ADVERTISEMENT

‘ಪ್ರತಿಭಟನೆ ಅಲ್ಲ, ಗುಲಾಮಗಿರಿ ವಿರುದ್ಧ ಧ್ವನಿ’

ಜೂನ್‌್ 4ರಂದು ಸೇವೆಗೆ ಗೈರು ನಿಶ್ಚಿತ: ಪೊಲೀಸರ ಅಚಲ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST
‘ಪ್ರತಿಭಟನೆ ಅಲ್ಲ, ಗುಲಾಮಗಿರಿ ವಿರುದ್ಧ ಧ್ವನಿ’
‘ಪ್ರತಿಭಟನೆ ಅಲ್ಲ, ಗುಲಾಮಗಿರಿ ವಿರುದ್ಧ ಧ್ವನಿ’   

ಬೆಂಗಳೂರು: ರಾಜ್ಯ ಸರ್ಕಾರದ ಯಾವುದೇ ಭರವಸೆಗೆ  ತೃಪ್ತರಾಗದ ಪೊಲೀಸರು, ಅಖಿಲ ಕರ್ನಾಟಕ ಪೊಲೀಸ್‌ ಮಹಾಸಂಘದ ನೇತೃತ್ವದಲ್ಲಿ ಜೂನ್‌ 4ರಂದು ಸೇವೆಗೆ ಗೈರು ಹಾಜರು ಆಗುವುದು ನಿಶ್ಚಿತ ಎನ್ನುತ್ತಿದ್ದಾರೆ.

‘ಪೊಲೀಸರು ತಮ್ಮ ಹಕ್ಕು ಕೇಳುವ ಸಮಯ ಬಂದಿದೆ. ಹೀಗಾಗಿ 32 ಸಾವಿರಕ್ಕೂ ಹೆಚ್ಚು ಕಾನ್‌ಸ್ಟೆಬಲ್‌ಗಳು ಈಗಾಗಲೇ ರಜೆ ಚೀಟಿ ನೀಡಿದ್ದಾರೆ. ಹಿರಿಯ ಅಧಿಕಾರಿಗಳು ರಜೆ ನೀಡದಿದ್ದರೂ ಅವರು ಸೇವೆಗೆ ಗೈರಾಗಲಿದ್ದಾರೆ’ ಎಂದು ಪೊಲೀಸ್‌ ಮಹಾ ಸಂಘದ ಅಧ್ಯಕ್ಷ ವಿ. ಶಶಿಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದಲ್ಲಿ ಹೊಸದಾಗಿ ನೇಮಕವಾಗುವ ಕಾನ್‌ಸ್ಟೆಬಲ್‌ ಒಬ್ಬರಿಗೆ ₹15ರಿಂದ ₹17 ಸಾವಿರ ಸಂಬಳ ನೀಡಲಾಗುತ್ತದೆ. ಅದೇ ಆಂಧ್ರ ಪ್ರದೇಶದಲ್ಲಿ ₹33ರಿಂದ ₹35 ಸಂಬಳವಿದೆ. ವೇತನದಲ್ಲಿ ಸಾಕಷ್ಟು ತಾರತಮ್ಯವಿದೆ’ ಎಂದು ಅವರು ದೂರಿದರು.

‘ಪೊಲೀಸರಿಗೆ ಪ್ರತಿಭಟನೆ ನಡೆಸುವ ಹಕ್ಕಿಲ್ಲ ನಿಜ. ಜೂನ್‌್ 4ರಂದು ನಡೆಯುತ್ತಿರುವುದು ಪ್ರತಿಭಟನೆಯಲ್ಲ. ಅದು ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಮೇಲಾಗುತ್ತಿರುವ ಗುಲಾಮಗಿರಿ ವಿರುದ್ಧದ ಧ್ವನಿ ಅಷ್ಟೇ. ಜತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವವರ ವಿರುದ್ಧದ ಹೋರಾಟ. ಅದಕ್ಕಾಗಿಯೇ ಕಾನ್‌ಸ್ಟೆಬಲ್‌ಗಳು ರಜೆ ಕೇಳಿದ್ದಾರೆ. ರಜೆ ಸಿಗದಿದ್ದರೆ ಅವರೆಲ್ಲ ಸೇವೆಗೆ ಗೈರು ಹಾಜರಾಗಿ ಆಕ್ರೋಶ ವ್ಯಕ್ತಪಡಿಸಲಿದ್ದಾರೆ’ ಎಂದು ಶಶಿಧರ್‌ ವಿವರಿಸಿದರು. 

ರಜೆ ಕೇಳಿದ್ದಕ್ಕೆ ಬೆದರಿಕೆ:  ‘ನಮ್ಮ ಹಕ್ಕಿಗಾಗಿ ಕಾನೂನುಬದ್ಧ ಹೋರಾಟ ನಡೆಸಲು ಜೂನ್‌ 4ರಂದು ರಜೆ ನೀಡುವಂತೆ ಅರ್ಜಿ ಸಲ್ಲಿಸಿದ್ದೇವೆ. ಆದರೆ ರಜೆ ಕೇಳಿದ್ದಕ್ಕೆ ಅಮಾನತು ಮಾಡುವುದಾಗಿ ಕೆಲ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಕಾನ್‌ಸ್ಟೆಬಲ್‌ ಒಬ್ಬರು ತಿಳಿಸಿದರು.

ಮನೆಯಲ್ಲೇ ಕೂತರೂ ಸರಿ.... ‘ರಾಜ್ಯದಲ್ಲಿ ಪೊಲೀಸರ ಕಾರ್ಯಭಾರ ಹೆಚ್ಚಿದೆ. ಹಬ್ಬ ಹರಿದಿನ, ಚಳಿ-ಮಳೆ ಎನ್ನದೆ ದುಡಿಯಬೇಕು. ಅದಕ್ಕೆ ತಕ್ಕಂತೆ ಸೌಕರ್ಯಗಳಿಲ್ಲ.ಕೆಲಸದಲ್ಲಿ ಸಣ್ಣಪುಟ್ಟ ಲೋಪ ಕಂಡುಬಂದರೂ ಟೀಕೆ ಟಿಪ್ಪಣಿ ಎದುರಿಸಬೇಕು.

ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ನಮಗೆ ಸಾರ್ವಜನಿಕವಾಗಿ ಪ್ರತಿಭಟನೆ ಮಾಡುವ ಹಕ್ಕೂ ಇಲ್ಲ. ಹೀಗಾಗಿ ಆ ದಿನ ಕರ್ತವ್ಯಕ್ಕೆ ಗೈರಾಗುವ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸುತ್ತೇವೆ’ ಎಂದು ಬೆಂಗಳೂರು ಪೂರ್ವ ವಿಭಾಗದ ಕಾನ್‌ಸ್ಟೆಬಲ್ ಒಬ್ಬರು ಹೇಳಿದರು.

ಅಂತ್ಯಕ್ರಿಯೆಗೂ ಹೋಗಲಿಲ್ಲ: ‘ಬೆಂಗಳೂರು ಏರ್‌ಪೋರ್ಟ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದ ನಾನು, 2002ರಲ್ಲಿ  ತಂಗಿಯ ಗಂಡ ಸಾವನ್ನಪ್ಪಿದ್ದ ಕಾರಣ ಮೂರು ದಿನಗಳ ರಜೆ ಕೇಳಿದ್ದೆ. ಆದರೆ, ರಜೆ ನೀಡಲು ಆಗಿನ ಇನ್‌ಸ್ಪೆಕ್ಟರ್ ನಿರಾಕರಿಸಿದ್ದರು. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಹಾಜರಾಗುವಂತೆ ಹೇಳಿದ್ದರು. ಕೆಲಸದ ಅವಧಿ ಮುಗಿದರೂ ಹೆಚ್ಚುವರಿ ಸಮಯ ಠಾಣೆಯಲ್ಲಿರಬೇಕೆಂದು ಆದೇಶಿಸಿದ್ದರು.

ಹೀಗೆ ಇಲಾಖೆಯಲ್ಲಿ ಅಸಹ್ಯ ಹುಟ್ಟಿಸುವಂತಹ ಬೆಳವಣಿಗೆಗಳು ನಡೆಯುತ್ತಿವೆ. ಅವುಗಳ ವಿರುದ್ಧ ಧ್ವನಿ ಎತ್ತುವ ಕಾಲ ಈಗ ಬಂದಿದೆ’ ಎಂದು ಎಎಸ್‌ಐ ಒಬ್ಬರು ಹೇಳಿದರು.

ಹೆಚ್ಚುವರಿ ಭತ್ಯೆ ಸಿಗಲ್ಲ: ‘ಕಾನ್‌ಸ್ಟೆಬಲ್‌, ಹೆಡ್‌ ಕಾನ್‌ಸ್ಟೆಬಲ್ ಹಾಗೂ ಎಎಸ್‌ಐಗಳು ನಿತ್ಯ ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ ಎಂಟು ಗಂಟೆಯಿಂದ ರಾತ್ರಿ ಎಂಟು ಗಂಟೆವರೆಗೆ ಮೊದಲ ಪಾಳಿ. ರಾತ್ರಿ ಎಂಟರಿಂದ ಬೆಳಿಗ್ಗೆ ಎಂಟು ಗಂಟೆ ವರೆಗೆ ಎರಡನೇ ಪಾಳಿ.

ಸಾಮಾನ್ಯವಾಗಿ 12 ಗಂಟೆ ಕೆಲಸ ಮಾಡುತ್ತಿರುವ ಕಾನ್‌ಸ್ಟೆಬಲ್‌ಗಳು, ಮೆರವಣಿಗೆ, ಜಾತ್ರೆ, ಸಮಾವೇಶ, ಗಣ್ಯರ ಭೇಟಿ ಸೇರಿದಂತೆ ವಿಶೇಷ ಸಂದರ್ಭದಲ್ಲಿ ನಾಲ್ಕೈದು ತಾಸು ಹೆಚ್ಚುವರಿ ಕೆಲಸ ಮಾಡುತ್ತಾರೆ. ಅದಕ್ಕೆ ಯಾವುದೇ ಭತ್ಯೆಗಳೂ ಸಿಗುವುದಿಲ್ಲ’ ಎಂದು ಪಶ್ಚಿಮ ವಿಭಾಗದ ಸಿಬ್ಬಂದಿ ವಿವರಿಸಿದರು.


ನಿಗದಿತ ರಜೆಗಳೂ ಇಲ್ಲ: ‘ವರ್ಷಕ್ಕೆ 15 ಸಾಂದರ್ಭಿಕ ರಜೆಗಳು (ಸಿಎಲ್), 30 ಗಳಿಕೆ ರಜೆಗಳು (ಇಎಲ್) ನಿಗದಿಯಾಗಿವೆ. ಅಲ್ಲದೇ, ತಿಂಗಳಿಗೆ ನಾಲ್ಕು ರಜೆಗಳನ್ನು ಸರ್ಕಾರ ಗೊತ್ತುಪಡಿಸಿದೆ. ಆದರೆ, ಇದರಲ್ಲಿ ಅರ್ಧದಷ್ಟೂ ರಜೆಗಳು ಸಿಗುತ್ತಿಲ್ಲ.

ರಜಾ ದಿನ ಕೆಲಸ ಮಾಡಿದರೆ, ನೂರು ರೂಪಾಯಿ ಹೆಚ್ಚುವರಿಯಾಗಿ ಸಿಗುತ್ತದೆ. ಠಾಣೆಯ ಇತರೆ ಸಿಬ್ಬಂದಿ ತನಿಖಾ ಕಾರ್ಯದಲ್ಲಿ ರಜೆ ಮೇಲೆ ತೆರಳಿದ್ದರೆ ಅಥವಾ ಹಿರಿಯ ಅಧಿಕಾರಿಗಳ ಮನಸ್ಥಿತಿಗೆ ತಕ್ಕಂತೆ ನಾವು ನಡೆದುಕೊಳ್ಳದಿದ್ದರೆ ನಿಗದಿತ ರಜೆಗಳು ಸಹ ಕೈತಪ್ಪುತ್ತವೆ' ಎಂದು ಬೆಂಗಳೂರು ಗ್ರಾಮಾಂತರ ಠಾಣೆಯ ಕಾನ್‌ಸ್ಟೆಬಲ್ ಅಳಲು ತೋಡಿಕೊಂಡರು.

ವೈದ್ಯಕೀಯ ಪತ್ರ ನೀಡದಿರಲು ಸುತ್ತೋಲೆ
‘ಜೂನ್‌ 4ರಂದು ಪೊಲೀಸರಿಗೆ ಅನಾರೋಗ್ಯ ಕುರಿತ ಯಾವುದೇ ರೀತಿಯ ವೈದ್ಯಕೀಯ ಪ್ರಮಾಣ ಪತ್ರ ನೀಡಬಾರದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

‘ಪೊಲೀಸರು ಆಸ್ಪತ್ರೆಗೆ ಬಂದು ಅನಾರೋಗ್ಯ ಕಾರಣ ರಜೆ ಮಂಜೂರಿಗೆ ಪ್ರಮಾಣ ಪತ್ರ ನೀಡುವಂತೆ ಕೇಳಬಹುದು. ಆಗ ವಾಸ್ತವ ಸಂಗತಿ ಅರಿಯದೇ ಯಾವುದೇ ಪೊಲೀಸರಿಗೆ ಶಿಫಾರಸು ಪತ್ರ ನೀಡಬಾರದು’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.