ADVERTISEMENT

‘ಎಲ್ಲ ಬಗೆಯ ಅಸಹಿಷ್ಣುತೆ ಖಂಡನೀಯ’

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2015, 19:56 IST
Last Updated 6 ಡಿಸೆಂಬರ್ 2015, 19:56 IST

ಬಾಗಲಕೋಟೆ: ಅಸಹಿಷ್ಣುತೆಯನ್ನು ಪ್ರತಿಯೊಬ್ಬರು ಖಂಡಿಸಬೇಕು, ಅದು ಯಾರಿಂದಲೇ ನಡೆದಿದ್ದರೂ ಖಂಡಿಸುವ ಜಾತ್ಯತೀತ ಮನೋಭಾವ ಬೇಕು. ಕೇವಲ ಹಿಂದೂಗಳ ಅಸಹಿಷ್ಣುತೆ ವಾದವನ್ನು ಖಂಡಿಸುವ ಬುದ್ಧಿಜೀವಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಅಸಹಿಷ್ಣುತೆ ಹಿಂದೂಗಳಿಂದ ಆಗಿರಲಿ ಅಥವಾ ಮುಸ್ಲಿಮರಿಂದಲೇ ಆಗಿರಲಿ. ಅದನ್ನು ಎಲ್ಲರೂ ಖಂಡಿಸಬೇಕು ಎಂದರು.

‘ಬ್ರಾಹ್ಮಣರು ದೇಶ ಬಿಟ್ಟು ಹೋಗಬೇಕು’ ಎಂಬ ಸಾಹಿತಿ ಪ್ರೊ. ಚಂಪಾ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಅವರ ಮಾತಿನಲ್ಲಿ ಗಂಭೀರತೆಗಿಂತ ಹೆಚ್ಚಾಗಿ ಹಾಸ್ಯವೇ ಇರುತ್ತದೆ’ ಎಂದು ವ್ಯಂಗ್ಯವಾಡಿದರು.

ಬ್ರಾಹ್ಮಣರಿಂದ ಅಸ್ಪೃಶ್ಯತೆ ಆಚರಣೆ ನಡೆದಿಲ್ಲ. ಆದಿ ದ್ರಾವಿಡರನ್ನು ಸೋಲಿಸಿ ಬಂದ ದ್ರಾವಿಡರು ಅಸ್ಪೃಶ್ಯತೆಯನ್ನು ಆರಂಭಿಸಿದರು. ಆಧುನಿಕ ಸಂಶೋಧನೆಗಳು ಇದಕ್ಕೆ ದಾಖಲೆಗಳನ್ನು ಒದಗಿಸುತ್ತವೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು, ದೇಶದಲ್ಲಿ ಗೋಹತ್ಯೆ ನಿರ್ಬಂಧಿಸಬೇಕು, ಇದು ಪಕ್ಷಾತೀತವಾಗಿ ನಡೆಯಬೇಕಾಗಿರುವ ನೈತಿಕ ಕೆಲಸ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗಲೇ ಅನೇಕ ರಾಜ್ಯಗಳಲ್ಲಿ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ.  ಗೋಹತ್ಯೆ ನಿಷೇಧ ರಾಷ್ಟ್ರೀಯ ನೀತಿಯಾಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.