ADVERTISEMENT

‘ಅಕ್ಕ’ ಸಮ್ಮೇಳನಕ್ಕೆ 27 ಕಲಾವಿದರು

ಸರ್ಕಾರದಿಂದ ರೂ. 54 ಲಕ್ಷ ವೆಚ್ಚ: ಸಿ.ಎಂ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2014, 19:30 IST
Last Updated 18 ಆಗಸ್ಟ್ 2014, 19:30 IST

ಬೆಂಗಳೂರು: ಅಮೆರಿಕದಲ್ಲಿ ನಡೆಯುವ ‘ಅಕ್ಕ’ ಸಮ್ಮೇಳನಕ್ಕೆ ಪರಿಶಿಷ್ಟ ಜಾತಿಯ 27 ಕಲಾವಿದರು ಮತ್ತು ಇಬ್ಬರು ಸಂಘಟಕರನ್ನು ಸರ್ಕಾರಿ ಖರ್ಚಿನಲ್ಲಿ ಕಳುಹಿಸುವ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ಇದಕ್ಕಾಗಿ ಸರ್ಕಾರ ರೂ. 54.30 ಲಕ್ಷ ವೆಚ್ಚ ಮಾಡಲಿದೆ.

ಆರು ಜಿಲ್ಲೆಗಳ ಪರಿಶಿಷ್ಟ ಜಾತಿಯ ಕಲಾವಿದರನ್ನು ಅಮೆರಿಕಕ್ಕೆ ಕಳುಹಿಸ­ಬೇಕೆಂಬ ಪ್ರಸ್ತಾವವನ್ನು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಸಲ್ಲಿಸಿದ್ದರು. ಆದರೆ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಇದನ್ನು ವಿರೋಧಿಸಿದ್ದರು. ಸಚಿವೆಯ ವಿರೋಧದ ನಡುವೆಯೂ ಮುಖ್ಯಮಂತ್ರಿಯವರು ಪ್ರಸ್ತಾವಕ್ಕೆ ಸಮ್ಮತಿ ನೀಡಿದ್ದಾರೆ.

‘ಬಿಡುಗಡೆಯಾಗಿರುವ ಒಟ್ಟು ವೆಚ್ಚದಲ್ಲಿ ಸಂಘಟನಾ ವೆಚ್ಚಕ್ಕಾಗಿ ಕೊಟ್ಟಿ­ರುವ ರೂ. 5 ಲಕ್ಷವೂ ಸೇರಿದೆ. ಗುರುವಾರ ಈ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲ­ಗಳು ತಿಳಿಸಿವೆ.

ಚಾಮರಾಜನಗರ, ಮೈಸೂರು, ಕೋಲಾರ, ಮಂಡ್ಯ, ಚಿಕ್ಕಬಳ್ಳಾಪುರ, ಬೆಳ­ಗಾವಿ, ಬೆಂಗಳೂರು ನಗರ ಜಿಲ್ಲೆಗಳ ಪರಿಶಿಷ್ಟ ಜಾತಿಯ 27 ಕಲಾವಿದರು ಮತ್ತು ಇಬ್ಬರು ಸಂಘಟಕರನ್ನು (ಶ್ರೀನಿವಾಸ ಜಿ.ಕಪ್ಪಣ್ಣ, ಸಿರಿಗೆರೆ ಗುರುಸಿದ್ದಯ್ಯ ಪ್ರಭು) ಸರ್ಕಾರದ ವೆಚ್ಚದಲ್ಲಿ ಅಮೆರಿಕಕ್ಕೆ ಕಳುಹಿಸುವಂತೆ ಸಮಾಜ ಕಲ್ಯಾಣ ಸಚಿವರು ಪ್ರಸ್ತಾವ­ದಲ್ಲಿ ಕೋರಿದ್ದರು. ಈ ಪ್ರಸ್ತಾವವನ್ನು ಯಥಾವತ್ತಾಗಿ ಅನುಮೋದಿಸಲಾಗಿದೆ.

ಅಮೆರಿಕದ ಕನ್ನಡ ಕೂಟಗಳ ಸಂಘ (ಅಕ್ಕ) ಇದೇ 29ರಿಂದ 31ರ ವರೆಗೆ ಸ್ಯಾನೋಸೆಯಲ್ಲಿ ಎಂಟನೆಯ
ಸಮ್ಮೇ­ಳನ ಆಯೋಜಿಸಿದೆ. ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಕಲಾವಿದರಿಗೆ ಸರ್ಕಾರ­ದಿಂದ ತಲಾ ರೂ. 1.70 ಲಕ್ಷ ನೀಡಲಾ­ಗುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ಅಕ್ಕ’ನತ್ತ ಶಾಸಕರು!
ಬೆಂಗಳೂರು: ಕಾಂಗ್ರೆಸ್‌ನ 15ಕ್ಕೂ ಹೆಚ್ಚು ಶಾಸಕರು  ‘ಅಕ್ಕ’ ಸಮ್ಮೇಳನದಲ್ಲಿ ಭಾಗವಹಿಸುವ ಉದ್ದೇಶದಿಂದ ‘ಸ್ವಂತ’ ಖರ್ಚಿನಲ್ಲಿ ಅಮೆರಿಕಕ್ಕೆ ತೆರಳಲು ಸಿದ್ಧತೆ ನಡೆಸಿದ್ದಾರೆ.

ಇದೇ 27ರ ರಾತ್ರಿ ಇಲ್ಲಿಂದ ಹೊರಟು 29ರಂದು ಕ್ಯಾಲಿಫೋರ್ನಿಯದ ಸ್ಯಾನೋಸೆ­ಯಲ್ಲಿ ಆರಂಭವಾಗುವ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವ ಕಾರ್ಯ­ಕ್ರಮ ಹಾಕಿಕೊಂಡಿದ್ದಾರೆ.  ಬಳಿಕ ಅವರು ಬೇರೆ ದೇಶಗಳಿಗೂ ಪ್ರವಾಸ ತೆರಳಲಿ­ದ್ದಾರೆ. ಸುಮಾರು 10 ದಿನ ವಿದೇಶ ಪ್ರವಾಸ ಮಾಡುವರು ಎನ್ನಲಾಗಿದೆ.
ಇದು ಶಾಸಕರ ಸ್ವಂತ ಖರ್ಚಿನ  ಪ್ರವಾಸ ಎಂದು ಹೇಳುತ್ತಿದ್ದರೂ, ಇಡೀ  ವೆಚ್ಚವನ್ನು ಹಿರಿಯ ಸಚಿವರೊಬ್ಬರು ಭರಿಸಲಿದ್ದಾರೆ ಎಂದು ಗೊತ್ತಾಗಿದೆ.

ಮೈಸೂರು ಮೂಲದ ಹಿರಿಯ ಶಾಸಕರೊಬ್ಬರು ಪ್ರವಾಸದ ಉಸ್ತುವಾರಿ ಹೊತ್ತಿದ್ದು, ಪಾಸ್‌ಪೋರ್ಟ್‌ ಸಂಗ್ರಹಿಸುವ ಕೆಲಸ ಆರಂಭಿಸಿದ್ದಾರೆ. ವೀಸಾ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಆದರೆ, ಆರಂಭದಲ್ಲಿ ಅಮೆರಿಕಕ್ಕೆ ಹೋಗಲು ಆಸಕ್ತಿ ತೋರಿದ್ದ ಅನೇಕ ಶಾಸಕರು ಈಗ ಕ್ಷೇತ್ರದಲ್ಲಿನ ವಿವಿಧ ಕಾರ್ಯ­ಕ್ರಮಗಳ ನೆಪ ಹೇಳಿ ಹಿಂದೆ ಸರಿಯುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಎಷ್ಟು ಜನ ಹೋಗುತ್ತಾರೆ ಎನ್ನುವುದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ ಎನ್ನುತ್ತವೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT