ADVERTISEMENT

14 ಮಂತ್ರಿಗಳ ಅಧಿಕಾರಿಗಳಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST

ಬೆಂಗಳೂರು: ‘ಅಧಿಕಾರ ವಹಿಸಿಕೊಂಡ ಆರು ತಿಂಗಳ ಅವಧಿಯಲ್ಲಿ ಎಷ್ಟು ಬಾರಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೀರಿ?’ ಎಂಬುದೂ ಸೇರಿದಂತೆ ಆರು ಮಾಹಿತಿಗಳನ್ನು ಕೇಳಿದ್ದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರಿಗೆ ಉತ್ತರವನ್ನೇ ನೀಡದ 14 ಸಚಿವರ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ ನೋಟಿಸ್‌ ಜಾರಿಗೊಳಿಸಿದೆ.

ಯಾರಿಗೆ ನೋಟಿಸ್?
ಸಚಿವರಾದ ಟಿ.ಬಿ. ಜಯಚಂದ್ರ, ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ,  ಎಚ್‌.ಎಸ್‌. ಮಹದೇವ ಪ್ರಸಾದ್‌, ಆರ್‌.ವಿ. ದೇಶಪಾಂಡೆ, ದಿನೇಶ್‌ ಗುಂಡೂರಾವ್‌, ಶರಣಪ್ರಕಾಶ ಪಾಟೀಲ, ಪಿ.ಟಿ. ಪರಮೇಶ್ವರ ನಾಯ್ಕ, ಎಚ್‌.ಕೆ. ಪಾಟೀಲ, ಕಿಮ್ಮನೆ ರತ್ನಾಕರ, ಎಚ್‌. ಆಂಜನೇಯ, ಕೃಷ್ಣ ಬೈರೇಗೌಡ, ಉಮಾಶ್ರೀ, ಪ್ರಕಾಶ್‌ ಹುಕ್ಕೇರಿ ಅವರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ.

‘ಭೀಮಪ್ಪ ಅವರಿಗೆ ಅಗತ್ಯ ಮಾಹಿತಿ ನೀಡಿದ್ದರೆ ಅದಕ್ಕೆ ಪೂರಕವಾದ ದಾಖಲೆ­ಗಳನ್ನು ಬುಧವಾರ ನಡೆಯುವ ವಿಚಾರಣೆ ವೇಳೆ ಹಾಜರು­ಪಡಿಸಬೇಕು’ ಎಂದು ಆಯೋಗವು ಅಧಿಕಾರಿಗಳಿಗೆ ಸೂಚಿಸಿದೆ.

ಭೀಮಪ್ಪ ಅವರು ವಿವಿಧ ಸಚಿವರ ಕಚೇರಿಗೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿ, ‘ನಿಮ್ಮಲ್ಲಿ ಕಂಡುಬಂದಿರುವ ಪ್ರಮುಖ ಲೋಪದೋಷ ಏನು, ಅದನ್ನು ನಿವಾರಿಸಲು ಕ್ರಮ ಏನು, ಸಾರ್ವಜನಿಕ­ರಿಂದ ಎಷ್ಟು ಅಹವಾಲು ಸ್ವೀಕರಿಸ­ಲಾಗಿದೆ, ವಿಲೇವಾರಿ ಆದ ಅಹವಾಲು ಎಷ್ಟು, ಪಕ್ಷದ ಕಚೇರಿಯಲ್ಲಿ ಎಷ್ಟು ಬಾರಿ ಅಹವಾಲು ಸ್ವೀಕರಿಸಲಾಗಿದೆ’ ಎಂಬ ಮಾಹಿತಿ ಕೋರಿದ್ದರು.

2013ರ ನವೆಂಬರ್‌ ತಿಂಗಳಲ್ಲೇ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಮಾಹಿತಿ ದೊರೆತಿಲ್ಲ ಎಂದು  ಭೀಮಪ್ಪ ಅವರು ಆಯೋಗಕ್ಕೆ ದೂರು ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT