ADVERTISEMENT

13ನೇ ವರ್ಷದಲ್ಲಿ 20 ಸಾವಿರ ಲೇಖನ!

2 ಲೇಖನಗಳ ಪ್ರಕಟಣೆಯೊಂದಿಗೆ 2003ರಲ್ಲಿ ಆರಂಭವಾಗಿದ್ದ ಕನ್ನಡ ವಿಕಿಪೀಡಿಯ

ವಿಜಯ್ ಜೋಷಿ
Published 29 ಮೇ 2016, 19:37 IST
Last Updated 29 ಮೇ 2016, 19:37 IST
13ನೇ ವರ್ಷದಲ್ಲಿ 20 ಸಾವಿರ ಲೇಖನ!
13ನೇ ವರ್ಷದಲ್ಲಿ 20 ಸಾವಿರ ಲೇಖನ!   

ಬೆಂಗಳೂರು: ಕೇವಲ ಎರಡು ಲೇಖನಗಳ ಪ್ರಕಟಣೆಯೊಂದಿಗೆ 2003ರ ಜೂನ್‌ನಲ್ಲಿ ಆರಂಭವಾದ ಕನ್ನಡ ವಿಕಿಪೀಡಿಯ ಈಗ ತನ್ನ ಒಡಲಲ್ಲಿ 20 ಸಾವಿರ ಲೇಖನಗಳನ್ನು ತುಂಬಿಸಿಕೊಂಡಿದೆ. ‘ನಾನು ನಿನಗೆ, ನೀನು ನನಗೆ’ ಎನ್ನುವ ತತ್ವದಲ್ಲಿ ಕೆಲಸ ಮಾಡುತ್ತಿರುವ ‘ಕನ್ನಡ ವಿಕಿ’ ಜೂನ್‌ನಲ್ಲಿ 13 ವರ್ಷ ಪೂರ್ಣಗೊಳಿಸಲಿದೆ.

ಆರಂಭದಲ್ಲಿ, 10 ಸಾವಿರ ಲೇಖನಗಳನ್ನು ಸಂಗ್ರಹಿಸಲು ಏಳೂವರೆ ವರ್ಷ (2003ರ ಜೂನ್‌ನಿಂದ 2010ರ ಡಿಸೆಂಬರ್‌ವರೆಗಿನ ಅವಧಿ) ತೆಗೆದುಕೊಂಡಿದ್ದ ಕನ್ನಡ ವಿಕಿ, ನಂತರದ 10 ಸಾವಿರ ಲೇಖನಗಳನ್ನು ಐದು ವರ್ಷ ಒಂದು ತಿಂಗಳಲ್ಲಿ ಸಂಗ್ರಹಿಸಿದೆ.

‘ಇಂಗ್ಲಿಷ್‌ ವಿಕಿಪೀಡಿಯ ಮಾದರಿಯಲ್ಲೇ ಕನ್ನಡ ವಿಕಿಪೀಡಿಯ ಕೂಡ ಸಹಕಾರ ತತ್ವದ ಅಡಿ ಕೆಲಸ ಮಾಡುತ್ತದೆ. ಇಲ್ಲಿ ಮಾಹಿತಿ ಪಡೆಯಲು ಹಣ ಕೊಡಬೇಕಾಗಿಲ್ಲದ ಕಾರಣ, ಮಾಹಿತಿ ತುಂಬಿಸುವ ಕೆಲಸ ನಿರ್ವಹಿಸುವವರಿಗೂ (editors) ಹಣ ಸಿಗುವುದಿಲ್ಲ. ಹಾಗಾಗಿ ವಿಕಿಪೀಡಿಯಕ್ಕೆ ಲೇಖಕರನ್ನು ಸೆಳೆಯುವುದು ತುಸು ಕಷ್ಟದ ಕೆಲಸ’ ಎನ್ನುತ್ತಾರೆ ಸೆಂಟರ್‌ ಫಾರ್‌ ಇಂಟರ್ನೆಟ್‌ ಅಂಡ್‌ ಸೊಸೈಟಿಯ ಕಾರ್ಯಕ್ರಮ ಸಂಯೋಜಕ ಯು.ಬಿ. ಪವನಜ.

‘ಆದರೆ, ವಿಕಿಪೀಡಿಯ ಸಂಪಾದನೋತ್ಸವ ಹೆಸರಿನಲ್ಲಿ ಬೇರೆ ಬೇರೆ ಊರುಗಳಲ್ಲಿ ಕಾರ್ಯಕ್ರಮ ಆಯೋಜಿಸಿ ಕನ್ನಡ ವಿಕಿಪೀಡಿಯಕ್ಕೆ ಲೇಖನ ನೀಡುವವರ ಕೊರತೆ ತುಂಬಿಸುವ ಪ್ರಯತ್ನ ನಡೆದಿದೆ’ ಎಂದು ಅವರು ಹೇಳಿದರು.

‘ಯುನೆಸ್ಕೊ ಸಂಸ್ಥೆ ಗುರುತಿಸಿರುವ ಸಾಯುತ್ತಿರುವ ಭಾಷೆಗಳಲ್ಲಿ ಕನ್ನಡ ಇಲ್ಲ. ಆದರೆ ಕನ್ನಡ ಅಪಾಯದಲ್ಲಿದೆ ಎಂಬುದು ನಮ್ಮ ಅನುಭವಕ್ಕೆ ಬಂದಿರುವ ಸಂಗತಿ. ಜನರಿಗೆ ಬೇಕಿರುವ ಮಾಹಿತಿಯನ್ನೆಲ್ಲ ಕನ್ನಡದಲ್ಲಿ ಕೊಡುವುದು, ಈ ಭಾಷೆಯನ್ನು ಉಳಿಸಲು ಇರುವ ಒಂದು ಮಾರ್ಗ. ಕನ್ನಡ ವಿಕಿಪೀಡಿಯವು ಆ ಮಾರ್ಗದಲ್ಲಿಡುವ ಒಂದು ಮಹತ್ವದ ಹೆಜ್ಜೆ’ ಎಂದು ಅವರು ಅಭಿಪ್ರಾಯ ಹಂಚಿಕೊಂಡರು.

ಕೊಡುವವರು ಕಡಿಮೆ! :  ಮಾಹಿತಿ ಹುಡುಕಲು ಭಾರತದಲ್ಲಿ ವಿಕಿಪೀಡಿಯ ಬಳಸುವವರ ಸಂಖ್ಯೆ ಸಾಕಷ್ಟು ದೊಡ್ಡದಿದೆ. ಆದರೆ, ವಿಕಿಪೀಡಿಯಕ್ಕೆ ಮಾಹಿತಿ ಉಣಬಡಿಸುವವರ ಸಂಖ್ಯೆ ತೀರಾ ಕಡಿಮೆ ಎನ್ನುತ್ತದೆ ಅಮೆರಿಕದ ವಿಕಿಮೀಡಿಯಾ ಪ್ರತಿಷ್ಠಾನ.

‘ಹಾಗಾಗಿ, ಭಾರತೀಯ ಭಾಷೆಗಳಲ್ಲಿ ವಿಕಿಪೀಡಿಯ ಬೆಳೆಯಬೇಕು ಎಂಬ ಉದ್ದೇಶದಿಂದ ಅವುಗಳಿಗೆ ಬರುವ ಲೇಖನಗಳ ಸಂಖ್ಯೆ ಹೆಚ್ಚಿಸುವ ಕೆಲಸವನ್ನು ಸೆಂಟರ್ ಫಾರ್ ಇಂಟರ್ನೆಟ್‌ ಅಂಡ್‌ ಸೊಸೈಟಿಗೆ ವಿಕಿಮೀಡಿಯಾ ಪ್ರತಿಷ್ಠಾನ ವಹಿಸಿದೆ’ ಎಂದು ಪವನಜ ತಿಳಿಸಿದರು.

ಹೂರಣ ಹೆಚ್ಚಿಸಿದ ಸಂಪಾದನೋತ್ಸವ
ಬೆಂಗಳೂರು:
ಕನ್ನಡ ವಿಕಿಪೀಡಿಯಾದಲ್ಲಿ ನಿರ್ದಿಷ್ಟ ವಿಷಯಗಳ ಬಗ್ಗೆ ಲೇಖನಗಳು ಲಭ್ಯವಾಗುವಂತೆ ಮಾಡಲು ಬೆಂಗಳೂರು, ಮೈಸೂರು, ಮಂಗಳೂರು, ಸಾಗರದಲ್ಲಿ ಸಂಪಾದನೋತ್ಸವ ಆಚರಿಸಲಾಯಿತು.

ಈ ಕಾರ್ಯಕ್ರಮಗಳಿಂದಾಗಿ ಕರಾವಳಿ ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರ ಬಗ್ಗೆ, ಔಷಧ ಹಾಗೂ ಇತರ ಉಪಯುಕ್ತ ಸಸ್ಯಗಳ ಬಗ್ಗೆ, ಕನ್ನಡ ಸಾಹಿತ್ಯ ಚರಿತ್ರೆಯ ಬಗ್ಗೆ, ವಿಜ್ಞಾನ ಮತ್ತು ಮೆಕಾನಿಕಲ್‌ ಎಂಜಿನಿಯರಿಂಗ್‌ ಬಗ್ಗೆ ಲೇಖನಗಳ ಸಂಗ್ರಹ ಆಯಿತು.

ಇಷ್ಟಿದ್ದರೂ ದೇಶದ ಬೇರೆ ಪ್ರಾದೇಶಿಕ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿರುವ ಲೇಖನಗಳ ಸಂಖ್ಯೆ ಕಡಿಮೆ. ಮೃತ ಭಾಷೆ ಎಂದು ಕೆಲವರಿಂದ ಕರೆಸಿಕೊಳ್ಳುವ ಸಂಸ್ಕೃತದಲ್ಲೇ 11 ಸಾವಿರ ಲೇಖನಗಳಿವೆ. (ಪಟ್ಟಿ ನೋಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT