ADVERTISEMENT

‘₹ 5 ಕಡಿಮೆಗೆ ಹಾಲು ಮಾರುವೆ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 20:04 IST
Last Updated 4 ಸೆಪ್ಟೆಂಬರ್ 2015, 20:04 IST

ಬೆಂಗಳೂರು: ಹಾಸನ ಹಾಲು ಒಕ್ಕೂಟಕ್ಕೆ ಬೆಂಗಳೂರಿನಲ್ಲಿ ಹಾಲು ಮಾರಾಟ ಮಾಡಲು ಅವಕಾಶ ನೀಡಿದರೆ, ₹ 5 ಕಡಿಮೆ ದರಕ್ಕೆ ಮಾರಾಟ ಮಾಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ, ಶಾಸಕ ಎಚ್.ಡಿ. ರೇವಣ್ಣ ಹೇಳಿದರು.

‘ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಗಳು ದಿನಕ್ಕೆ 10ರಿಂದ 15 ಲಕ್ಷ ಲೀಟರ್ ಹಾಲು ಮಾರುತ್ತಿವೆ. ನಮಗೂ ಇಲ್ಲಿ ಹಾಲು ಮಾರಾಟಕ್ಕೆ ಅವಕಾಶ ಕಲ್ಪಿಸಿದರೆ, ಪ್ರತಿ ಲೀಟರ್‌ ಹಾಲನ್ನು ಇತರ ಕಂಪೆನಿಗಳಿಗಿಂತ ₹ 5 ಕಡಿಮೆ ದರದಲ್ಲಿ ಮಾರುತ್ತೇವೆ. ಖಾಸಗಿಯವರ ಪೈಪೋಟಿ ಎದುರಿಸುತ್ತೇವೆ’ ಎಂದು ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಾಸನ ಹಾಲು ಒಕ್ಕೂಟವು ಪ್ರತಿ ದಿನ 6.5 ಲಕ್ಷ ಲೀಟರ್‌ ಹಾಲನ್ನು, ಪುಡಿ ತಯಾರಿಸಲು ಕಳುಹಿಸುತ್ತಿದೆ. ಒಕ್ಕೂಟವು ₹ 21 ಕೋಟಿ ನಷ್ಟದಲ್ಲಿದೆ, ಹೈನುಗಾರರಿಗೆ ₹ 30 ಕೋಟಿ ಪಾವತಿಸಬೇಕಿದೆ. ಬೆಂಗಳೂರಿನಲ್ಲಿ ಹಾಲು ಮಾರಲು ಅವಕಾಶ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಹೇಮಾವತಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಇಲ್ಲಿ ಸಂಗ್ರಹವಾದ ನೀರು ಬಳಸಿ ಬೆಳೆ ಬೆಳೆಯುವ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಪಂಜಾಬ್‌ನಿಂದ ತಂದು ಬಿತ್ತಿದ ಆಲೂಗಡ್ಡೆ ಬೆಳೆ ಹಾಸನ ಜಿಲ್ಲೆಯಲ್ಲಿ ಕೈಕೊಟ್ಟಿದೆ. ಈ ವಿಚಾರಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಭೆ ಕರೆಯದಿದ್ದರೆ, ಸೆ. 10ರಂದು ಅವರ ಮನೆ ಮುಂದೆ ಧರಣಿ ನಡೆಸುವೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT