ADVERTISEMENT

‘ಕವಿಮನೆ’ ಪರಿಸರ ಕುರೂಪ; ತೆರವುಗೊಳ್ಳದ ಒತ್ತುವರಿ

ಜಿಲ್ಲಾಡಳಿತದ ಜಾಣ ಕುರುಡುತನ: ಕವಿಶೈಲಕ್ಕೂ ಮೆತ್ತಿದ ಕೃತಕ ಹುಲ್ಲುಹಾಸು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2013, 19:30 IST
Last Updated 27 ಡಿಸೆಂಬರ್ 2013, 19:30 IST

ಶಿವಮೊಗ್ಗ: ಕುಪ್ಪಳಿಯ ‘ಕವಿಮನೆ’ಯ ಎದುರೇ ಎದ್ದುನಿಂತ ರಬ್ಬರ್‌ ಗಿಡಗಳು, ದಾರಿಯಲ್ಲೇ ಐಸ್‌ಕ್ರೀಂ ಅಂಗಡಿ, ಕಾಡಿನಲ್ಲಿ ಜೆಸಿಬಿ ಯಂತ್ರಗಳು ನಿರ್ಮಿಸಿದ ರಸ್ತೆ, ಅಲ್ಲಲ್ಲಿ ಎದುರಾಗುವ ವಿದ್ಯುತ್‌ ಕಂಬಗಳು, ಕವಿಶೈಲಕ್ಕೂ ಮೆತ್ತಿದ ಕೃತಕ ಹುಲ್ಲುಹಾಸು...

ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ‘ಕವಿಮನೆ’ ಸುತ್ತಲಿನ ವಾತಾವರಣವಿದು. ಕವಿಮನೆ ಪರಿಸರ  ಕುರೂಪಗೊಳಿಸುವ ಕೆಲಸ ನಿರಂತರ­ವಾಗಿ ನಡೆದಿದ್ದರೂ ಜಿಲ್ಲಾಡಳಿತ ಮಾತ್ರ ಮೌನ  ಮುಂದುವರಿಸಿದೆ.

‘ಕವಿಮನೆ’ ಸುತ್ತಮುತ್ತ ಒಂದು ಕಿ.ಮೀ. ದೂರದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ಕೈಗೊಳ್ಳಬಾರದು. ಹಾಗೆಯೇ, ರಸ್ತೆ, ಕಟ್ಟಡ ನಿರ್ಮಾಣ, ಅರಣ್ಯ ನಾಶ, ಒಟ್ಟಾರೆ ಕವಿಮನೆಗೆ ಧಕ್ಕೆಯಾಗುವಂತಹ ಯಾವುದೇ ಕಾರ್ಯ­ಚಟುವಟಿಕೆ ನಡೆಸಬಾರದೆಂಬ ನಿರ್ಣಯವನ್ನು ಕುಪ್ಪಳಿ ವ್ಯಾಪ್ತಿಯ ದೇವಂಗಿ ಗ್ರಾಮ ಪಂಚಾಯ್ತಿ ಈ ಹಿಂದೆ ಕೈಗೊಂಡಿದೆ. ಇಂತಹದ್ದೇ ನಿರ್ಣಯ­ವನ್ನು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕೂಡ ಮಾಡಿದೆ.

ಸರ್ಕಾರ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ರಚಿಸಿ, ‘ಕವಿಮನೆ’ಯನ್ನು ಮರು ವಿನ್ಯಾಸ­ಗೊಳಿಸಿದ ದಿನದಿಂದಲೂ ಇಲ್ಲಿಯ ಜಾಗದ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಗ್ರಾಮಠಾಣಾ ಜಾಗ ಎಷ್ಟು? ‘ಕವಿಮನೆ’ ಸುತ್ತಲಿದ್ದ ಮನೆಯವರ ಜಾಗ ಎಷ್ಟು? ಎಂಬುದು ಸ್ಪಷ್ಟವಾಗಿರಲಿಲ್ಲ. ಪ್ರತಿಷ್ಠಾನದ ಸಮಕಾರ್ಯದರ್ಶಿಗಳಲ್ಲಿ ಒಬ್ಬರಾದ ಜಿಲ್ಲಾಧಿಕಾರಿ ಮಾಡಿದ ಆದೇಶದ ಅನ್ವಯ 2012 ಅಕ್ಟೋಬರ್‌ 4ರಂದು ತೀರ್ಥಹಳ್ಳಿ ತಹಶೀಲ್ದಾರ್‌, ಪರ್ಯಾಯ ವೀಕ್ಷಕರ ನೇತೃತ್ವದಲ್ಲಿ ಮುತ್ತೂರು ಹೋಬಳಿ, ದೇವಂಗಿ ಗ್ರಾ.ಪಂ.ಯ ಬೆಕ್ಕನೂರು ಗ್ರಾಮದ ಕುಪ್ಪಳಿ ಗ್ರಾಮಠಾಣದ ಹದ್ದುಬಸ್ತು ಅಳತೆ ಮಾಡಲಾಗಿತ್ತು.

ಗ್ರಾಮಠಾಣದ ಲಾಗು ಹಿಡುವಳಿ ಸರ್ವೆ ನಂ. 14 ಮತ್ತು 57ರ ಮೂಲಕ ಟಿಪ್ಪಣಿಯಲ್ಲಿನ ಅಳತೆಯಂತೆ ಮತ್ತು ಗ್ರಾಮ ನಕಾಶೆಯಂತೆ ಪರಿಶೀಲಿಸಿ, ಅಳತೆ ಮಾಡಿ, ಗ್ರಾಮಠಾಣ ಗಡಿ­ಗಳನ್ನು ಗುರುತಿಸಿ, ಕಲ್ಲುಗಳನ್ನು ಹಾಕಲಾಗಿದೆ. ಇದರಲ್ಲಿ 3 ಎಕರೆ 8 ಗುಂಟೆ ವಿಸ್ತೀರ್ಣವನ್ನು ಲಾಗು ನಂಬರು 57/1ಬಿಯ ಹಿಡುವಳಿದಾರ ಸುಭೋದ್‌ ಕುಪ್ಪಳಿ ಒತ್ತುವರಿ ಮಾಡಿ­ಕೊಂಡಿರುವುದು ಸ್ಪಷ್ಟವಾಗಿ ಅಳತೆ ನಕ್ಷೆಯಲ್ಲಿ ತೋರಿಸ­ಲಾಗಿದೆ. ಈ ಜಾಗ ಕವಿಮನೆ ಮುಂಭಾಗವಾಗಿದ್ದು, ಇದರಲ್ಲಿ ಅಂದಾಜು ಮೂರು ವರ್ಷದ ರಬ್ಬರ್‌ ಗಿಡಗಳು ಬೆಳೆದಿವೆ. ಅಲ್ಲದೇ, ಜೆಸಿಬಿ ಯಂತ್ರದಿಂದ ಅರಣ್ಯ ಜಾಗವನ್ನು ಅಲ್ಲಲ್ಲಿ ಸಮತಟ್ಟು ಮಾಡಲಾಗಿದೆ. ಹಾಗೆಯೇ ವಾಸದ ಮನೆ ಅಂಗಳ, ಆಕಳ ಕೊಟ್ಟಿಗೆ ಕೂಡ ಈ ಗ್ರಾಮಠಾಣ ಜಾಗದಲ್ಲಿವೆ.

ಇದರ ಜತೆಗೆ ಗ್ರಾಮಠಾಣ ಜಾಗವನ್ನು ಸ.ನಂ.14ರ ಹಿಡುವಳಿದಾರ ಕೃಷ್ಣಮೂರ್ತಿ ಅವರು 0.22 ಗುಂಟೆ, ಸ್ವತಃ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ 0.03 ಗುಂಟೆ ಜಾಗ ಒತ್ತುವರಿ ಮಾಡಿಕೊಂಡಿದೆ.

ಇಲ್ಲಿ ಸರ್ವೆ ನಡೆದು ಸುಮಾರು ಒಂದು ವರ್ಷ ಎರಡು ತಿಂಗಳು ಕಳೆದಿದೆ. ಆದರೆ, ಇದುವರೆಗೂ ಒತ್ತುವರಿ ತೆರವು­ಗೊಳಿಸುವ ಪ್ರಯತ್ನ ಜಿಲ್ಲಾಡಳಿತದಿಂದ ನಡೆದಿಲ್ಲ.  

ಪರವಾನಗಿ ನೀಡಿಲ್ಲ; ಸ್ಪಷ್ಟನೆ: ‘ಕವಿಮನೆ’ ಸುತ್ತಮುತ್ತ ಒಂದು ಕಿ.ಮೀ. ದೂರದಲ್ಲಿ ಅದಕ್ಕೆ ಧಕ್ಕೆಯಾಗು­ವಂತಹ ಯಾವುದೇ ಚಟುವಟಿಕೆಗೆ ಅನುಮತಿ ನೀಡದಿರಲು ಈ ಹಿಂದೆಯೇ ಗ್ರಾಮ ಪಂಚಾಯ್ತಿ ನಿರ್ಣಯ ಕೈಗೊಂಡಿದೆ. ಅದಕ್ಕೆ ಪಂಚಾಯ್ತಿ ಬದ್ಧವಾಗಿದೆ. ಐಸ್‌ಕ್ರೀಂ ಅಂಗಡಿ, ಹೋಂ ಸ್ಟೇ, ರಸ್ತೆ ನಿರ್ಮಾಣ ಮತ್ತಿತರ ಯಾವುದಕ್ಕೂ ಪಂಚಾಯ್ತಿಯಿಂದ ಪರವಾನಗಿ ನೀಡಿಲ್ಲ’ ಎಂಬ ಸ್ಪಷ್ಟನೆ ದೇವಂಗಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆರಾಧ್ಯ ಅವರದ್ದು.

‘ಕುಪ್ಪಳಿಗೆ ಪ್ರತಿನಿತ್ಯ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಈ ಸ್ಥಳ ದೇಶದ ಬಹುದೊಡ್ಡ ಕವಿ ಸ್ಮಾರಕ­ವಾಗುವ ಲಕ್ಷಣಗಳಿವೆ. ಇಂತಹ ಸ್ಥಳ, ಒತ್ತುವರಿ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿರುವುದು ದುರಂತ.

ಜಿಲ್ಲಾ­ಡಳಿತ ಮತ್ತು ಟ್ರಸ್ಟ್ ಸಂಯುಕ್ತವಾಗಿ ಕೆಲವು ದಿಟ್ಟ ನಿರ್ಧಾರಗಳನ್ನು ಕೈಗೊಂಡು ‘ಕವಿಮನೆ’ ಪರಿಸರವನ್ನು ಸಹಜವಾಗಿ ಉಳಿಸುವ ಪ್ರಯತ್ನ ಮಾಡಬೇಕು. ಕುವೆಂಪು ಅವರ 109ನೇ ಜನ್ಮ ದಿನೋತ್ಸವ ಇದೇ 29ರಂದು ನಡೆಯಲಿದೆ. ಕುವೆಂಪು ಅಭಿಮಾನಿಗಳು ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು’ ಎಂದು ಕುವೆಂಪು ಸಾಹಿತ್ಯಪ್ರೇಮಿ ತೀರ್ಥಹಳ್ಳಿಯ ದಿವಾಕರ ಹೆಗ್ಡೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.