ADVERTISEMENT

‘ಏಕರೂಪದ ಶಿಕ್ಷಣ: ಸರ್ಕಾರ ಧೈರ್ಯ ಪ್ರದರ್ಶಿಸಲಿ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2015, 20:24 IST
Last Updated 20 ಫೆಬ್ರುವರಿ 2015, 20:24 IST

ರಾಮದುರ್ಗ (ಬೆಳಗಾವಿ ಜಿಲ್ಲೆ): ‘ಶಿಕ್ಷಣ ಕ್ಷೇತ್ರದಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ಎಲ್ಲ ವರ್ಗದ ಜನರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ರಾಜ್ಯ ಸರ್ಕಾರ ಏಕರೂಪದ ಶಿಕ್ಷಣ ಪದ್ಧತಿ ಅನುಷ್ಠಾನಗೊಳಿಸಲು ಧೈರ್ಯ ಮಾಡಬೇಕು’ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.

ಭಾರತ ಜ್ಞಾನ ವಿಜ್ಞಾನ ಸಮಿತಿಯು ಇಲ್ಲಿಯ ಮರಾಠಾ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ರಾಜ್ಯ ಮಟ್ಟದ ಶೈಕ್ಷಣಿಕ ಹಬ್ಬ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೊನೆಯ ಪಕ್ಷ ಒಂದರಿಂದ ಐದನೇ ತರಗತಿವರೆಗಿನ ಶಾಲೆಗಳನ್ನು ರಾಷ್ಟ್ರೀಕರ­ಣಗೊಳಿಸಲು ಸರ್ಕಾರ ಚಿಂತನೆ ನಡೆಸಬೇಕು. ಪ್ರತಿ ರಾಜ್ಯದಲ್ಲೂ ಪ್ರಾದೇಶಿಕ ಭಾಷೆಯನ್ನು ಕಡ್ಡಾಯ­ಗೊಳಿಸಬೇಕು. ಆ ಪ್ರದೇಶದ ಮಕ್ಕಳು ಅದೇ ಭಾಷೆಯಲ್ಲಿಯೇ ಓದುವುದರಿಂದ ಅವರ ನಡುವಣ ಅಸಮಾನತೆ ದೂರವಾ­ಗುತ್ತದೆ. ಆದ್ದರಿಂದ ಆರ್‌ಟಿಇ ಕಾನೂನನ್ನು ಕಟ್ಟುನಿಟ್ಟಾಗಿ ಅನುಸರಿಸ­ಬೇಕು’ ಎಂದು ಅವರು ಒತ್ತಿ ಹೇಳಿದರು

‘ರಾಜಕಾರಣಿಗಳು ಮತ್ತು ವಸಾಹ­ತು­ಶಾಹಿಗಳ ಹಿಡಿತದಲ್ಲಿ ಶಿಕ್ಷಣ ಕ್ಷೇತ್ರ ಸಿಲುಕಿಕೊಂಡಿದೆ. ಅಲ್ಲಿಯೂ ಪಂಕ್ತಿಭೇದ, ಜಾತಿಭೇದ, ವರ್ಗಭೇದ ತಾಂಡವಾಡುತ್ತಿದೆ. ಇಂಥ ಗುಲಾಮ­ಗಿರಿಯಿಂದ ಶಿಕ್ಷಣ ಕ್ಷೇತ್ರ ಹೊರ­ಬರಬೇಕು. ಈ ನಿಟ್ಟಿನಲ್ಲಿ ಆಂದೋಲನ ನಡೆಯಬೇಕಿದೆ’ ಎಂದರು.

ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನಮಟ್ಟು ಮಾತನಾಡಿ, ‘ಇಂದಿನ ದಿನಗಳಲ್ಲಿ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಹೇಳುವು­ದಕ್ಕಿಂತಲೂ, ಮಕ್ಕಳಿಗಾಗಿ ಸಮಾಜ ಯಾವ ರೀತಿಯ ಪರಿಸರ ನಿರ್ಮಿಸಿದೆ ಎನ್ನುವುದು ಮುಖ್ಯ’  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.