ADVERTISEMENT

‘ನೋವು ತಿಂದಿದ್ದೇನೆ, ಎಂದಿಗೂ ಮರೆಯೊಲ್ಲ’

ಸಿ.ಎಂ ಹುದ್ದೆ ತಪ್ಪಿಸಿದ್ದು ಯಾರು?: ಸಿದ್ದರಾಮಯ್ಯ–ಕುಮಾರಸ್ವಾಮಿ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 19:30 IST
Last Updated 30 ಮಾರ್ಚ್ 2015, 19:30 IST
‘ನೋವು ತಿಂದಿದ್ದೇನೆ, ಎಂದಿಗೂ ಮರೆಯೊಲ್ಲ’
‘ನೋವು ತಿಂದಿದ್ದೇನೆ, ಎಂದಿಗೂ ಮರೆಯೊಲ್ಲ’   

ಬೆಂಗಳೂರು: ‘ಹೌದು, ನನಗೆ ಎರಡು ಸಲ ಮುಖ್ಯಮಂತ್ರಿ ಆಗುವ ಅವಕಾಶವಿತ್ತು. ಎರಡೂ ಸಲ ತಪ್ಪಿಸಲಾಯಿತು. ನೋವು ತಿಂದವನು ನಾನು, ಅದನ್ನು ಯಾವತ್ತೂ ಮರೆಯೊಲ್ಲ’.

–ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಸೋಮವಾರ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರಗೇಟು ನೀಡಿದ ಪರಿಯಿದು.

‘ಪದ್ಮನಾಭನಗರದಿಂದ ಸಲಹೆ ತೆಗೆದುಕೊಂಡು ಆಡಳಿತ ನಡೆಸಿದ್ದರೆ ನಿಮ್ಮ ಪಕ್ಷದಲ್ಲೇ ಇರುತ್ತಿದ್ದೆ. ಹಾಗೆ ಮಾಡಲಿಲ್ಲ ಎನ್ನುವ ಕಾರಣಕ್ಕಾಗಿಯೇ ನಾನು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಯಿತು’ ಎಂದು ಕುಟುಕಿದರು.

ಮುಖ್ಯಮಂತ್ರಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕುಮಾರಸ್ವಾಮಿ, ‘ಪ್ರಜಾವಾಣಿಯಲ್ಲಿ ನಿಮ್ಮ ಸಂದರ್ಶನ ಬಂದ ಮೇಲೆ ನಾನು

ನಾನು ಮುಖ್ಯಮಂತ್ರಿ ಆಗದೇ ಹೋದಾಗ ರೇವಣ್ಣನಂತೂ ಅಕ್ಷರಶಃ ಅತ್ತುಬಿಟ್ಟಿದ್ದ. ಆದ್ದರಿಂದಲೇ ಅವನ ಮೇಲೆ ನನಗೆ ಅಭಿಮಾನ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ನೀವು ಮುಖ್ಯಮಂತ್ರಿ ಆಗಬೇಕು ಎನ್ನುವ ಸಹಿ ಸಂಗ್ರಹ ಅಭಿಯಾನದಲ್ಲಿ ನಾನೂ ಇದ್ದೆ. ಜೆ.ಎಚ್‌. ಪಟೇಲ್‌ರನ್ನೇ ನೀವು ಇಳಿಸಲು ಹೊರಟಾಗ ನಿಮ್ಮ ವಿರುದ್ಧವೇ ನಿಲ್ಲಬೇಕಾಯಿತು.
ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ 

ದೇವೇಗೌಡರನ್ನು ಪುನಃ ವಿಚಾರಿಸಿದ್ದೇನೆ. ನೀವು ಆರೋಪಿಸುವಂತೆ ಜೆಡಿಎಸ್‌ಗೆ ಉಪ ಮುಖ್ಯಮಂತ್ರಿ ಹುದ್ದೆಯೇ ಸಾಕು ಎನ್ನುವ ಅಭಿಪ್ರಾಯವನ್ನು ಅವರು ನೀಡಿರಲಿಲ್ಲ’ ಎಂದು ಹೇಳಿದರು.

ಅದಕ್ಕೆ ಸಿದ್ದರಾಮಯ್ಯ, ‘ಆಗಿನ ಮಾತುಕತೆ ಸಂದರ್ಭದಲ್ಲಿದ್ದ ಎಂ.ಪಿ. ಪ್ರಕಾಶ್‌ ಈಗಿಲ್ಲ. ಆದರೆ, ಪಿ.ಜಿ.ಆರ್‌ ಸಿಂಧ್ಯಾ, ಸಿ.ಎಂ. ಇಬ್ರಾಹಿಂ, ಶರದ್‌ ಪವಾರ್‌, ದೇವೇಗೌಡ ಹಾಗೂ ನಾನು ಎಲ್ಲರೂ ಬದುಕಿದ್ದೇವೆ. ಒಟ್ಟಿಗೆ ಸೇರಿ ಚರ್ಚಿಸಿದರೆ ಸತ್ಯ ಏನು ಎನ್ನುವುದು ಗೊತ್ತಾಗುತ್ತದೆ’ ಎಂದರು.

‘ದೇವೇಗೌಡರು ನಮ್ಮನ್ನೆಲ್ಲ ಪವಾರ್‌ ಮನೆಗೆ ಕರೆದೊಯ್ದರು. ಮಾತುಕತೆ ಕಾಲಕ್ಕೆ ‘ಮುಖ್ಯಮಂತ್ರಿ ಹುದ್ದೆಯನ್ನು ನೀವೇ ವಹಿಸಿಕೊಳ್ಳಿ’ ಎನ್ನುವ ಸಲಹೆ ಅವರಿಂದ ಬಂತು. ಅದಕ್ಕೆ ದೇವೇಗೌಡರು, ‘ಬೇಡ, ನಮಗೆ ಉಪ ಮುಖ್ಯಮಂತ್ರಿ ಹುದ್ದೆ ಸಾಕು’ ಎಂದುಬಿಟ್ಟರು. ‘ಯಾಕೆ ಹೀಗೆ’ ಎಂದು ಪ್ರಶ್ನಿಸಿದಾಗ, ‘ಎಸ್‌.ಎಂ. ಕೃಷ್ಣ ಅವರ ವಿರುದ್ಧ ನಾವೇ ಚಾರ್ಜ್‌ಶೀಟ್‌ ಕೊಟ್ಟಿದ್ದೇವೆ. ಇಲ್ಲದ ಸಮಸ್ಯೆಯನ್ನು ಮೈಮೇಲೆ ಏಕೆ ಎಳೆದುಕೊಳ್ಳುವುದು’ ಎನ್ನುವ ವಿವರಣೆಯನ್ನು ಗೌಡರು ಕೊಟ್ಟಿದ್ದರು’ ಎಂದು ನೆನಪಿಸಿಕೊಂಡರು.

‘ಎನ್‌ಸಿಪಿ ಮುಖಂಡ ಪವಾರ್‌  ಪ್ರಸ್ತಾಪವೇಕೆ? ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಇಲ್ಲವೆ ಅಹ್ಮದ್‌ ಪಟೇಲ್‌ ಅವರನ್ನು ಸಂಪರ್ಕಿಸಿದರೆ ಸತ್ಯ ಗೊತ್ತಾಗುತ್ತದೆ’ ಎಂದು ಕುಮಾರಸ್ವಾಮಿ ಕೆಣಕಿದರು.

ಅದಕ್ಕೆ ಸಿದ್ದರಾಮಯ್ಯ, ‘ಸೋನಿಯಾ ಗಾಂಧಿ ಅವರೇ ಈಗ ನನ್ನನ್ನು ಕಾಂಗ್ರೆಸ್‌ ಪಕ್ಷದಿಂದ ಮುಖ್ಯಮಂತ್ರಿ ಮಾಡಿದ್ದು. ಆಗಲೂ ನಾನು ಮುಖ್ಯಮಂತ್ರಿ ಆಗುವುದನ್ನು ಅವರು ತಪ್ಪಿಸಿರಲಿಲ್ಲ’ ಎಂದು ತಿರುಗೇಟು ನೀಡಿದರು.

ಇರುಸುಮುರುಸು: ‘ನಿಮ್ಮದೇ ಪಕ್ಷದ ಸಿಂಧ್ಯಾ ಅವರನ್ನೇ ಕೇಳಿ, ಸತ್ಯ ಗೊತ್ತಾಗುತ್ತೆ’ ಎಂದು ಮುಖ್ಯಮಂತ್ರಿ ಹೇಳಿದಾಗ, ‘ಸಿಂಧ್ಯಾ ಈಗ ನಮ್ಮ ಪಕ್ಷದಲ್ಲಿಲ್ಲ’ ಎಂದು ಕುಮಾರಸ್ವಾಮಿ ಗೊಣಗಿದರು.

‘ಮೊನ್ನೆತಾನೆ ಸಿಂಧ್ಯಾ ಸಿಕ್ಕಿದ್ದರು. ಜೆಡಿಎಸ್‌ನಲ್ಲೇ ಇರುವೆ. ಆದರೆ, ಸಕ್ರಿಯವಾಗಿಲ್ಲ ಎಂದಿದ್ದರು. ಈಗ ನೀವು ಹೀಗೆ ಹೇಳುತ್ತೀರಿ’ ಎಂದು ಸಿದ್ದರಾಮಯ್ಯ ಪಟ್ಟುಬಿಡದೆ ಕೇಳಿದರು. ಕುಮಾರಸ್ವಾಮಿ ಅವರು ಸುಮ್ಮನೇ ಕುಳಿತರು. ಆದರೆ ಅವರ ಪಕ್ಕದಲ್ಲಿದ್ದ ವೈ.ಎಸ್‌.ವಿ ದತ್ತ, ‘ಹೌದು, ಅವರಿನ್ನೂ ನಮ್ಮ ಪಕ್ಷದಲ್ಲೇ ಇದ್ದಾರೆ’ ಎಂದು ಸ್ಪಷ್ಟನೆ ನೀಡಿದರು.

‘1996ರಲ್ಲೂ ನನಗೆ ಮುಖ್ಯಮಂತ್ರಿ ಆಗುವ ಅವಕಾಶ ಇತ್ತು. ಆಗ ಅವಕಾಶ ತಪ್ಪಿಸಿದ್ದೂ ನೀವೇ. ಸ್ವತಃ ನೀವೇ ಸದನದಲ್ಲಿ ಹೇಳಿಕೆ ನೀಡಿದ್ದಿರಲ್ಲ’ ಎಂದು ಮುಖ್ಯಮಂತ್ರಿ ಕೇಳಿದರು.  ‘ಜೆ.ಎಚ್‌. ಪಟೇಲ್ ಅವರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲು ಹಾಗೆ ಮಾಡಿದ್ದೆ ಎಂಬುದನ್ನೂ ಆ ಕ್ಷಣದಲ್ಲೇ ಸ್ಪಷ್ಟಪಡಿಸಿ­ದ್ದೇನೆ’ ಎಂದು ಕುಮಾರಸ್ವಾಮಿ ಮಾರುತ್ತರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT