ADVERTISEMENT

ಗುಹಾ ಸೇರಿ ಮೂವರಿಂದ ವಿಶೇಷ ಉಪನ್ಯಾಸ

ಜನವರಿ 19ರಿಂದ 21ರವರೆಗೆ ನಡೆಯಲಿರುವ ಧಾರವಾಡ ಸಾಹಿತ್ಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 19:30 IST
Last Updated 16 ಜನವರಿ 2018, 19:30 IST
ಧಾರವಾಡ ಸಾಹಿತ್ಯ ಸಂಭ್ರಮ ಲಾಂಛನ
ಧಾರವಾಡ ಸಾಹಿತ್ಯ ಸಂಭ್ರಮ ಲಾಂಛನ   

ಧಾರವಾಡ: ಇತಿಹಾಸ ತಜ್ಞ ರಾಮಚಂದ್ರ ಗುಹಾ, ಭಾಷಾ ತಜ್ಞ ಡಾ. ಗಣೇಶ ಎನ್.ದೇವಿ ಹಾಗೂ ವನ್ಯಜೀವಿ ತಜ್ಞ ಉಲ್ಲಾಸ ಕಾರಂತ ಅವರ ವಿಶೇಷ ಉಪನ್ಯಾಸ ಈ ಬಾರಿಯ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಇರುತ್ತದೆ.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ, ಪ್ರಜಾವಾಣಿ, ಕರ್ನಾಟಕ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಇದೇ 19ರಿಂದ 21ರವರೆಗೆ 6ನೇ ಆವೃತ್ತಿಯ ಸಾಹಿತ್ಯ ಸಂಭ್ರಮ ನಡೆಯಲಿದೆ. ಈ ಬಾರಿಯೂ ಹೊಸತನ್ನು ಕೊಡುವ ಪ್ರಯತ್ನ ನಡೆದಿದೆ’ ಎಂದು ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷ ಡಾ. ಗಿರಡ್ಡಿ ಗೋವಿಂದರಾಜ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಎಲ್ಲಾ ರೀತಿಯ ವಿಚಾರಗಳ ಅಭಿವ್ಯಕ್ತಿಗೂ ಅವಕಾಶವಿದೆ. ಭಿನ್ನ ಸಿದ್ಧಾಂತಗಳ ಜನ ಸೇರಿ ಮುಕ್ತ ಪರಿಸರದಲ್ಲಿ ವಿಷಯ ಚರ್ಚಿಸುತ್ತಾರೆ. ವಿವಿಧ ಸಿದ್ಧಾಂತಗಳ ನಡುವೆ ಸಂವಾದ ನಡೆಯಬೇಕು ಎಂಬುದೇ ಸಂಭ್ರಮದ ಉದ್ದೇಶ’ ಎಂದು ಅವರು ವಿವರಿಸಿದರು.

ADVERTISEMENT

‘ಡಾ. ಎಂ.ಎಂ.ಕಲಬುರ್ಗಿ ಅವರು ಆದಿಲ್‌ಶಾಹಿ ಸಾಹಿತ್ಯ ಹಾಗೂ ಅದನ್ನು ಕನ್ನಡಕ್ಕೆ ಅನುವಾದಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಇದರ ಹೊಣೆಯನ್ನು ಬಿಎಲ್‌ಡಿಇ ಸಂಸ್ಥೆಗೆ ವಹಿಸಿದ್ದರು. 18 ಸಂಪುಟಗಳು ಬಂದಿವೆ. ಹೀಗಾಗಿ ಈ ವಿಷಯ ಕುರಿತು ಒಂದು ಗೋಷ್ಠಿ ಆಯೋಜಿಸಲಾಗಿದೆ. ಅಭಿವೃದ್ಧಿಯ ಪ್ರವಾಹದಲ್ಲಿ ನಿಸರ್ಗ ಸಂರಕ್ಷಣೆ, ಇತಿಹಾಸ ಮತ್ತು ಅಂಧಾಭಿಮಾನ, ಕನ್ನಡ ರಂಗಭೂಮಿ ಪರಂಪರೆ, ಸಾಹಿತ್ಯ ಕೃತಿಗಳ ಮರು ಓದು, ಕವಿ ಗೋಪಾಲಕೃಷ್ಣ ಅಡಿಗರ ಶತಮಾನೋತ್ಸವದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಇತ್ಯಾದಿ ಹೊಸತುಗಳನ್ನು ಈ ಬಾರಿಯ ಸಂಭ್ರಮ ಒಳಗೊಂಡಿದೆ’ ಎಂದು ತಿಳಿಸಿದರು.

‘ಬೆಳಗಲ್ಲು ವೀರಣ್ಣ ತಂಡದವರಿಂದ ತೊಗಲು ಬೊಂಬೆಯಾಟ, ಉಸ್ತಾದ್ ಫಯಾಜ್ ಖಾನ್ ಅವರಿಂದ ಶಾಸ್ತ್ರೀಯ ಸಂಗೀತ, ‘ಹರಿವು’ ಚಲನಚಿತ್ರದ ಪ್ರದರ್ಶನ ಇರುತ್ತದೆ. ಪುಸ್ತಕ ಹಾಗೂ ಕೈಮಗ್ಗ ಉತ್ಪನ್ನಗಳ ಮಳಿಗೆಗಳೂ ಇರಲಿವೆ. ಕನ್ನಡದ ಆಯ್ದ ಪ್ರಸಿದ್ಧ ಸಾಹಿತಿಗಳ ಹಸ್ತಪ್ರತಿ, ಭಾವಚಿತ್ರ ‘ಕನ್ನಡ ಸಾಹಿತ್ಯ ಕಣಜ’ದ ಪ್ರದರ್ಶನವನ್ನು ಜಿ.ಬಿ.ಜೋಶಿ ಸ್ಮಾರಕ ಟ್ರಸ್ಟ್‌ ಆಯೋಜಿಸಿದೆ’ ಎಂದು ಅವರು ವಿವರಿಸಿದರು.

‘ಈ ಬಾರಿ ಓ.ಎಲ್‌.ನಾಗಭೂಷಣ, ವಿವೇಕ ಶಾನಭಾಗ, ಕೃಷ್ಣ ಕೊಲ್ಹಾರ ಕುಲಕರ್ಣಿ, ಜಯಂತ ಕಾಯ್ಕಿಣಿ, ಗಿರೀಶ ಕಾರ್ನಾಡ, ಎಚ್‌.ಎಸ್‌.ವೆಂಕಟೇಶಮೂರ್ತಿ, ಯೋಗರಾಜ ಭಟ್‌, ನಾಗೇಶ ಹೆಗಡೆ, ಪೃಥ್ವಿದತ್ತ ಚಂದ್ರಶೋಭಿ, ಮೋಹನ ಆಳ್ವಾ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದ ವಿವಿಧ ಭಾಗಗಳಿಂದ 200 ಸಾಹಿತಿಗಳು ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ಡಾ. ಗಿರಡ್ಡಿ ತಿಳಿಸಿದರು.

‘ಸಂಭ್ರಮಕ್ಕೆ ಈಗಾಗಲೇ ಹೆಸರು ನೋಂದಾಯಿಸಿಕೊಂಡ 300 ಜನರಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಅವಕಾಶ ಸಿಗದವರಿಗೆ ಕಾರ್ಯಕ್ರಮ ವೀಕ್ಷಿಸಲು ಆವರಣದ ಹೊರಭಾಗದಲ್ಲಿ 400 ಆಸನ ವ್ಯವಸ್ಥೆ ಮಾಡಲಾಗುವುದು. ಇಲ್ಲಿ ಬೃಹತ್ ಎಲ್‌ಇಡಿ ಪರದೆಯಲ್ಲಿ ಕಾರ್ಯಕ್ರಮ ಮೂಡಿಬರಲಿದೆ. ಹಾಗೆಯೇ ವಿವಿಡ್‌ ಲಿಪಿ ಅಂತರಜಾಲ ತಾಣದ ಮೂಲಕವೂ ವಿಶ್ವದ ಯಾವುದೇ ಮೂಲೆಯಿಂದ ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ. ಕಳೆದ ಬಾರಿ 52 ಸಾವಿರ ಜನ ಈ ತಾಣಕ್ಕೆ ಭೇಟಿ ನೀಡಿದ್ದರು. ದೇಶ, ವಿದೇಶದಲ್ಲಿರುವ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿನ ಸಾಹಿತ್ಯಾಭಿಮಾನಿಗಳು ಇದರ ಉಪಯೋಗ ಪಡೆಯುವ ವಿಶ್ವಾಸವಿದೆ. ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆ ತನ್ನ ಸಭಾಭವನದಲ್ಲಿ ಸಂಭ್ರಮದ ಕಾರ್ಯಕ್ರಮಗಳ ನೇರ ಪ್ರಸಾರ ಮಾಡುತ್ತಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಿದೆ’ ಎಂದು ತಿಳಿಸಿದರು.

‘ಸೂಕ್ತ ದಾಖಲೆಗಳ ಸಹಿತ ಅರ್ಜಿ ಹಾಕಿದ್ದರೂ ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಅಗತ್ಯವಿರುವ ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುತ್ತಿಲ್ಲ. ಕಳೆದ ಬಾರಿ ₹15 ಲಕ್ಷ ನೀಡುವ ಭರವಸೆ ಕೊಟ್ಟಿದ್ದರು. ಆದರೆ ಅಂತಿಮವಾಗಿ ₹10 ಲಕ್ಷ ಮಾತ್ರ ಕೊಟ್ಟರು. ಹೀಗಾಗಿ ₹6.5 ಲಕ್ಷ ಹೊರೆ ಬಿತ್ತು’ ಎಂದು ಡಾ. ಗಿರಡ್ಡಿ ಗೋವಿಂದರಾಜ ಹೇಳಿದರು.

‘ಸಂಭ್ರಮದಲ್ಲಿಯೂ ಕನ್ನಡದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರ ಕುರಿತ ಚರ್ಚೆ ನಡೆಯುತ್ತದೆ. ಇದಕ್ಕೆ ಎಷ್ಟು ಹಣ ನೀಡುತ್ತಾರೆ ಎಂಬುದನ್ನು ಮೊದಲೇ ಸ್ಪಷ್ಟಪಡಿಸಿದರೆ, ಉಳಿದ ಹಣವನ್ನು ಬೇರೆ ಮೂಲಗಳಿಂದ ಸಂಗ್ರಹಿಸಲು ಅನುಕೂಲವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.