ADVERTISEMENT

110 ಮೀಟರ್‌ ಎತ್ತರದಲ್ಲಿ ಹಾರಾಡಲಿದೆ ತ್ರಿವರ್ಣ ಧ್ವಜ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST
110 ಮೀಟರ್‌ ಎತ್ತರದಲ್ಲಿ ಹಾರಾಡಲಿದೆ ತ್ರಿವರ್ಣ ಧ್ವಜ
110 ಮೀಟರ್‌ ಎತ್ತರದಲ್ಲಿ ಹಾರಾಡಲಿದೆ ತ್ರಿವರ್ಣ ಧ್ವಜ   

ಬೆಳಗಾವಿ: ‘ಇಲ್ಲಿನ ಕೋಟೆ ಕೆರೆ ದಂಡೆಯಲ್ಲಿ ಸ್ಥಾಪಿಸಲಾಗಿರುವ 110 ಮೀಟರ್‌ ಎತ್ತರದ ಶಾಶ್ವತ ಧ್ವಜಸ್ತಂಭದಲ್ಲಿ ಸೋಮವಾರ (ಮಾರ್ಚ್ 12) ಬೆಳಿಗ್ಗೆ 9ಕ್ಕೆ ರಾಷ್ಟ್ರಧ್ವಜವನ್ನು ಅಧಿಕೃತವಾಗಿ ಹಾರಿಸಲಾಗುವುದು’ ಎಂದು ಉತ್ತರ ಕ್ಷೇತ್ರದ ಶಾಸಕ ಫಿರೋಜ್‌ ಸೇಠ್‌ ತಿಳಿಸಿದರು.

'ವಾಘಾ ಗಡಿಯಲ್ಲಿ 105 ಮೀಟರ್‌ ಎತ್ತರದ, ಪುಣೆಯಲ್ಲಿ 107 ಮೀಟರ್‌ ಎತ್ತರದ ಸ್ತಂಭವಿದೆ. ಹೀಗಾಗಿ, ಬೆಳಗಾವಿಯದ್ದು ದೇಶದಲ್ಲಿಯೇ ಅತಿ ಎತ್ತರದ ಧ್ವಜಸ್ತಂಭವಾಗಿದೆ. ಇಲ್ಲಿ 120 ಅಡಿ ಉದ್ದ ಹಾಗೂ 80 ಅಡಿ ಅಗಲದ ರಾಷ್ಟ್ರಧ್ವಜ ವರ್ಷದ ಎಲ್ಲ ದಿನಗಳಲ್ಲೂ ಹಾರಾಡಲಿದೆ. ಇದು ನಗರದ ಪ್ರಮುಖ ಆಕರ್ಷಣೆಯ ತಾಣವಾಗಲಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬುಡಾ ಹಾಗೂ ಪಾಲಿಕೆ ಸಹಯೋಗದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದ್ದು, ₹ 1.62 ಕೋಟಿ ವೆಚ್ಚ ಮಾಡಲಾಗಿದೆ ಎಂದರು.

ADVERTISEMENT

‘ದಾಖಲೆ ಮುರಿಯಬೇಕು ಎನ್ನುವ ಉದ್ದೇಶದಿಂದ ಸ್ತಂಭ ಸ್ಥಾಪಿಸಿಲ್ಲ. ಜನರಲ್ಲಿ ದೇಶಪ್ರೇಮದ ಭಾವನೆ ಜಾಗೃತಗೊಳಿಸಬೇಕು ಎಂಬ ಆಶಯದಿಂದ ಕೈಗೊಳ್ಳಲಾಗಿದೆ. ಸ್ತಂಭದ ಕೆಳಗೆ ಅಳವಡಿಸಿರುವ ಮೋಟರ್‌ ಸಹಾಯದಿಂದ ಧ್ವಜವನ್ನು ಏರಿಸಲಾಗುವುದು ಮತ್ತು ಇಳಿಸಲಾಗುವುದು (ಎಲೆಕ್ಟ್ರೊ ಮೆಕ್ಯಾನಿಕಲ್ ಆಪರೇಷನ್‌). ಸ್ತಂಭದ ತೂಕ ಒಟ್ಟು 36 ಟನ್‌ಗಳಿಷ್ಟಿದ್ದರೆ, ಬಾವುಟದ ಬಟ್ಟೆಯ ತೂಕ 500 ಕೆ.ಜಿ.ಗಳಷ್ಟಿದೆ. ಬಜಾಜ್‌ ಕಂಪನಿಯವರು ಡೇನಿಯರ್‌ ಪಾಲಿಸ್ಟರ್‌ ಬಟ್ಟೆ ಬಳಸಿ ಸಿದ್ಧಪಡಿಸಿಕೊಟ್ಟಿದ್ದಾರೆ’ ಎಂದು ವಿವರಿಸಿದರು.

‘ರಾತ್ರಿ ವೇಳೆ ಬಾವುಟದ ಮೇಲೆ ವಿದ್ಯುದ್ದೀಪದ ಬೆಳಕು ಬೀಳುವಂತೆ, ಸ್ತಂಭದ ಎರಡೂ ಬದಿಯಲ್ಲಿ ಕಂಬಗಳನ್ನು ಅಳವಡಿಸಲಾಗಿದೆ. ರಾತ್ರಿ ವೇಳೆಯೂ ಬಾವುಟ ಆಕರ್ಷಣೀಯವಾಗಿ ಕಾಣಿಸಬೇಕು ಎನ್ನುವುದು ಇದರ ಉದ್ದೇಶ. ಸ್ತಂಭ ಸ್ಥಾಪನೆ ಸಂಬಂಧ ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮತಿ ಪಡೆಯಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.