ADVERTISEMENT

2018ಕ್ಕೆ ವಿಶ್ವದ ಅತಿ ದೊಡ್ಡ ಸೋಲಾರ್‌ ಪಾರ್ಕ್‌ ಪೂರ್ಣ

ಹೆಲಿಕಾಪ್ಟರ್‌ನಲ್ಲಿ 13 ಸಾವಿರ ಎಕರೆ ಸುತ್ತಾಟ ನಡೆಸಿದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2017, 19:30 IST
Last Updated 28 ಸೆಪ್ಟೆಂಬರ್ 2017, 19:30 IST
2018ಕ್ಕೆ ವಿಶ್ವದ ಅತಿ ದೊಡ್ಡ ಸೋಲಾರ್‌ ಪಾರ್ಕ್‌ ಪೂರ್ಣ
2018ಕ್ಕೆ ವಿಶ್ವದ ಅತಿ ದೊಡ್ಡ ಸೋಲಾರ್‌ ಪಾರ್ಕ್‌ ಪೂರ್ಣ   

ಪಾವಗಡ (ತುಮಕೂರು ಜಿಲ್ಲೆ): ತಾಲ್ಲೂಕಿನ ತಿರುಮಣಿಯಲ್ಲಿ 13 ಸಾವಿರ ಹೆಕ್ಟೇರ್‌ನಲ್ಲಿ ಆರಂಭಗೊಳ್ಳುತ್ತಿರುವ ವಿಶ್ವದ ಅತಿ ದೊಡ್ಡ ಸೋಲಾರ್‌ಪಾರ್ಕ್‌ನ ಕಾಮಗಾರಿ 2018ರ ಸೆಪ್ಟೆಂಬರ್‌ಗೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗುರುವಾರ ಹೆಲಿಕಾಪ್ಟರ್‌ ಮೂಲಕ ಕಾಮಗಾರಿಯ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಇಲ್ಲಿ 2000 ಮೆಗಾವಾಟ್‌ ವಿದ್ಯುತ್ ಉತ್ಪಾದನೆ ಮಾಡಲಾಗುವುದು. ಮೊದಲ ಹಂತದಲ್ಲಿ ಡಿಸೆಂಬರ್‌ ವೇಳೆಗೆ 600 ಮೆಗಾವಾಟ್‌ ವಿದ್ಯುತ್ ಉತ್ಪಾದಿಸಲಾಗುವುದು ಎಂದರು.

ಸೋಲಾರ್‌ ಪಾರ್ಕ್‌ನಿಂದಾಗಿ 4 ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ. ಇದಕ್ಕಾಗಿ ಸ್ಥಳೀಯರಿಗೆ ಅಗತ್ಯ ತರಬೇತಿ ನೀಡಲಾಗುವುದು. ಸೋಲಾರ್‌ ಬಿಡಿ ಭಾಗ ತಯಾರಿಸುವ ಘಟಕಗಳಿಗೂ ಅವಕಾಶ ನೀಡಲಾಗುವುದು. ಈ ಪ್ರದೇಶವನ್ನು ಪ್ರವಾಸೋದ್ಯಮ ಕೇಂದ್ರವಾಗಿಯೂ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಬಿಜೆಪಿ ಸರ್ಕಾರ ಛತ್ತೀಸ್‌ಗಡ, ಕಲ್ಬುರ್ಗಿಯಲ್ಲಿ ಥರ್ಮಲ್‌ ವಿದ್ಯುತ್ ಸ್ಥಾವರ ಮಾಡುವಲ್ಲಿ ವಿಫಲವಾಯಿತು. ನವೀಕರಿಸಬಹುದಾದ ವಿದ್ಯುತ್‌ ಉತ್ಪಾದನೆಯಲ್ಲೂ ಕೇಂದ್ರ ಸರ್ಕಾರ ವಿಫಲವಾಗಿದೆ’ ಎಂದು ದೂರಿದರು.

‘ರಾಜ್ಯದ 2 ಕೋಟಿ ಗ್ರಾಹಕರಿಗೆ ಉತ್ತಮ ಸೇವೆ ಕಲ್ಪಿಸಬೇಕು. ರಾಜ್ಯವನ್ನು ಕತ್ತಲು ಮುಕ್ತವಾಗಿಸಬೇಕು ಎಂಬ ಉದ್ದೇಶದಿಂದ ಸೋಲಾರ್ ಪಾರ್ಕ್‌ ಸ್ಥಾಪಿಸಲಾಗಿದೆ. ಸೋಲಾರ್‌ನಿಂದಲೇ ರಾಜ್ಯದಲ್ಲಿ 6000 ಮೆಗಾವಾಟ್‌ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

***
ಬಿಜೆಪಿಯವರು ಪುಕ್ಕಲರು

ರಾಜ್ಯದ ಬಿಜೆಪಿ ನಾಯಕರು ಪುಕ್ಕಲರು ಎಂದು ಸಿದ್ದರಾಮಯ್ಯ ಜರಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರ ಸಾಲ ಮನ್ನಾ ಮಾಡುವಂತೆ ಕೇಳಲು ರಾಜ್ಯದ ಬಿಜೆಪಿ ಮುಖಂಡರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕೆ ಒಮ್ಮೆ ಕರೆದುಕೊಂಡು ಹೋಗಿದ್ದೆ. ಪ್ರಧಾನಿ ಮುಂದೆ ಬಿಜೆಪಿ ಮುಖಂಡರು ತುಟಿಕ್‌ ಪಿಟಿಕ್‌ ಎನ್ನಲಿಲ್ಲ’ ಎಂದು ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.