ADVERTISEMENT

‘ಕಬ್ಬು ಬಾಕಿ ಸರ್ಕಾರವೇ ಪಾವತಿಸಲಿ’

ಬೊಕ್ಕಸದಿಂದ ಕೊಟ್ಟು ಕಾರ್ಖಾನೆಗಳಿಂದ ವಸೂಲಿ ಮಾಡಿಲಿ–ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 12:25 IST
Last Updated 30 ಜೂನ್ 2015, 12:25 IST

ಸುವರ್ಣ ವಿಧಾನಸೌಧ, ಬೆಳಗಾವಿ : ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ತೀವ್ರ ಸ್ವರೂಪ ಪಡೆಯುತ್ತಿದೆ ಎಂದು ಎಚ್ಚರಿಸರಿಸುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ರೈತರ ಬಾಕಿಯನ್ನು ಸರ್ಕಾರವು ತನ್ನ ಬೊಕ್ಕಸದಿಂದ ಪಾವತಿಸಿ ಬಳಿಕ ಸಕ್ಕರೆ ಕಾರ್ಖಾನೆಗಳಿಂದ ವಸೂಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ರಾಜ್ಯದ ಮುಂಗಾರು ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರಲ್ಲಿ ಇನ್ನೂ ಸಹಿಸುವ ಶಕ್ತಿ ಉಳಿದಿಲ್ಲ. ಆದ್ದರಿಂದ ಸರ್ಕಾರವು ತಕ್ಷಣವೇ ಅವರ ಬಾಕಿಯನ್ನು ಬಿಡುಗಡೆಗೊಳಿಸಬೇಕು. ಬಳಿಕ ಕಾರ್ಖಾನೆಗಳಿಂದ ವಶಕ್ಕೆ ಪಡೆದಿರುವ ಸಕ್ಕರೆಯನ್ನು ಮಾರಾಟ ಮಾಡಿ ಅದನ್ನು ಸರಿದೂಗಿಸಿಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ.

ಕಳೆದ ವರ್ಷ 400 ಲಕ್ಷ ಮೆಟ್ರಿಕ್ ಕಬ್ಬು ಇತ್ತು. ಪ್ರಸಕ್ತ ಹಂಗಾಮಿನಲ್ಲಿ ಸೆಪ್ಟಂಬರ್ ವೇಳೆ 600 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲು ಸಿದ್ಧವಾಗುತ್ತದೆ. ಕಾರ್ಖಾನೆಗಳು ಕಬ್ಬು ನುರಿಸದಿದ್ದರೇ, ರೈತರ ಪರಿಸ್ಥಿತಿ ಅಧೋಗತಿಗೆ ಇಳಿಯುತ್ತದೆ ಎಂದು ಅವರು ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಸೆಪ್ಟಂಬರ್ ವೇಳೆಗೆ 600 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಯಲು ಸಜ್ಜಾಗುತ್ತದೆ. ಆಗ ಕಾರ್ಖಾನೆಗಳು ಕಬ್ಬು ನುರಿಸಲು ಒಪ್ಪದಿದ್ದರೆ ಏನು ಮಾಡುತ್ತೀರಿ?’ ಎಂದು ಅವರು ಪ್ರಶ್ನಿಸಿದರು.

ಇಲ್ಲೇನು ಅಕ್ಷಯಪಾತ್ರೆ ಇದೆಯಾ?: ಕಾರ್ಖಾನೆಗಳು ಬಾಕಿ ಪಾವತಿಸಲು ವಿಫಲಗೊಂಡಿರುವುದರಿಂದ ಸರ್ಕಾರವೇ 3 ಸಾವಿರ ಕೋಟಿ ರೂಪಾಯಿಗಳನ್ನು ಪಾವತಿಸಬೇಕು ಎಂಬ ಜೆಡಿಎಸ್ ಶಾಸಕ ವೈ.ಎಸ್.ವಿ. ದತ್ತಾ ಅವರ ಹೇಳಿಕೆಗೆ ‘ಸರ್ಕಾರದ ಬಳಿ ಏನು ಅಕ್ಷಯ ಪಾತ್ರೆ ಇದೆಯಾ?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

2013–14ನೇ ಸಾಲಿನ ಬಾಕಿ ಪಾವತಿಗೆ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದ ಮುಖ್ಯಮಂತ್ರಿ, ‘2014–15ನೇ ಸಾಲಿನ ಹಂಗಾಮಿಗೆ ಕೇಂದ್ರ ಸರ್ಕಾರವು ಪ್ರತಿ ಟನ್ ಕಬ್ಬಿಗೆ 2200 ರೂಪಾಯಿ ದರ ನಿಗದಿ ಪಡಿಸಿತ್ತು. ಕಾರ್ಖಾನೆಗಳು 1800 ರೂಪಾಯಿ ನೀಡಿವೆ. ಪ್ರತಿ ಟನ್‌ಗೆ ಇನ್ನೂ 400 ರೂಪಾಯಿ ಪಾವತಿಯಾಗಬೇಕಿದೆ’ ಎಂದು ಮಾಹಿತಿ ನೀಡಿದರು.

ಕೇಂದ್ರಕ್ಕೆ ಸರ್ವಪಕ್ಷ ನಿಯೋಗಕ್ಕೆ ಚಿಂತನೆ: ಅಲ್ಲದೇ, ಈ ಸಂಬಂಧ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಚಿಂತನೆ ಇದೆ ಎಂದು ಸಿದ್ದರಾಮಯ್ಯ ಅವರು ನುಡಿದರು.

ಈ ವೇಳೆ, ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಕೇಂದ್ರ ಸರ್ಕಾರ ನಿಗದಿ ಮಾಡುವ ದರಕ್ಕೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರಗಳು ಪ್ರೋತ್ಸಾಹ ಧನ ನೀಡುವುದು ರೂಢಿ ಎಂದರು.

ಇದಕ್ಕೆ ದನಿಗೂಡಿಸಿದ ಕುಮಾರಸ್ವಾಮಿ, ಕೇಂದ್ರ ಸರ್ಕಾರ ನಿಗದಿಪಡಿಸಿರುವ 2200 ರೂಪಾಯಿ ಜತೆಗೆ ಉತ್ತರ ಪ್ರದೇಶ ಸರ್ಕಾರವು ಪ್ರತಿ ಟನ್‌ಗೆ 400 ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.