ADVERTISEMENT

ಹೊತ್ತಿ ಉರಿದ ನವಲಗುಂದ

ಮಹಾದಾಯಿ ತೀರ್ಪು: ಮೂರು ಕಚೇರಿಗಳಿಗೆ ಬೆಂಕಿ, ಕೋರ್ಟ್‌ ಪೀಠೋಪಕರಣ ಧ್ವಂಸ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 0:00 IST
Last Updated 29 ಜುಲೈ 2016, 0:00 IST
ಬಂದ್‌ ವೇಳೆ ಗುರುವಾರ ನರಗುಂದ ಹಾಗೂ ನವಲಗುಂದದಲ್ಲಿ ಅನ್ನದಾತರು ಪ್ರತಿಭಟನೆ ನಡೆಸಿ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ದೃಶ್ಯಗಳು. –  ಪ್ರಜಾವಾಣಿ ಚಿತ್ರಗಳು
ಬಂದ್‌ ವೇಳೆ ಗುರುವಾರ ನರಗುಂದ ಹಾಗೂ ನವಲಗುಂದದಲ್ಲಿ ಅನ್ನದಾತರು ಪ್ರತಿಭಟನೆ ನಡೆಸಿ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ದೃಶ್ಯಗಳು. – ಪ್ರಜಾವಾಣಿ ಚಿತ್ರಗಳು   

ಹುಬ್ಬಳ್ಳಿ: ಮಹಾದಾಯಿ ನ್ಯಾಯಮಂಡಳಿಯು ರಾಜ್ಯದ ಮಧ್ಯಂತರ ಅರ್ಜಿವಜಾಗೊಳಿಸಿದ್ದನ್ನು ಖಂಡಿಸಿ ಕರೆ ನೀಡಿದ್ದ ಕರ್ನಾಟಕ ಬಂದ್‌ ಗುರುವಾರ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಹಿಂಸಾಚಾರಕ್ಕೆ ತಿರುಗಿ, ಅಕ್ಷರಶಃ ಹೊತ್ತಿ ಉರಿಯಿತು.

ಬಿಎಸ್‌ಎನ್‌ಎಲ್‌ ಕಚೇರಿ ಸೇರಿ ಹಲವು ಕಚೇರಿ, ವಾಹನಗಳು, ಕಂಪ್ಯೂ ಟರ್‌ಗಳು, ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗದಗ ಜಿಲ್ಲೆಯಲ್ಲಿ ಉದ್ರಿಕ್ತರು ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಬಾವುಟ ಹಾರಿಸಿದ ಘಟನೆಯೂ ನಡೆಯಿತು. ನರಗುಂದದಲ್ಲಿ ಪ್ರತಿಭಟನೆ ಸಂದರ್ಭದಲ್ಲಿ  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಂದೀಶ ಮಠದ ಮತ್ತು ಸಂಗಯ್ಯ ಚರಂತಿಮಠ ಅವರನ್ನು ಇಲ್ಲಿನ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಬ್ಬಳ್ಳಿಯಲ್ಲೂ ನ್ಯಾಯಮಂಡಳಿಯ ಪ್ರತಿಕೃತಿ ದಹಿಸುವಾಗ ಬೆಂಕಿಗೆ ಹಾರಿದ ರೈಲ್ವೆ ಹೋರಾಟಗಾರ ಕುತುಬುದ್ದೀನ್‌ ಖಾಜಿ ಅವರನ್ನು ಅಲ್ಲಿದ್ದ ರೈತರೇ ರಕ್ಷಿಸಿದರು.

ನವಲಗುಂದದಲ್ಲಿ ದಾಂದಲೆಯಲ್ಲಿ ನಿರತರಾಗಿದ್ದ ಹೋರಾಟಗಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಅದಕ್ಕೂ ಜನರು ಬಗ್ಗದಿದ್ದಾಗ ಅಶ್ರುವಾಯು ಶೆಲ್‌ ಸಿಡಿಸಿ ಗುಂಪು ಚದುರಿಸುವ ಪ್ರಯತ್ನ ನಡೆಯಿತು. ಲಾಠಿ ಪ್ರಹಾರದಲ್ಲಿ 28 ಜನರು ಗಾಯಗೊಂಡಿದ್ದಾರೆ.

ಹೋರಾಟಗಾರ ಲೋಕನಾಥ ಹೆಬಸೂರು ಸೇರಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಮಾರಕಾಸ್ತ್ರಗಳನ್ನು ಹೊಂದಿದ್ದರು ಎಂಬ ಶಂಕೆ ಮೇಲೆ ಕೆಲ ರೈತ ಹೋರಾಟಗಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನವಲಗುಂದದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ನವಲ ಗುಂದದಲ್ಲಿ ಸಂಜೆ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಿದ್ದರಿಂದ ಲಾಠಿ ಪ್ರಹಾರ ನಡೆದಿದೆ.

ಕಚೇರಿಗಳಿಗೆ ಬೆಂಕಿ: ನವಲಗುಂದ ಪಟ್ಟಣ ಅಕ್ಷರಶಃ ಬೆಂಕಿಯಲ್ಲಿ ಹೊತ್ತಿ ಉರಿಯಿತು. ಬೆಳಿಗ್ಗೆಯಿಂದಲೇ ಸಾವಿ ರಾರು ಸಂಖ್ಯೆಯಲ್ಲಿ ಬೀದಿಗಿಳಿದಿದ್ದ ಹೋರಾಟಗಾರರು ಹಾಗೂ ರೈತರು ಬಸ್‌ ಡಿಪೊಗೆ ನುಗ್ಗಿ ಬೆಂಕಿ ಹಚ್ಚಲು ಯತ್ನಿಸಿದರು.

ಆದರೆ, ಪೊಲೀಸರು ಲಾಠಿ ಪ್ರಹಾರ ನಡೆಸಿದ ಕಾರಣ ಅಲ್ಲಿಂದ ಕಾಲ್ಕಿತ್ತು, ಬಿಎಸ್‌ಎನ್‌ಎಲ್‌ ಕಚೇರಿಗೆ ನುಗ್ಗಿ ಬೆಂಕಿ ಹಚ್ಚಿದರು. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕ ಕಡತಗಳು, ಕಂಪ್ಯೂಟರ್‌ಗಳು, ಸಿಮ್‌ ಕಾರ್ಡ್‌ ಹಾಗೂ ಕರೆನ್ಸಿ ಎಲ್ಲವೂ ಸುಟ್ಟು ಭಸ್ಮವಾದವು. ಸಾವಿರಾರು ಸಂಖ್ಯೆಯಲ್ಲಿದ್ದ ಉದ್ರಿಕ್ತರ ಗುಂಪು, ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಚೆಲ್ಲಾಡಿದರು. ಪೀಠೋಪಕರಣಗಳನ್ನೂ ಧ್ವಂಸಗೊಳಿಸಿದರು.

ನ್ಯಾಯಮಂಡಳಿ ವಿರುದ್ಧದ ಕೋಪವನ್ನು ನವಲಗುಂದ ನ್ಯಾಯಾಲಯದ ಕಟ್ಟಡದ ಮೇಲೆ ಕಲ್ಲು ತೂರಿ ತೀರಿಸಿಕೊಂಡರು. ನ್ಯಾಯಾಲಯದ ಪೀಠೋಪಕರಣ ಧ್ವಂಸಗೊಳಿಸಿದರು.

ನ್ಯಾಯಾಧೀಶರು ಕೂರುವ ಆಸನ, ಕಡತಗಳನ್ನೂ ಚೆಲ್ಲಾಪಿಲ್ಲಿ ಮಾಡಿದರು. ಇಡೀ ನ್ಯಾಯಾಲಯವೇ ಹೋರಾಟಗಾರರ ಕಿಚ್ಚಿಗೆ ಬಲಿಯಾಯಿತು.

ಪುರಸಭೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ನುಗ್ಗಿದ ಹೋರಾಟಗಾರರು ಅಲ್ಲಿದ್ದ ಎರಡು ಜೀಪುಗಳಿಗೆ ಬೆಂಕಿ ಹಚ್ಚಿದರು. ಕಚೇರಿಯ ಪೀಠೋಪಕರಣಗಳನ್ನು ಬೆಂಕಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್‌ ಶಾಖೆಗಳ ಮೇಲೂ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬಲೆ ಬೀಸಿದ ಪೊಲೀಸರು:  ನವಲಗುಂದದಲ್ಲಿ ನಡೆದ ಮಹಾದಾಯಿ ಹೋರಾಟಕ್ಕೆ ಗುರುವಾರ 359ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದ   ರೈತರನ್ನು ಗುರುತಿಸಿ ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಯನ್ನು ನಿರೀಕ್ಷಿಸಿ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ಕರೆಸಲಾಗಿದೆ. ಮುಂಬೈನಿಂದ ಕ್ಷಿಪ್ರ ಕಾರ್ಯಪಡೆ ತುಕಡಿಗಳು ಶುಕ್ರವಾರ ನವಲಗುಂದಕ್ಕೆ ಬರಲಿವೆ. ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅವಳಿ ನಗರ ಸಂಪೂರ್ಣ ಬಂದ್‌: ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲೂ ಜನಜೀವನ ಅಸ್ತವ್ಯಸ್ತಗೊಂಡಿತು. ಪ್ರತಿಭಟನಾಕಾರರು ನಾಲ್ಕು ರಸ್ತೆಗಳು ಸೇರುವ ಪ್ರಮುಖ ಸ್ಥಳಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿದ್ದರಿಂದ ಎಲ್ಲೆಡೆ ದಟ್ಟ ಕಪ್ಪು ಹೊಗೆ ಆವರಿಸಿಕೊಂಡಿತ್ತು.

ಹುಬ್ಬಳ್ಳಿ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ ಮಾಡಿದ್ದರಿಂದ ಪುಣೆ– ಬೆಂಗಳೂರು ನಡುವಿನ ವಾಹನ ಸಂಚಾರ ಇಡೀ ದಿನ ಸ್ತಬ್ಧಗೊಂಡಿತು. ಇದರಿಂದ ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದವು.

ಧಾರವಾಡ ನಗರದಲ್ಲಿಯೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇತ್ತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಬಂದ್‌ಗೆ ಪೂರ್ಣ ಬೆಂಬಲ ಸೂಚಿಸಿದರು. ಬಂದ್ ಕಾರಣ ಈ ಭಾಗದಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ.

ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ ಕಚೇರಿಗಳಲ್ಲೂ  ಹಾಜರಾತಿ ಕಡಿಮೆ ಇತ್ತು.
ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಕೆಲವು ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸಿದರು. ಹಾವೇರಿ, ವಿಜಯಪುರ, ಕಾರವಾರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿಭಟನೆ ಸಾಂಕೇತಿಕವಾಗಿತ್ತು.

ಬೆಳಗಾವಿ ಜಿಲ್ಲೆಯ ರಾಮದುರ್ಗ, ಬೈಲಹೊಂಗಲ ಹಾಗೂ ಸವದತ್ತಿಯಲ್ಲಿ ಬಂದ್‌ ಸಂಪೂರ್ಣ ಯಶಸ್ವಿಯಾಗಿದ್ದರೆ, ಖಾನಾಪುರ, ಗೋಕಾಕ, ಚಿಕ್ಕೋಡಿ, ಹುಕ್ಕೇರಿ, ರಾಯಬಾಗ ಹಾಗೂ ಅಥಣಿಯಲ್ಲಿ ಸಾಂಕೇತಿಕ ಪ್ರತಿಭಟನೆಗಳು ನಡೆದವು.  ಬೆಳಗಾವಿ ನಗರದ ಕೇಂದ್ರ ಭಾಗದಲ್ಲಿ ದಿನವಿಡೀ ಕಾವೇರಿದ ಪ್ರತಿಭಟನೆಗಳು ನಡೆದವು.

ಪ್ರತ್ಯೇಕ ರಾಜ್ಯದ ಬಾವುಟ!
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಗದುಗಿನ ಗಾಂಧಿ ವೃತ್ತದಲ್ಲಿ ಕಳಸಾ ಬಂಡೂರಿ ಹೋರಾಟ ಸಮಿತಿ ಕಾರ್ಯಕರ್ತರು ಹಳದಿ ಬಾವುಟ ಹಾರಿಸಿದರು. ಗದಗದಲ್ಲಿ ಅರೆಬೆತ್ತಲೆ ಮೆರವಣಿಗೆ ಮೂಲಕ ತರಕಾರಿ ಮಾರುಕಟ್ಟೆ ಬಂದ್‌ ಮಾಡಿಸಲು ಮುಂದಾದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ರೋಣದಲ್ಲಿ ರೈತರು ರಸ್ತೆ ತಡೆ ನಡೆಸಿ, ಬ್ಯಾಂಕ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಮುಂಡರಗಿ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯ ರೈತರ ಆಕ್ರೋಶಕ್ಕೆ ತುತ್ತಾಯಿತು.

ರೋಣ, ನರಗುಂದ, ಗಜೇಂದ್ರಗಡ ದಲ್ಲಿ ರೈತರು ರಸ್ತೆಗೆ ಅಡ್ಡವಾಗಿ ಮುಳ್ಳುಕಂಟಿ ಇಟ್ಟು, ಟೈರ್‌ಗೆ ಬೆಂಕಿ ಹಚ್ಚಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಐಐಟಿ ಉದ್ಘಾಟನೆ ಮುಂದೂಡಿಕೆ: ಪ್ರತಿಭಟನೆ ತೀವ್ರವಾಗಿದ್ದು ಇದೇ 31ರಂದು ನಡೆಯಬೇಕಿದ್ದ ಧಾರವಾ ಡದ ಐಐಟಿ ಉದ್ಘಾಟನಾ ಕಾರ್ಯ ಕ್ರಮ  ಮುಂದೂಡ ಲಾಗಿದೆ.

ಆದರೆ, ತರಗತಿಗಳು ಆಗಸ್ಟ್‌ 1ರಿಂದ ಆರಂಭ ವಾಗಲಿದ್ದು, ಪರಿಸ್ಥಿತಿ ಸುಧಾರಿಸಿದ ನಂತರ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಮುಖ್ಯಾಂಶಗಳು
* ಕೆಲವೆಡೆ ಸಂಪೂರ್ಣ ಬಂದ್‌
* ಭುಗಿಲೆದ್ದ ರೈತರ ಆಕ್ರೋಶ
* ಜನಜೀವನ ಅಸ್ತವ್ಯಸ್ತ
* ಆತ್ಮಹತ್ಯೆಗೆ ಮೂವರ ಯತ್ನ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.