ADVERTISEMENT

100 ದಿನಗಳಲ್ಲಿ ಮಂಗಳ ನೌಕೆ ಕಕ್ಷೆಗೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2014, 19:30 IST
Last Updated 16 ಜೂನ್ 2014, 19:30 IST
100 ದಿನಗಳಲ್ಲಿ ಮಂಗಳ ನೌಕೆ ಕಕ್ಷೆಗೆ
100 ದಿನಗಳಲ್ಲಿ ಮಂಗಳ ನೌಕೆ ಕಕ್ಷೆಗೆ   

ಬೆಂಗಳೂರು (ಪಿಟಿಐ): ದೇಶದ ಬಹು­ಮಹತ್ವಾ­ಕಾಂಕ್ಷೆಯ  ಯೋಜನೆಯಾದ ‘ಮಂಗಳ ಕಕ್ಷೆಗಾಮಿ ಯೋಜನೆ’­ಯ (ಮಂಗಳಯಾನ) ಗಗನನೌಕೆಯು ಸೋಮವಾರದಿಂದ (ಜೂನ್ 16) ಸರಿಯಾಗಿ 100ನೇ ದಿನಕ್ಕೆ (ಸೆಪ್ಟೆಂಬರ್‌ 24) ಮಂಗಳನ ಕಕ್ಷೆಗೆ ಸೇರಲಿದೆ ಎಂದು ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮುಖ್ಯ ಕಾರ್ಯಾಲಯ ತಿಳಿಸಿದೆ.

ಕಳೆದ ವರ್ಷ ನವೆಂಬರ್‌ 5ರಂದು  ಮಂಗಳನತ್ತ ಹಾರಿದ ಈ ನೌಕೆಯು, 300 ದಿವಸಗಳ ಬಾಹ್ಯಾಂತರಿಕ್ಷದ ಯಾತ್ರೆ ಕೈಗೊಂಡು ಮಂಗಳನ ಅಂಗಳ ತಲುಪಲಿದೆ. ಈಗ ಸರಿಸುಮಾರು ಶೇ 70ರಷ್ಟು ದಾರಿ ಸವೆಸಿರುವ ನೌಕೆಯು, ಸದ್ಯ ಭೂಮಿಯಿಂದ 10.80 ಕೋಟಿ ಕಿ.ಮೀ. ತರಂಗಾಂತರ ದೂರದಲ್ಲಿ ಸಂಚರಿಸುತ್ತಿದೆ. ಭೂಮಿಯಿಂದ ರವಾನೆಯಾಗುವ ಸಂದೇಶ ಆರು ನಿಮಿಷಗಳಲ್ಲಿ ಈ ನೌಕೆಯನ್ನು ತಲುಪುತ್ತದೆ.

ಈ ಗಗನನೌಕೆ ಮತ್ತು ಇದ­ರ­­­ಲ್ಲಿರುವ ಅತ್ಯಾಧುನಿಕ ಐದು ಉಪಕರಣಗಳು ಸಕ್ರಿ­ಯ­ವಾಗಿವೆ ಎಂದು  ಮಂಗಳಯಾನದ ಸ್ಥಿತಿಗತಿಯ ಮಾಹಿ­ತಿ­ಯನ್ನು ‘ಇಸ್ರೊ’  ‘ಫೇಸ್‌ಬುಕ್‌’ನಲ್ಲಿ ಪ್ರಕಟಿಸಿದೆ. ನೌಕೆಯು ನಿಗದಿತ ಪಥದಲ್ಲೇ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯವನ್ನು (ಟಿಸಿಎಂ–2) ಎರಡನೇ ಬಾರಿಗೆ ಇದೇ ಜೂನ್‌ 11ರಂದು ಮಾಡಲಾಯಿತು. ಮೂರನೇ ‘ಟಿಸಿಎಂ’ ಕಾರ್ಯ ಆಗಸ್ಟ್‌ನಲ್ಲಿ ನಡೆಯಲಿದೆ.

ಮಂಗಳನ ಭೌತಿಕ ಚಹರೆ ಮತ್ತು ಅಲ್ಲಿನ ವಾತಾವರಣವನ್ನು ಹೆಚ್ಚಿನ ರೀತಿಯಲ್ಲಿ ಅಧ್ಯಯನ ಮಾಡುವ ಉದ್ದೇಶದಿಂದ ₨450 ಕೋಟಿ ವೆಚ್ಚದ ಈ ಯೋಜನೆ ರೂಪಿತವಾಗಿದೆ. ನೌಕೆಯಲ್ಲಿರುವ ಐದು ಅತ್ಯಾಧುನಿಕ ಸಾಧನಗಳು ಈ ಕೆಲಸ ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.