ADVERTISEMENT

‘ಪ.ಜಾತಿ: 677 ದೂರು ಬಾಕಿ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 20:03 IST
Last Updated 4 ಸೆಪ್ಟೆಂಬರ್ 2015, 20:03 IST

ಬೆಂಗಳೂರು: ‘ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ 2012ರ ಬಳಿಕ ಕರ್ನಾಟಕದಿಂದ ಒಟ್ಟು 954 ದೂರುಗಳು ಸಲ್ಲಿಕೆ ಆಗಿವೆ. ಈ ಪೈಕಿ 277 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. ಇನ್ನೂ 677 ದೂರುಗಳನ್ನು ಇನ್ನಷ್ಟೇ ಇತ್ಯರ್ಥಪಡಿಸಬೇಕಾಗಿದೆ’ ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಸದಸ್ಯೆ ಕಮಲಮ್ಮ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಯೋಗದ ಸದಸ್ಯೆ ಆದ ಬಳಿಕ ರಾಜ್ಯಕ್ಕೆ  ಎರಡನೇ ಬಾರಿ ಭೇಟಿ ನೀಡುತ್ತಿದ್ದೇನೆ.  2 ದಿನಗಳಲ್ಲಿ ಒಟ್ಟು 77 ದೂರುಗಳಿ ಸಲ್ಲಿಕೆ ಆಗಿವೆ. ಈ ಪೈಕಿ 14 ದೂರುಗಳನ್ನು ಸ್ಥಳದಲ್ಲೇ ಬಗೆಹರಿಸಲಾಗಿದೆ. 8 ಪ್ರಕರಣಗಳನ್ನು ಅಧಿಕಾರಿಗಳ ನೆರವಿನಿಂದ ಇತ್ಯರ್ಥಗೊಳಿಸಲಾಗಿದೆ. ಒಂದು ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಆಯೋಗ ಮಧ್ಯಪ್ರವೇಶ ಮಾಡಲು ಬರುವುದಿಲ್ಲ’ ಎಂದರು.

‘ಪರಿಶಿಷ್ಟ ಜಾತಿಯವರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ 23 ದೂರುಗಳು ಬಂದಿವೆ. ಈ ಪೈಕಿ 22 ದೂರುಗಳನ್ನು ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಇಲಾಖೆಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಭರವಸೆ ನೀಡಿದ್ದಾರೆ’ ಎಂದರು. ‘ಆಯೋಗವು ಪರಿಶಿಷ್ಟ ಜಾತಿಯವರ ಮೇಲಿನ ದೌರ್ಜನ್ಯ, ಅವರಿಗೆ ಸಿಗಬೇಕಾದ ಸೇವೆಗಳು ಹಾಗೂ ಅವರ ಭೂ ಒಡೆತನಕ್ಕೆ ಸಂಬಂಧಿಸಿದ ದೂರುಗಳ ವಿಚಾರಣೆ ನಡೆಸುತ್ತದೆ. ದೂರುಗಳ ವಿಲೇವಾರಿಗೆ ರಾಜ್ಯದ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.  ಅನ್ಯ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪರಿಶಿಷ್ಟರ ಪರಿಸ್ಥಿತಿ ಉತ್ತಮವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.