ADVERTISEMENT

54,101 ಜನರಿಂದ ಪ್ರಾಣಾಯಾಮ, ಧ್ಯಾನ

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
54,101 ಜನರಿಂದ ಪ್ರಾಣಾಯಾಮ, ಧ್ಯಾನ
54,101 ಜನರಿಂದ ಪ್ರಾಣಾಯಾಮ, ಧ್ಯಾನ   

ಮೈಸೂರು: ಒಂದೇ ಕಡೆ ಏಕಕಾಲದಲ್ಲಿ 54,101 ಜನರಿಂದ ಸಾಮೂಹಿಕವಾಗಿ ಯೋಗ ಪ್ರದರ್ಶಿಸುವ ಮೂಲಕ ಗಿನ್ನಿಸ್‌ ದಾಖಲೆ ಪ್ರಯತ್ನಕ್ಕೆ ಸಾಂಸ್ಕೃತಿಕ ನಗರಿ ಸಾಕ್ಷಿಯಾಯಿತು. ಜಿಲ್ಲಾಡಳಿತವು ಬುಧವಾರ ಬೆಳಿಗ್ಗೆ ರೇಸ್‌ ಕೋರ್ಸ್‌ನಲ್ಲಿ ಈ ಯೋಗಾಸನ ಹಮ್ಮಿಕೊಂಡಿತ್ತು.
2015ರಲ್ಲಿ ನವದೆಹಲಿಯ ರಾಜಪಥ ರಸ್ತೆಯಲ್ಲಿ 35,985 ಯೋಗಪಟುಗಳನ್ನು ಸೇರಿಸಿದ್ದು ಇದುವರೆಗಿನ ಗಿನ್ನಿಸ್‌ ದಾಖಲೆ. 

ಶಂಖನಾದ ಹೊರಹೊಮ್ಮುತ್ತಿದ್ದಂತೆ ಪ್ರಾರ್ಥನೆ ಶುರುವಾಯಿತು. ಬಳಿಕ ಆರಂಭವಾಗಿದ್ದು ಆಸನಗಳ ಪರ್ವ. 4 ನಿಮಿಷ ದೇಹದ ಸ್ನಾಯು ಸಡಿಲಗೊಳಿ ಸುವ ವ್ಯಾಯಾಮ ನಡೆಸಿ 19 ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಇದಕ್ಕೆ 25 ನಿಮಿಷ ಹಿಡಿಯಿತು. ಬಳಿಕ 14 ನಿಮಿಷ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ ನಡೆಸಿದರು. ಶಾಂತಿ ಮಂತ್ರ ಪಠಣ ದೊಂದಿಗೆ ತೆರೆ ಬಿತ್ತು.

ನೂರೆಪ್ಪತ್ತು ಮಂದಿ ತರಬೇತು ದಾರರು ಮಾರ್ಗದರ್ಶನ ಹಾಗೂ ನೆರವು ನೀಡಿದರು. 600ಕ್ಕೂ ಅಧಿಕ ಪೊಲೀಸ ರನ್ನು ನಿಯೋಜಿಸಲಾಗಿತ್ತು. ಯೋಗ ಪ್ರದರ್ಶಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು.

ADVERTISEMENT

ಕೇಂದ್ರ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ, ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸಂಸದ ಪ್ರತಾಪಸಿಂಹ, ಶಾಸಕರಾದ ಎಂ.ಕೆ.ಸೋಮಶೇಖರ್‌, ಬಿ.ಎನ್‌.ವಿಜಯ ಕುಮಾರ್‌, ಜಿಲ್ಲಾಧಿಕಾರಿ ಡಿ.ರಂದೀಪ್‌, ಪೊಲೀಸ್‌ ಕಮಿಷನರ್‌ ಸುಬ್ರಮಣ್ಯೇಶ್ವರ ರಾವ್‌, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಯೋಗ ಪ್ರದರ್ಶಿಸಿದರು.

‘ಎರಡು ದಿನಗಳಲ್ಲಿ ದಾಖಲೆಗೆ ಸಂಬಂಧಿಸಿದ ವರದಿಯನ್ನು ಗಿನ್ನಿಸ್‌ ಸಂಸ್ಥೆಗೆ ಸಲ್ಲಿಸುತ್ತೇನೆ. ತಾಂತ್ರಿಕ ಅಂಶ ಗಳನ್ನು ಪರಿಶೀಲಿಸಿ ದಾಖಲೆಗೆ ಪರಿಗಣಿಸಲಾಗುತ್ತದೆ’ ಎಂದು ಗಿನ್ನಿಸ್‌ ದಾಖಲೆ ಸಲಹೆಗಾರ್ತಿ ಶೈಲಜಾ ಶ್ರೀಕಾಂತ್‌ ಹೇಳಿದರು.  ಮೂರು ದಿನಗಳ ಹಿಂದೆಯಷ್ಟೇ ಅರ ಮನೆ ಆವರಣದಲ್ಲಿ ಅತಿ ಉದ್ದದ ಯೋಗ ಸರಪಳಿ ರಚಿಸಲಾಗಿತ್ತು. ಇದರಲ್ಲಿ 8,381  ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

‘ವಿಶ್ವ ದಾಖಲೆ’
ವಿಶ್ವ ಯೋಗ ದಿನದ ಅಂಗವಾಗಿ ಬುಧವಾರ ಅಹಮದಾಬಾದ್‌ನಲ್ಲಿರುವ ಗುಜರಾತ್ ಖನಿಜ ಅಭಿವೃದ್ಧಿ ನಿಗಮದ ಮೈದಾನದಲ್ಲಿ ನಡೆದ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.
ಕಾರ್ಯಕ್ರಮ ಮುಗಿದ ನಂತರ ಮಾತನಾಡಿದ ಯೋಗ ಗುರು ಬಾಬಾ ರಾಮ್‌ದೇವ್, ‘ಇದು ನನ್ನ ಜೀವನದ ಅತ್ಯಂತ ಪ್ರಮುಖ ದಿನ. ಒಂದೇ ಸ್ಥಳದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನ ಯೋಗಾಸನಗಳನ್ನು ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದೇವೆ’ ಎಂದರು.

ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮೈಸೂರಿನ ಈ ಸಾಧನೆ ಕುರಿತು ಮಾಹಿತಿ ನೀಡುತ್ತೇನೆ. ಕೇಂದ್ರದಿಂದ ಖರ್ಚು ಭರಿಸಲು ಪ್ರಯತ್ನಿಸುತ್ತೇನೆ
ಡಿ.ವಿ.ಸದಾನಂದಗೌಡ ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.