ADVERTISEMENT

14 ಪಿಯು ಪ್ರಾಂಶುಪಾಲರಿಗಷ್ಟೇ ಹಿಂಬಡ್ತಿ

ಇಲಾಖೆ ಕ್ರಮಕ್ಕೆ ಉಪನ್ಯಾಸಕರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST

ಬೆಂಗಳೂರು: ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ವೃಂದದ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವಾಗ 14 ಮಂದಿಗಷ್ಟೇ ಉಪನ್ಯಾಸಕರ ಹುದ್ದೆಗೆ ಹಿಂಬಡ್ತಿ ನೀಡಿ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಅದೇ ಹೊತ್ತಿಗೆ, 224 ಉಪನ್ಯಾಸಕರಿಗೆ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡಿ ಆದೇಶಿಸಿದೆ. ಅವರ ವೇತನ ಶ್ರೇಣಿ ₹30,400–51,300 ಆಗಿರಲಿದೆ. ಚುನಾವಣಾ ನೀತಿ ಸಂಹಿತೆ ಅವಧಿ ಮುಕ್ತಾಯಗೊಂಡ ಬಳಿಕ ಕೌನ್ಸಿಲಿಂಗ್‌ ಮೂಲಕ ಸ್ಥಳ ನಿಯುಕ್ತಿಗೊಳಿಸಲು ಇಲಾಖೆಯ ನಿರ್ದೇಶಕರಿಗೆ ಸೂಚಿಸಲಾಗಿದೆ.

ಬಿ.ಕೆ.ಪವಿತ್ರ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ತಯಾರಿಸಿದ್ದ ಜ್ಯೇಷ್ಠತಾ ಪಟ್ಟಿಯನ್ನು ಇಲಾಖೆಯು ಇದೇ ಮಾರ್ಚ್‌ 7ರಂದು ಪ್ರಕಟಿಸಿತ್ತು. ಹೆಚ್ಚುವರಿ ಬಡ್ತಿ ಪಡೆದ 144 ಪ್ರಾಂಶುಪಾಲರ ಹೆಸರುಗಳು ಆ ಪಟ್ಟಿಯಲ್ಲಿದ್ದವು. ಆ ಪಟ್ಟಿಯನ್ನೇ ಸುಪ್ರೀಂಕೋರ್ಟ್‌ಗೂ ಸಲ್ಲಿಸಲಾಗಿತ್ತು.

ADVERTISEMENT

‘ಇಲಾಖೆಯಲ್ಲಿ ಪ್ರಾಂಶುಪಾಲರ ವೃಂದದ ಬಡ್ತಿ ಕೋಟಾದ ಹುದ್ದೆಗಳು 915 ಇವೆ. ಅದರಲ್ಲಿ ಖಾಲಿ ಇರುವ 224 ಹುದ್ದೆಗಳನ್ನು ತುಂಬಲು ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಏಪ್ರಿಲ್‌ 12ರಂದು ನಡೆದ ಇಲಾಖಾ ಮುಂಬಡ್ತಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು. ಬಡ್ತಿ ನೀಡಿದ ನಂತರದಲ್ಲಿ ಪರಿಶಿಷ್ಟ ಜಾತಿಯ 11 ಹಾಗೂ ಪರಿಶಿಷ್ಟ ಪಂಗಡದ ಮೂವರು ಪ್ರಾಂಶುಪಾಲರಿಗೆ ಹಿಂಬಡ್ತಿ ನೀಡಲಾಗಿದೆ. ಅವರ ವೇತನ ಶ್ರೇಣಿ ₹22800–43,300 ಆಗಿರಲಿದೆ. ಮೀಸಲಾತಿ ನಿಯಮಗಳನ್ವಯ ಶೇ 15 ಹಾಗೂ ಶೇ 3 ಪಾಲಿಸಲಾಗಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸಮಜಾಯಿಷಿ ನೀಡಿದರು. ‘ಹಿಂಬಡ್ತಿ ನೀಡುವ ವಿಷಯದಲ್ಲಿ ಯಾವುದೇ ಲೋಪ ಆಗಿಲ್ಲ. ಕೆಲವರು ತಪ್ಪು ಮಾಹಿತಿ ಹರಡುತ್ತಿದ್ದಾರೆ’ ಎಂದರು.

‘ಬಡ್ತಿ ವಿಚಾರದಲ್ಲಿ ಹಲವು ಉಪನ್ಯಾಸಕರಿಗೆ ಅನ್ಯಾಯ ಆಗಿತ್ತು. ಪ್ರಾಂಶುಪಾಲರ ವೃಂದದವರಿಗೆ ₹ 30,400– ₹ 51,100 ವೇತನಾ ಶ್ರೇಣಿ ಇದೆ. ಈ ಶ್ರೇಣಿಗೆ ಬಡ್ತಿ ಮೀಸಲಾತಿ ಅನ್ವಯ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು. ಈ ತೀರ್ಪಿನ ಬಳಿಕವಾದರೂ ನಮಗೆ ನ್ಯಾಯ ಸಿಗಬಹುದು ಎಂದು ಆಶಿಸಿದ್ದೆವು. ಆದರೆ, ಇಲಾಖೆಯ ಈ ಕ್ರಮದಿಂದ ನ್ಯಾಯ ಮರೀಚಿಕೆ ಆಗಲಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಉಪನ್ಯಾಸಕರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಒಂದು ಕಡೆಯಲ್ಲಿ 14 ಮಂದಿಗೆ ಮಾತ್ರ ಹಿಂಬಡ್ತಿ ನೀಡಲಾಗಿದೆ. ಇನ್ನೊಂದು ಕಡೆಯಲ್ಲಿ, ಸಾಮಾನ್ಯ ಬಡ್ತಿ ಪ್ರಕ್ರಿಯೆ ಪ್ರಕಾರ 224 ಉಪನ್ಯಾಸಕರಿಗೆ ಬಡ್ತಿ ನೀಡಲಾಗಿದೆ. ಇವೆರಡೂ ಒಂದೇ ಎಂದು ಬಿಂಬಿಸಲು ಅಧಿಕಾರಿಗಳು ಹೊರಟಿದ್ದಾರೆ. ಹಳೆ ದಿನಾಂಕವನ್ನು (ಏಪ್ರಿಲ್‌ 16) ದಿನಾಂಕವನ್ನು ನಮೂದಿಸಿ ಬುಧವಾರ ಆದೇಶ ಹೊರಡಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.