ADVERTISEMENT

‘ಪಶ್ಚಿಮವಾಹಿನಿ ಯೋಜನಾ ಕಾಮಗಾರಿ ಮಾರ್ಚ್‌ನಲ್ಲಿ’

ವಿಧಾನ ಪರಿಷತ್‌ನಲ್ಲಿ ಸಚಿವ ಟಿ.ಬಿ. ಜಯಚಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 19:30 IST
Last Updated 21 ಫೆಬ್ರುವರಿ 2018, 19:30 IST

ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ನೀರು ಪೂರೈಸಲು ಕಿಂಡಿ ಅಣೆಕಟ್ಟುಗಳಲ್ಲಿ ನೀರು ಸಂಗ್ರಹಿಸುವ ₹1,394 ಕೋಟಿ ಮೊತ್ತದ ‘ಪಶ್ಚಿಮ ವಾಹಿನಿ ಯೋಜನೆ’ಯ ಕಾಮಗಾರಿಗಳನ್ನು ಮಾರ್ಚ್‌ ಮೊದಲ ವಾರ ಆರಂಭಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ಬುಧವಾರ ತಿಳಿಸಿದರು.

ವಿಧಾನ ಪರಿಷತ್‌ ಪ್ರಶ್ನೋತ್ತರ ಅವಧಿಯಲ್ಲಿ ಸರ್ಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ನದಿಗಳ ನೀರು ಸಂಗ್ರಹಿಸಿಡುವ ಜತೆಗೆ ಉಪ್ಪು ನೀರು ತಡೆಯಲು ಕಿಂಡಿ ಅಣೆಕಟ್ಟು ನಿರ್ಮಿಸುವ ಬೇಡಿಕೆ ಇತ್ತು. ಹಾಗಾಗಿ ಪಶ್ಚಿಮವಾಹಿನಿ ಯೋಜನೆಯನ್ನು 2017–18ರ ಬಜೆಟ್‌ನಲ್ಲೇ ಘೋಷಿಸಿದ್ದೆವು. ಇದಕ್ಕೆ ₹100 ಕೋಟಿ ಅನುದಾನ ಮಾತ್ರ ಇಡಲಾಗಿತ್ತು. ಮೂರು ಜಿಲ್ಲೆಗಳಿಗೆ ಇಷ್ಟು ಅನುದಾನ ಸಾಕಾಗುವುದಿಲ್ಲವೆಂದು ಮುಖ್ಯಮಂತ್ರಿ ಒಪ್ಪಿಗೆ ಪಡೆದು ₹200 ಕೋಟಿಗೆ ಹೆಚ್ಚಿಸಿದ್ದೇವೆ ಎಂದರು.

ADVERTISEMENT

ಈ ಯೋಜನೆಗೆ ಸಮಗ್ರ ಯೋಜನಾ ವರದಿ(ಡಿಪಿಆರ್‌) ತಯಾರಿಸಲು ತಾಂತ್ರಿಕ ತಜ್ಞರನ್ನು ನೇಮಿಸಲಾಗಿತ್ತು. ಅವರ ವರದಿಯಂತೆ ಪಶ್ಚಿಮವಾಹಿನಿ ಯೋಜನೆಯನ್ನು ಸರ್ಕಾರ ಒಪ್ಪಿಕೊಂಡಿದೆ. ಡಿಪಿಆರ್‌ ಕೂಡ ಸಿದ್ಧವಾಗಿದೆ. ಇದಕ್ಕೆ ಮೊದಲ ಹಂತವಾಗಿ ಈ ಸಾಲಿನಲ್ಲಿ ₹200 ಕೋಟಿ ನೀಡಲಾಗುವುದು. ಎರಡನೇ ಹಂತದಲ್ಲಿ ₹611 ಕೋಟಿ ಹಾಗೂ ಮೂರನೇ ಹಂತದಲ್ಲಿ ₹583 ಕೋಟಿ ವೆಚ್ಚ ಮಾಡಲಾಗುವುದು ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ 29 ಕಾಮಗಾರಿಗಳಿಗೆ ₹56 ಕೋಟಿ, ಉಡುಪಿ ಜಿಲ್ಲೆಯಲ್ಲಿ 14 ಕಾಮಗಾರಿಗಳಿಗೆ ₹52 ಕೋಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ 10 ಕಾಮಗಾರಿಗೆ ₹91 ಕೋಟಿ ವಿನಿಯೋಗಿಸುತ್ತಿದ್ದೇವೆ. ಯೋಜನೆ ಪೂರ್ಣಗೊಂಡರೆ ಮೂರು ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.