ADVERTISEMENT

‘ಕೆಪಿಎಸ್‌ಸಿ– ಕೇಂದ್ರದ ಮಾರ್ಗಸೂಚಿಗಳಿಲ್ಲ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಮತ್ತು ಸದಸ್ಯರ  ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಕೇಂದ್ರ ಸರ್ಕಾರದ ಯಾವುದೇ ಸ್ಪಷ್ಟ ಮಾರ್ಗಸೂಚಿಗಳಿಲ್ಲ’ ಎಂದು ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅವರು ಹೈಕೋರ್ಟ್‌ಗೆ ತಿಳಿಸಿದರು.

ಕೆಪಿಎಸ್‌ಸಿಗೆ ಅಧ್ಯಕ್ಷರನ್ನಾಗಿ ವಿ.ಆರ್‌. ಸುದರ್ಶನ್‌ ಹಾಗೂ ಏಳು ಸದಸ್ಯರ ನೇಮಕ ಪ್ರಶ್ನಿಸಿ ಟಿ.ಜೆ.ಅಬ್ರಹಾಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಮತ್ತು ನ್ಯಾಯಮೂರ್ತಿ ಪಿ.ಬಿ.ಬಜಂತ್ರಿ ಅವರಿದ್ದ ವಿಭಾಗೀಯ ಪೀಠವು ಸೋಮವಾರ ವಿಚಾರಣೆ ನಡೆಸಿತು.

ಈ ವೇಳೆ ರವಿವರ್ಮ ಕುಮಾರ್‌,  ‘ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ  ಏಕರೂಪದ ಮಾರ್ಗಸೂಚಿ ಹೊರಡಿಸಬೇಕೆಂದು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ರಾಜ್ಯವು ಚಿಂತನೆ ನಡೆಸಿದೆ’ ಎಂಬ  ಸಂಗತಿಯನ್ನು ಮೌಖಿಕವಾಗಿ ನ್ಯಾಯಪೀಠದ ಗಮನಕ್ಕೆ ತಂದರು.

‘ರಾಜ್ಯದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಕೆಪಿಎಸ್‌ಸಿ ಮುಖಾಂತರವೇ ಭರ್ತಿ ಮಾಡಬೇಕಿದೆ. ಆದ್ದರಿಂದ ಈ ಪ್ರಕರಣವನ್ನು ಶೀಘ್ರ ವಿಲೇವಾರಿ ಮಾಡಬೇಕು’ ಎಂದು ರವಿವರ್ಮ ಕುಮಾರ್‌ ಕೋರಿದರು. 

‘ಈ ಪ್ರಕರಣದಲ್ಲಿ ರಾಜ್ಯಪಾಲರನ್ನು ಪ್ರತಿವಾದಿಯನ್ನಾಗಿ ಮಾಡಲು ಹೇಗೆ ಸಾಧ್ಯ’ ಎಂದು ಅರ್ಜಿದಾರರನ್ನು ಪ್ರಶ್ನಿಸಿದ ಪೀಠವು, ‘ಅರ್ಜಿಯಲ್ಲಿ ತಾಂತ್ರಿಕ  ದೋಷಗಳಿವೆ’ ಎಂದು ಹೇಳಿತು. ತಿದ್ದುಪಡಿ ಅರ್ಜಿ ಸಲ್ಲಿಸುವಂತೆ ಸೂಚಿಸಿದ ಪೀಠವು ವಿಚಾರಣೆ­­ಯನ್ನು ಎರಡು ವಾರಗಳ ಕಾಲ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.