ADVERTISEMENT

ಗೌರಿ ಬಿದನೂರು: ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ; ಕಾಂಗ್ರೆಸ್ ಕಾರ್ಯಕರ್ತನ ಕೈ ತುಂಡು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 17:11 IST
Last Updated 22 ಫೆಬ್ರುವರಿ 2018, 17:11 IST
ಗೌರಿ ಬಿದನೂರು: ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ; ಕಾಂಗ್ರೆಸ್ ಕಾರ್ಯಕರ್ತನ ಕೈ ತುಂಡು
ಗೌರಿ ಬಿದನೂರು: ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ; ಕಾಂಗ್ರೆಸ್ ಕಾರ್ಯಕರ್ತನ ಕೈ ತುಂಡು   

ಗೌರಿಬಿದನೂರು: ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿ ಪುರ ಪಂಚಾಯಿತಿ ವ್ಯಾಪ್ತಿಯ ಆರ್ಕುಂದ ಗ್ರಾಮದಲ್ಲಿ ಗುರುವಾರ ರಾತ್ರಿ ಸೀರೆ ಹಂಚುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಎಸ್.ರವಿಕುಮಾರ್  ಕೈ ತುಂಡರಿಸಲಾಗಿದೆ.

ಈ ಜೆಡಿಎಸ್ ಕಾರ್ಯಕರ್ತ ಲೋಕೇಶ್ ಮಚ್ಚಿನಿಂದ ಹಲ್ಲೆ ನಡೆಸಿದ ವ್ಯಕ್ತಿ.  ಗಾಯಗೊಂಡ ಎಸ್.ರವಿಕುಮಾರ್ ಅವರು ಸದ್ಯ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.  

ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅವರ ಸಾಯಿಕೃಷ್ಣ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ‘ಸಂಕ್ರಾಂತಿ ಸುಗ್ಗಿ’ ಕಾರ್ಯಕ್ರಮ ಅಂಗವಾಗಿ ಸಂಜೆ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀನಿವಾಸರೆಡ್ಡಿ, ದೇವರಾಜ್, ಎಸ್.ರವಿಕುಮಾರ್, ನಾರಾಯಣಸ್ವಾಮಿ ಸೇರಿದಂತೆ ಕೆಲವರು ಮನೆಮನೆಗೆ ಸೀರೆ ಹಂಚಿ ಬಂದು ರವಿಕುಮಾರ್ ಅವರ ಮನೆ ಎದುರು ಕುಳಿತಿದ್ದರು.

ADVERTISEMENT

ರವಿಕುಮಾರ್ ಅವರ ಮನೆ ಎದುರಿನಲ್ಲಿರುವ ಗೋವರ್ಧನ ಎಂಬುವರ ಕಿರಾಣಿ ಅಂಗಡಿ ಮುಂದೆ ನಿಂತಿದ್ದ ಜೆಡಿಎಸ್ ಕಾರ್ಯಕರ್ತರಾದ ರಮೇಶ್‌, ಗೋವರ್ಧನ, ಲೋಕೇಶ್, ನರಸಿಂಹಮೂರ್ತಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಗುಂಪುಗಳ ನಡುವೆ ಸೀರೆ ಹಂಚುತ್ತಿರುವ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಕಿರಾಣಿ ಅಂಗಡಿಯಲ್ಲಿದ್ದ ಮಚ್ಚು ಎತ್ತಿಕೊಂಡು ಬಂದ ಲೋಕೇಶ್, ಕಾಂಗ್ರೆಸ್ ಕಾರ್ಯಕರ್ತರ ಗುಂಪಿನ ಮೇಲೆ ಹಲ್ಲೆಗೆ ಮುಂದಾದಾಗ ಲೋಕೇಶ್‌ನಿಂದ ತಪ್ಪಿಸಿಕೊಳ್ಳಲು ರವಿಕುಮಾರ್ ಅವರು ಕೈ ಅಡ್ಡ ಹಿಡಿದಿದ್ದಾರೆ. ಆಗ ಬಿದ್ದ ಮಚ್ಚಿನೇಟಿಗೆ ಅವರ ಎಡಗೈ ಅರ್ಧಭಾಗ ತುಂಡಾಗಿದೆ.

ಆರೋಪಿಗಳಾದ ರಮೇಶ್‌, ಗೋವರ್ಧನ, ಲೋಕೇಶ್, ನರಸಿಂಹಮೂರ್ತಿ ಅವರು ತಲೆಮರೆಸಿಕೊಂಡಿದ್ದು, ಇವರ ವಿರುದ್ಧ ಮಂಚೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಗ್ರಾಮದಲ್ಲಿ  ಪ್ರಕ್ಷುಬ್ಧ ವಾತಾವರಣವಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

‘ಈ ಹಲ್ಲೆಗೆ ನಿಖರ ಕಾರಣ ಏನೆಂದು ಸದ್ಯ ತಿಳಿದು ಬಂದಿಲ್ಲ. ಆರೋಪಿ ಲೋಕೇಶ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರವಷ್ಟೇ ಹಲ್ಲೆಯ ಕಾರಣ ತಿಳಿದುಬರಲಿದೆ’ ಎಂದು ಎಸ್‌ಪಿ ಕಾರ್ತಿಕ್ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.