥ ನಾಮದೇವ (25) ಮೃತಪಟ್ಟಿದ್ದಾರೆ.

ಚಿಂಚೋಳಿ ತಾಲ್ಲೂಕಿನ ಪೋತಂಗಲ್‌ ಗ್ರಾಮದಲ್ಲಿ ರವಿ ಶರಣಪ್ಪ ದೊಡ್ಲಾ (26) ಎಂಬುವರು ನದಿಯ ಪ್ರವಾಹದಲ್ಲಿ ಹಾಗೂ ಆಳಂದ

ಸಿ.ಎಂ ಸೂಚನೆ
‘ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದ ಉಂಟಾಗಿರುವ ಪ್ರಕೃತಿ ವಿಕೋಪದ ಹಾನಿಯನ್ನು ಪರಿಶೀಲಿಸಿ, ವರದಿ ಕಳುಹಿಸಲು ಮತ್ತು ಮೃತರ ಕುಟುಂಬ­ಗಳಿಗೆ ಕೂಡಲೇ ಪರಿಹಾರ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿ­ಗಳಿಗೆ ಸೂಚನೆ ನೀಡ­ಲಾಗಿದೆ. ಉಸ್ತು­­ವಾರಿ ಸಚಿವರಿಗೆ ಸಂಬಂಧಿತ ಜಿಲ್ಲೆ­ಯಲ್ಲಿ ಪ್ರವಾಸ ಕೈಗೊಳ್ಳು­ವಂತೆ ಹೇಳಲಾಗಿದೆ. ಹಾನಿಯ ಸಂಪೂರ್ಣ ವರದಿ ಕೈಸೇರಿದ ಬಳಿಕವಷ್ಟೇ ಕೇಂದ್ರ ನೆರವು ಕೋರುವ ಯೋಚನೆಯಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

ತಾಲ್ಲೂಕಿನ ಕೋತನ­ಹಿಪ್ಪರ್ಗಾ ಗ್ರಾಮದಲ್ಲಿ ಖಾಸಗಿ ವೈದ್ಯ ಡಾ. ಪವಿತ್ರ (48) ಎಂಬುವರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಶವ ಇನ್ನೂ ಪತ್ತೆಯಾಗಿಲ್ಲ.

ಗುಲ್ಬರ್ಗ ನಗರದ ಶಹಾಬಜಾರ್, ಚೋರ­ಗುಂಬಜ್, ಶೆಟ್ಟಿ ಕಾಂಪ್ಲೆಕ್ಸ್ ಪ್ರದೇಶಗಳಲ್ಲಿ ಬಿದ್ದ ಮಳೆ ನೀರು  ಅಪ್ಪನ ಕೆರೆ ಉದ್ಯಾನಕ್ಕೆ ನುಗ್ಗಿದ್ದ­ರಿಂದ ಪಾದ­ಚಾರಿ ಮಾರ್ಗ ಕುಸಿದಿದೆ. ಕೆರೆ ಭರ್ತಿ­ಯಾಗಿದೆ.

ರಾಯಚೂರು ನಗರದಲ್ಲಿ ಶನಿವಾರ ಮನೆಯ ಮೇಲ್ಛಾವಣಿಯ ಪ್ಲಾಸ್ಟರ್‌ ಕುಸಿದು ಸಾಗರ ಪರಶು­ರಾಮ (12) ಸಾವನ್ನಪ್ಪಿದ್ದು, ದೇವದುರ್ಗ ತಾಲ್ಲೂಕಿನ ಗೂಗಲ್ ಗ್ರಾಮದಲ್ಲಿ ಕೃಷ್ಣಾನದಿಯಲ್ಲಿ ತಾಲ್ಲೂಕಿನ ಯರಮರಸ್‌ ನಿವಾಸಿ ಶರಣಬಸವ ವಿರುಪನಗೌಡ (35) ಕೊಚ್ಚಿಕೊಂಡು ಹೋಗಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿ  ಶುಕ್ರವಾರದಿಂದ ಶನಿವಾರ ಬೆಳಗಿನವರೆಗೆ ಸುಮಾರು 21.2 ಸೆ.ಮೀ. ಮಳೆ­ಯಾಗಿದೆ. ನಿರಂತರ ಮಳೆ ಕಾರಣ ರಾಯ­ಚೂರು ನಗ­ರದ ಶಾಲಾ ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿತ್ತು. ಮಾನ್ವಿ ತಾಲ್ಲೂಕಿನಲ್ಲಿ 465 ಮನೆಗಳು ಭಾಗಶಃ ಕುಸಿದಿವೆ. 

626 ಎಕರೆ ಪ್ರದೇಶದಲ್ಲಿನ ಬೆಳೆ ನಷ್ಟವಾಗಿವೆ. ಜಾಲಹಳ್ಳಿ ಪಟ್ಟಣದ ಗಂಗಾನಗರ ಹಾಗೂ ಶಾಹೀನ್ ಕಾಲೋನಿಯ ಮನೆಗಳಿಗೆ ನೀರು ನುಗ್ಗಿವೆ.

ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಶನಿವಾರ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿದೆ.  ಶಹಾಪುರ ತಾಲ್ಲೂಕಿನ ತುಮಕೂರು ಗ್ರಾಮದಲ್ಲಿ ಶುಕ್ರವಾರ ಮನೆ ಕುಸಿದು ನರಸಮ್ಮ ಅಂಗಡಿ (40) ಎಂಬ ಮಹಿಳೆ ಮೃತಪಟ್ಟಿದ್ದಾರೆ.

ಸುರಪುರ ತಾಲ್ಲೂಕಿನ ಬಹುತೇಕ ಹಳ್ಳಗಳು ತುಂಬಿ ಹರಿ­ಯು­ತ್ತಿದ್ದು, ಭತ್ತ ಹಾಗೂ ಹತ್ತಿ ಬೆಳೆ ನೀರಿನಲ್ಲಿ ಮುಳುಗಿವೆ.  ನಾರಾಯಣಪುರ ಅಣೆಕಟ್ಟೆಗೆ  60 ಸಾವಿರ ಕ್ಯೂಸೆಕ್ ನೀರು ಬರುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಕೃಷ್ಣಾ ನದಿಗೆ ಬಿಡಲಾಗುತ್ತಿದೆ.

ಬೀದರ್‌ನಲ್ಲಿ ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಮಳೆ ಸುರಿಯಿತು. ಬಸವಕಲ್ಯಾಣ ತಾಲ್ಲೂಕಿನ ಶಿರಗಾಪುರ, ಬಟಗೇರಾವಾಡಿ ಮತ್ತು ಹಾರಕೂಡ ಕೆರೆಗಳು ಒಡೆದಿದ್ದು, ಸುತ್ತಮುತ್ತಲಿನ ಹೊಲಗಳಿಗೆ ನೀರು ನುಗ್ಗಿದೆ. ಒಂದು ಸಾವಿರಕ್ಕೂ ಅಧಿಕ ಎಕರೆಯಲ್ಲಿ ಬೆಳೆ ಹಾನಿಯಾಗಿದೆ.

ಉತ್ತರ ಕರ್ನಾಟಕದಲ್ಲಿ: ಉತ್ತರ ಕರ್ನಾಟಕ ಭಾಗದ  ಬಾಗಲಕೋಟೆ, ವಿಜಾಪುರ, ಬೆಳಗಾವಿ, ಉತ್ತರ ಕನ್ನಡ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಯಲ್ಲಿ ಶನಿವಾರವೂ ಮಳೆಯಾಗಿದೆ. 

ನಾಲ್ಕೈದು ದಿನಗಳಿಂದ ಸುರಿಯತ್ತಿರುವ ಜಡಿಮಳೆಯಿಂದ ಸೇತುವೆಗಳು ಜಲಾವೃತವಾಗಿವೆ. ಅಲ್ಲಲ್ಲಿ ಮನೆಗಳು ಭಾಗಶಃ ಕುಸಿದ ಘಟನೆಗಳು ಸಂಭವಿಸಿವೆ.

ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಮತ್ತೆ ಆರಂಭಗೊಂಡಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳ ನೀರಿನ ಹರಿವಿನ ಪ್ರಮಾಣದಲ್ಲೂ ಹೆಚ್ಚಳ ಉಂಟಾಗಿದೆ.

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಶನಿವಾರ 101 ಮನೆ, ಬನಹಟ್ಟಿಯಲ್ಲಿ 10 ಮನೆ ಹಾಗೂ ಹಾವೇರಿ ಜಿಲ್ಲೆಯಲ್ಲಿ 121 ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಇದಲ್ಲದೇ ಗದಗ ಜಿಲ್ಲೆಯ ರೋಣ, ಗಜೇಂದ್ರಗಡ ಹಾಗೂ ಧಾರವಾಡ ಜಿಲ್ಲೆಯ ನವಲಗುಂದದಲ್ಲಿಯೂ ಅಲ್ಲಲ್ಲಿ ಮನೆಗಳು ಕುಸಿದ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗುಂಡಬಾಳ, ಬಡಗಣಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ನದಿಪಾತ್ರದ ಜನರಲ್ಲಿ ಆತಂಕ ಆವರಿಸಿದೆ.

ಬರಗಾಲಕ್ಕೆ ಹೆಸರಾದ ವಿಜಾಪುರ ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿದೆ. ಜಿಲ್ಲೆಯ ತಾಳಿಕೋಟೆ ಬಳಿಯ ಡೋಣಿ ಸೇತುವೆ ಜಲಾವೃತವಾಗಿದ್ದು, ಜಮೀನುಗಳಿಗೆ ನೀರು ನುಗ್ಗಿದೆ.

ದ.ಕನ್ನಡದಲ್ಲಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳಿಂದ  ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಇದರಿಂದ ಗಣೇಶೋತ್ಸವದ ಸಡಗರ ಕೆಲವೆಡೆ ಮಂಕಾಯಿತು.

ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗಗಳಲ್ಲೂ ಮಳೆಯ ಅಬ್ಬರ ಕಂಡುಬಂದಿದೆ. ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆಯಲ್ಲಿ ಅತೀ ಹೆಚ್ಚು (88 ಮಿ.ಮೀ) ಮಳೆಯಾಗಿದೆ.

ಕೊಡಗು ಜಿಲ್ಲೆಯ ಹಲವು ಭಾಗಗಳಲ್ಲಿ ಶುಕ್ರವಾರ ಹಾಗೂ ಶನಿವಾರ ನಿರಂತರವಾಗಿ ಮಳೆಯಾಗಿದೆ. ಜತೆಗೆ ಗಾಳಿ ಹಾಗೂ ಚಳಿ ಕೂಡ ವಿಪರೀತವಾಗಿ ಬೀಸುತ್ತಿದೆ. ಮಡಿಕೇರಿಯಲ್ಲಿ ಮಂಜು ದಟ್ಟೈಸಿದ್ದು, 48 ಗಂಟೆಗಳಿಂದ ಸೂರ್ಯನ ದರ್ಶನವಾಗಿಲ್ಲ.

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಬೆಳಿಗ್ಗೆಯಿಂದ ಜಿಟಿಜಿಟಿ ಮಳೆಯಾಗಿದೆ. ಶಿಕಾರಿಪುರ, ಸಾಗರ ತಾಲ್ಲೂಕುಗಳಲ್ಲೂ ಉತ್ತಮ ಮಳೆಯಾಗಿದೆ.

ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ 1,816.40 ಅಡಿಗೆ ತಲುಪಿದೆ (ಗರಿಷ್ಠ ಮಟ್ಟ 1,819 ಅಡಿ). ಒಳಹರಿವು 21,200 ಕ್ಯೂಸೆಕ್ ಇದ್ದು,  ಜಲಾಶಯ ಭರ್ತಿಯಾಗಲು ಕೇವಲ 2.60 ಅಡಿ ಬಾಕಿಯಿದೆ.

ಭದ್ರಾ ಜಲಾಶಯದ ನೀರಿನಮಟ್ಟ 186 ಅಡಿಯಷ್ಟಿದ್ದು (ಗರಿಷ್ಠ ಮಟ್ಟ 186 ಅಡಿ), ಒಳಹರಿವು ಹಾಗೂ ಹೊರಹರಿವು 9,199 ಕ್ಯೂಸೆಕ್ ನಷ್ಟಿದೆ. ತೀರ್ಥಹಳ್ಳಿ, ಹೊಸನಗರ ತಾಲ್ಲೂಕುಗಳಲ್ಲಿ ಮಳೆ ದಿನವಿಡೀ ಜಿಟಿಜಿಟಿಯಾಗಿ ಸುರಿಯಿತು. ಇದರಿಂದ ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಯಿತು.

ದಾವಣಗೆರೆ ಜಿಲ್ಲೆಯಲ್ಲೂ ಶುಕ್ರವಾರ ರಾತ್ರಿಯಿಂದ ಶನಿವಾರ ದಿನವಿಡೀ ತುಂತುರು ಮಳೆ ಸುರಿಯಿತು.
(ಪೂರಕ ಮಾಹಿತಿ: ವಿವಿಧ ಬ್ಯುರೋಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.