ADVERTISEMENT

‘ಅಪ್ಪ ಆತ್ಮಹತ್ಯೆ ಮಾಡಿಕೊಳ್ತೀನಿ ಅಂತಾನೆ, ಏನ್ಮಾಡ್ಲಿ’

ಜೆಡಿಎಸ್ ಆರಂಭಿಸಿರುವ ರೈತ ಸಹಾಯವಾಣಿಗೆ ವಿವಿಧ ಕಡೆಗಳಿಂದ ದೂರುಗಳ ಮಹಾಪೂರ

ಹೇಮಾ ವೆಂಕಟ್
Published 14 ಜುಲೈ 2015, 19:53 IST
Last Updated 14 ಜುಲೈ 2015, 19:53 IST

ಬೆಂಗಳೂರು: ‘ಅಪ್ಪ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುತ್ತಾನೆ. ನಾನು ಏನ್‌ ಮಾಡ್ಲಿ’ ಜೆಡಿಎಸ್‌  ಆರಂಭಿಸಿರುವ ಸಹಾಯ ವಾಣಿಗೆ ಕರೆ ಮಾಡಿದ ಕೊಪ್ಪಳದ ಯುವಕನೊಬ್ಬ ಹೀಗೆ ತನ್ನ ಅಳಲು ತೋಡಿಕೊಂಡಿದ್ದಾನೆ. ‘ಐದು ವರ್ಷದ ಹಿಂದೆ ಅಪ್ಪ ಮಾಡಿದ್ದ ₹75 ಸಾವಿರ ಸಾಲ  ಬಡ್ಡಿ ಸೇರಿ ಈಗ ₹2 ಲಕ್ಷ ಆಗಿದೆ. ಕೈ ಸಾಲವನ್ನೂ ಮಾಡಿದ್ದಾರೆ.

ಚಿತ್ರಕಲಾ ಶಿಕ್ಷಣ ಪಡೆದರೂ ನನಗೆ ಕೆಲಸ ಸಿಕ್ಕಿಲ್ಲ. ಮದುವೆ ವಯಸ್ಸಿಗೆ ಬಂದ ತಂಗಿಯರಿದ್ದಾರೆ. ಪದವೀ ಧರನಾದ  ತಮ್ಮನೂ ನಿರುದ್ಯೋಗಿ.  ಬೇಸಾಯಕ್ಕೆ ಆಧಾರವಾಗಿದ್ದ ಎತ್ತುಗ ಳನ್ನೂ ಅಪ್ಪ ಮಾರಿದ್ದಾನೆ. ನಾನೇನು ಮಾಡಲಿ, ದಿಕ್ಕೆ ತೋಚುತ್ತಿಲ್ಲ’ ಎಂದು ಆತ ತನ್ನ ಗೋಳೂ ಹೇಳಿಕೊಂಡಿದ್ದಾನೆ. ಮತ್ತೊಬ್ಬ ವ್ಯಕ್ತಿಯ ಮನವಿ ಹೀಗಿದೆ. ‘ಮೀಟರ್‌ ಬಡ್ಡಿ ದಂಧೆಕೋರನೊಬ್ಬ ಶೇಕಡಾ 3 ಬಡ್ಡಿದರ ಎಂದು ಹೇಳಿ ದಾಖಲೆ ಪಡೆದುಕೊಂಡು ನಂತರ ಶೇಕಡಾ 10 ಬಡ್ಡಿ ವಸೂಲಿ ಮಾಡುತ್ತಿದ್ದಾನೆ. ಇಂಥವರ ಮೇಲೆ ಕ್ರಮ ಕೈಗೊಳ್ಳಿ’ ಎಂದು ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಗ್ರಾಮದ ವ್ಯಕ್ತಿಯೊಬ್ಬರು ಮನವಿ ಮಾಡಿದ್ದಾರೆ.

ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ  ಜೆಡಿಎಸ್‌ ಪಕ್ಷ ಜುಲೈ 12ರಂದು ರೈತರ ಸಹಾಯವಾಣಿಯನ್ನು ಆರಂಭಿ ಸಿತ್ತು.  ಸಾಲಬಾಧೆ ಮಾತ್ರವಲ್ಲದೆ ರೈತರು ಎದುರಿಸುತ್ತಿರುವ ಇನ್ನಿತರ ಸಮಸ್ಯೆಗಳ ಬಗ್ಗೆಯೂ ಅನೇಕರು ಅಳಲು ತೋಡಿ ಕೊಂಡಿದ್ದಾರೆ. ನೀರಾವರಿ ಯೋಜನೆ, ಹೌಸಿಂಗ್‌ ಬೋರ್ಡ್‌ಗೆ ನೀಡಿದ ಜಮೀನಿಗೆ ಸರ್ಕಾರ ಪರಿಹಾರ ನೀಡಿಲ್ಲ. ಬಗರ್‌ ಹುಕುಂ ಜಮೀನು ಕಳೆದುಕೊಳ್ಳುವ ಭೀತಿ ಉಂಟಾಗಿದೆ. ಇಂಥ ಸಾವಿರಾರು ದೂರುಗಳು  ಸಹಾಯವಾಣಿ ಸಂಖ್ಯೆಗೆ ಬರುತ್ತಿವೆ’ ಸಹಾಯವಾಣಿ ನಿರ್ವಹಿಸು ತ್ತಿರುವ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

 ‘ಕಳೆದ ಮೂರು ದಿನಗಳಿಂದ  ಸರಾಸರಿ ಮೂರು ಸಾವಿರ ರೈತರು ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂ ಡಿದ್ದಾರೆ.  ಎಲ್ಲ ದೂರುಗಳನ್ನು ದಾಖಲಿಸಿ ಕೊಳ್ಳಲಾಗುತ್ತಿದೆ’ ಎಂದು  ಮಾಹಿತಿ ನೀಡಿದ್ದಾರೆ. ‘ಇದ್ದ ಮೂರೂವರೆ ಎಕರೆ ಜಮೀನಿನಲ್ಲಿ ಎರಡೂವರೆ ಎಕರೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಿಸಲು ಸರ್ಕಾರಕ್ಕೆ ನೀಡಿ 12 ವರ್ಷವಾಗಿದೆ. ಇದುವರೆಗೆ ಪರಿಹಾರದ ಹಣ ನೀಡಿಲ್ಲ’ ಎಂದು ಮಂಡ್ಯ ಜಿಲ್ಲೆಯ ತಂಗಲಗೆರೆ ಗ್ರಾಮದ ನಂಜಮಣಿ ಅಳಲು ತೋಡಿಕೊಂಡಿದ್ದಾರೆ.

‘2004ರಲ್ಲಿ ವರುಣಾ ನಾಲೆ ನಿರ್ಮಾಣಕ್ಕೆಂದು ಜಮೀನು ನೀಡಿದ್ದ 144 ರೈತರಿಗೆ ಹತ್ತು ವರ್ಷವಾದರೂ ಪರಿಹಾರ ನೀಡಿಲ್ಲ. ಪ್ರತಿ ಗುಂಟೆಗೆ ₹28 ಸಾವಿರ ಪರಿಹಾರ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಪರಿಹಾರದ ಹಣ ಬರುತ್ತದೆ ಎಂಬ ಭರವಸೆಯಿಂದ ಮನೆ ನಿರ್ಮಾಣಕ್ಕೆ ₹4ಲಕ್ಷ ಸಾಲ ಮಾಡಿದ್ದೇನೆ. ಈಗ ಸಾಲ ಕಟ್ಟುವಂತೆ ಬ್ಯಾಂಕಿನಿಂದ ಒತ್ತಡ ಹೆಚ್ಚುತ್ತಿದೆ. ಪರಿಹಾರದ ಹಣ ಕೊಡಿಸಿ’ ಎಂದು ಎಚ್‌.ಡಿ. ಕೋಟೆಯ ಕಾರೇಹುಂಡಿ ಗ್ರಾಮದ ಬಸವರಾಜು ಅವರು ಮನವಿ ಮಾಡಿಕೊಂಡಿದ್ದಾರೆ.

‘ಟ್ರ್ಯಾಕ್ಟರ್‌ ಖರೀದಿಗೆಂದು ಕೋಟಕ್‌ ಮಹೀಂದ್ರಾ ಬ್ಯಾಂಕಿನಂದ ಸಾಲ ಪಡೆದು ಆರು ತಿಂಗಳಾಗಿಲ್ಲ. ಈಗಲೇ ಸಾಲ ತೀರಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಟ್ರ್ಯಾಕ್ಟರ್‌ ಜಪ್ತಿ ಮಾಡುತ್ತೇವೆಂದು  ಬೆದರಿಸುತ್ತಿದ್ದಾರೆ. ಸಾಲ ಮರುಪಾವತಿಗೆ ಕಾಲಾವಕಾಶ ಕೊಡಿಸಿ’ ಎಂದು ಮಧುಗಿರಿಯ ಸಂಜೀವಪ್ಪ ಅವರ ಮನವಿ.

‘ನಾಲ್ಕು ವರ್ಷದ ಹಿಂದೆ ₹1.40 ಲಕ್ಷ ಪಡೆದು ಭೋಗ್ಯಕ್ಕೆ ನೀಡಿದ್ದ  ಎರಡೂ ವರೆ ಎಕರೆ ಜಮೀನು ಇನ್ನೂ ಬಿಟ್ಟು ಕೊಟ್ಟಿಲ್ಲ. ಜಮೀನು ವಾಪಸ್‌ ಕೊಡಿಸಿ’ ಎಂದು ಮೈಸೂರು ಕೆ.ಆರ್‌.ನಗರದ ಸ್ವಾಮಿಗೌಡ ಕೇಳಿಕೊಂಡಿದ್ದಾರೆ. ‘ಕೆರೆ ರಿಪೇರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಹಣ ನೀಡಿಲ್ಲ. ಭೂ ಬ್ಯಾಂಕಿನಿಂದ ಸಾಲ ಪಡೆದು ಕೆರೆ ರಿಪೇರಿ ಮಾಡಿದ್ದೇನೆ. ದಯವಿಟ್ಟು ಹಣ ಕೊಡಿಸಿ’ ಎಂದು ಉಡುಪಿಯ ರಾಘು ಪೂಜಾ ರಿಯವರು ಕೋರಿದ್ದಾರೆ.

ವಿದ್ಯಾರ್ಥಿ ಸಹಾಯ ಹಸ್ತ: ಈ ಮಧ್ಯೆ ಸಹಾಯವಾಣಿ ಸಂಖ್ಯೆಗೆ ಎಸ್‌ಎಂಎಸ್‌ ಮಾಡಿರುವ ಕುಮಟಾದ ಬಿಕಾಂ ವಿದ್ಯಾರ್ಥಿ ಶಶಾಂಕ್‌, ತನ್ನ ಪಾಕೆಟ್‌ ಮನಿಯಿಂದ ₹1ಸಾವಿರವನ್ನು  ನೀಡುವ ಮೂಲಕ ರೈತರ ನೆರವಿಗೆ ಕೈಜೋಡಿ ಸುವುದಾಗಿ ಹೇಳಿದ್ದಾನೆ.

ನಿರಾಣಿ ಕಾರ್ಖಾನೆ ಬಾಕಿ
‘ ಐದು ತಿಂಗಳ ಹಿಂದೆ ಮಾಜಿ ಸಚಿವ ಮುರುಗೇಶ್‌ ನಿರಾಣಿ ಅವರ ಸಕ್ಕರೆ ಕಾರ್ಖಾನೆಗೆ 120 ಟನ್‌ ಕಬ್ಬು ಮಾರಿದ್ದೆ. ಇಲ್ಲಿಯವರೆಗೆ ಒಂದು ಪೈಸೆಯನ್ನೂ ಕಾರ್ಖಾನೆಯವರು ನೀಡಿಲ್ಲ. ಕರ್ನಾಟಕ ವಿಕಾಸ ಬ್ಯಾಂಕಿನಲ್ಲಿ ₹ 2ಲಕ್ಷ ಸಾಲ ಬಾಕಿಯಿದೆ’ ಎಂದು ಬಾಗಲಕೋಟೆಯ ಬಸವರಾಜು ಅಳಲು ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.